ನವದೆಹಲಿ: ಕೋವಿಡ್ 19 ಸೋಂಕಿನ ಭಯದ ನೆಪದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ (ಆಗಸ್ಟ್ 28, 2020) ಸ್ಪಷ್ಟಪಡಿಸಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಚುನಾವಣೆ ರದ್ದುಪಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.
ಚುನಾವಣೆಯನ್ನು ನಿಲ್ಲಿಸಲು ಕೋವಿಡ್ ಸೋಂಕು ಮುಖ್ಯ ಕಾರಣವಾಗಬಾರದು. ಅಲ್ಲದೇ ಚುನಾವಣಾ ಆಯೋಗದ ಅಧಿಕಾರದ ಬಗ್ಗೆ ಮಧ್ಯಪ್ರವೇಶಿಸಲ್ಲ. ಇನ್ನೂ ಚುನಾವಣಾ ದಿನಾಂಕವನ್ನೂ ಆಯೋಗ ಘೋಷಿಸಿಲ್ಲ, ನೋಟಿಫಿಕೇಶನ್ ಕೂಡಾ ಹೊರಡಿಸಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
“ಏನು ಮಾಡಬೇಕು ಎಂಬುದನ್ನು ಮುಖ್ಯ ಚುನಾವಣಾಧಿಕಾರಿಗೆ ಸುಪ್ರೀಂಕೋರ್ಟ್ ಹೇಳಲು ಆಗುವುದಿಲ್ಲ. ಅವರು (ಕೇಂದ್ರ ಚುನಾವಣಾಧಿಕಾರಿ) ಎಲ್ಲವನ್ನು ಪರಿಗಣಿಸಲಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.
“ಇದೊಂದು ಅವಸರದ ಹಾಗೂ ಅನುಮಾನದ” ಅರ್ಜಿಯಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಇನ್ನೂ ನೋಟಿಫಿಕೇಶನ್ ಅನ್ನು ಹೊರಡಿಸಿಲ್ಲ. ಈ ನಿಟ್ಟಿನಲ್ಲಿ ಚುನಾವಣೆ ನಡೆಸುವುದನ್ನು ನಿಲ್ಲಿಸಿ ಎಂದು ನಾವು(ಸುಪ್ರೀಂ) ಹೇಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಬಹುದಾಗಿದೆ. ಬಿಹಾರ ಚುನಾವಣೆ ಮುಂದೂಡಿಕೆ ಮಾಡಲು ಕೋವಿಡ್ ಸಮರ್ಪಕವಾದ ಕಾರಣವಲ್ಲ ಎಂದು ಸುಪ್ರೀಂ ಆದೇಶದಲ್ಲಿ ತಿಳಿಸಿದೆ.
“ಚುನಾವಣೆ ನಡೆಸುವ ಮುನ್ನ ಚುನಾವಣಾ ಆಯೋಗ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿದೆ ಮತ್ತು ಪ್ರತಿಯೊಂದನ್ನು ಪರಿಗಣಿಸಲಿದೆ ಎಂದು ಸುಪ್ರೀಂಕೋರ್ಟ್ ಅರ್ಜಿದಾರ ಅವಿನಾಶ್ ಠಾಕೂರ್ ಗೆ ತಿಳಿಸಿದೆ.