ಬೆಲ್ಗ್ರೇಡ್(ಸರ್ಬಿಯಾ): ಸರ್ಬಿಯಾದಲ್ಲಿ ಫುಟ್ಬಾಲಿಗರಿಗೆ ಸಾಮೂಹಿಕವಾಗಿ ಕೋವಿಡ್ ಅಂಟಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ರೆಡ್‌ಸ್ಟಾರ್ ಬೆಲ್ಗ್ರೇಡ್ ತಂಡದ ಐವರು ಆಟಗಾರರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ ಎಂದು “ಸರ್ಬಿಯನ್ ಸಾಕರ್ ಕ್ಲಬ್’ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಮಾರ್ಕೊ ಗೊಬೆಲ್ಜಿಕ್, ನಿಗೋಸ್ ಪೆಟ್ರೋವಿಕ್, ಡುಸಾನ್ ಜೊವಾನ್ಸಿಕ್, ಮಾರ್ಕೊ ಕೊನಾಟರ್ ಮತ್ತು ಬ್ರ್ಯಾಂಕೊ ಜೋವಿಸಿಕ್ ಅವರಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದು ಇನ್ನಷ್ಟು ಮಂದಿಗೆ ಹಬ್ಬುವ ಸಾಧ್ಯತೆ ಗೋಚರಿಸಿದೆ.
ಪ್ರೊಲೆಟರ್ ತಂಡದೆದುರು ನಡೆದ “ಸರ್ಬಿಯನ್ ಕಪ್’ ಫೈನಲ್ ಪಂದ್ಯದಿಂದ ಈ ಐವರು ಆಟಗಾರರು ಹೊರಗುಳಿದಿದ್ದರು. ಇದರಲ್ಲಿ ರೆಡ್‌ಸ್ಟಾರ್ ಜಯ ಸಾಧಿಸಿ ಪ್ರಶಸ್ತಿಯನ್ನೆತ್ತಿತ್ತು. ಆದರೆ ಪಾರ್ಟಿಝಾನ್ ಬೆಲ್ಗ್ರೇಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಇವರೆಲ್ಲ ಕಣಕ್ಕಿಳಿದದ್ದು ಆತಂಕಕ್ಕೆ ಕಾರಣವಾಗಿದೆ.
ಅಲ್ಲದೇ ಈ ಕೂಟದ ವೇಳೆ ವೀಕ್ಷಕರಿಗೆ ನಿರ್ಬಂಧ ಇರಲಿಲ್ಲ, ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರತೀ ಪಂದ್ಯಕ್ಕೂ ಸರಾಸರಿ 20 ಸಾವಿರದಷ್ಟು ಪ್ರೇಕ್ಷಕರ ಹಾಜರಾತಿ ಇತ್ತು. ಕೆಲವರಷ್ಟೇ ಮಾಸ್ಕ್ ಧರಿಸುತ್ತಿದ್ದರು.