ಮುಂಬಯಿ: ಕೊರೊನಾ ಹಾಟ್‌ಸ್ಪಾಟ್ ಆಗಿದ್ದ ಧಾರಾವಿಯಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸೋಮವಾರ ಮಾಹಿತಿ ನೀಡಿದೆ.
ಕಳೆದ ವರ್ಷ ಎಪ್ರಿಲ್‌ನಲ್ಲಿ ಕೊರೊನಾ ಮೊದಲ ಪ್ರಕರಣ ಪತ್ತೆಯಾದ ಬಳಿಕ ಧಾರಾವಿಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿ ಆರೋಗ್ಯ ವ್ಯವಸ್ಥೆಯನ್ನು ಒತ್ತಡದಲ್ಲಿ ಸಿಲುಕಿಸಿತ್ತು. ಏಷ್ಯಾದ ದೊಡ್ಡ ಕೊಳೆಗೇರಿಯ ಭಾಗವಾಗಿದ್ದರಿಂದ ಈ ಪ್ರದೇಶವನ್ನು ಕೊರೊನಾ ಹಾಟ್‌ಸ್ಪಾಟ್ ಎಂದು ಘೋಷಿಸಲಾಯಿತು.
ಈ ಪ್ರದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಮನಪಾ ನೌಕರರು, ಆರೋಗ್ಯ ವ್ಯವಸ್ಥೆ ಮತ್ತು ಎನ್‌ಜಿಒಗಳೊಂದಿಗೆ ಧಾರಾವಿ ನಿವಾಸಿಗರು ಬೆಂಬಲಿಸಿದ್ದರಿಂದ ಒಂದನೇ ಅಲೆಯನ್ನು ನಿಯಂತ್ರಿಸಲು ಯಶಸ್ವಿಯಾಯಿತು.ಎರಡನೇ ಅಲೆಯಲ್ಲಿ ಧಾರಾವಿ ಪರಿಸರದಲ್ಲಿ ಎ. 8ರಂದು ಒಂದೇ ದಿನದಲ್ಲಿ ಅತೀ ಹೆಚ್ಚು 99 ಕೊರೊನಾ ರೋಗಿಗಳು ಪತ್ತೆಯಾಗಿ ಮಹಾನಗರ ಪಾಲಿಕೆಯ ಕಳವಳ ವನ್ನು ಮತ್ತೆ ಹೆಚ್ಚಿಸಿತ್ತು. ಈ ವೇಳೆ ನಿರ್ಬಂಧ ವಿಧಿಸಿ ಕೊರೊನಾ ಹರಡದಂತೆ ತಡೆಯಲು ಅನೇಕ ರೀತಿಯ ಪ್ರಯತ್ನ ಗಳನ್ನು ಆಡಳಿತದ ವತಿಯಿಂದ ನಡೆಯಿತು.
ಇದರ ಪರಿ ಣಾಮ ಧಾರಾವಿಯು ಮತ್ತೂಮ್ಮೆ ಶೂನ್ಯ ಪ್ರಕರಣ ವನ್ನು ದಾಖಲಿಸಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.ಕಳೆದ ಮಂಗಳವಾರ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಧಾರಾವಿಯಲ್ಲಿ ಆರು ಹೊಸ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಅನಂತರ ಪ್ರಕರಣಗಳು ಕಡಿಮೆಯಾಗಿ ಒಂದರಿಂದ ಮೂರು ಪ್ರಕರಣ ಮಾತ್ರ ಪತ್ತೆಯಾಗಲಾರಂಭಿಸಿದವು ಎಂದು ಮುನ್ಸಿಪಲ್ ಕಾರ್ಪೊರೇಶನ್ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ.
ಸೋಮವಾರ ಯಾವುದೇ ಪ್ರಕರಣ ಕಂಡುಬಂದಿಲ್ಲವಾದ್ದರಿಂದ ಇದು ಸಮಾಧಾನಕರ ಸಂಗತಿಯಾಗಿದೆ. ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ಧಾರಾವಿಯಲ್ಲಿ ಯಾವುದೇ ಕೊರೊನಾ ರೋಗಿ ಕಂಡುಬಂದಿಲ್ಲ.ಅಧಿಕಾರಿಗಳ ಪ್ರಕಾರ ಧಾರಾವಿಯಲ್ಲಿ ಈ ವರೆಗೆ ಒಟ್ಟು ರೋಗಿಗಳ ಸಂಖ್ಯೆ 6,844ಕ್ಕೆ ತಲುಪಿದೆ. 6,465 ರೋಗಿಗಳು ಗುಣಮುಖರಾಗಿದ್ದಾರೆ. ಪ್ರಸ್ತುತ 20 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.