Advertisement

ಕೋವಿಡ್ ಪ್ರಕರಣ ಹೆಚ್ಚಳ : ಮಹಾರಾಷ್ಟ್ರ , ಕೇರಳದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

02:02 AM Feb 21, 2021 | Team Udayavani |

ಬೆಂಗಳೂರು: ನೆರೆಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

Advertisement

ಕೇರಳದಿಂದ ಬರುವವರಿಗೆ ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ. ಹಾಗೆಯೇ ಮಹಾರಾಷ್ಟ್ರದಿಂದ ಬರುವವರಿಗೂ ಇದನ್ನು ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಈ ಎರಡೂ ರಾಜ್ಯಗಳಿಂದ ಬರುವವರು 72 ತಾಸುಗಳಿಗೆ ಮೀರದ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರಬೇಕು.

ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿದ್ದು, ಮುಂಬಯಿಯಲ್ಲಿ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 350ರಿಂದ 645ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ 6,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಕಠಿನ ಕ್ರಮ ತೆಗೆದುಕೊಳ್ಳಲಾಗಿದೆ.

ವಿಮಾನ, ಬಸ್‌, ರೈಲು ಮತ್ತು ಖಾಸಗಿ ವಾಹನಗಳ ಮೂಲಕ ರಾಜ್ಯ ಪ್ರವೇಶಿಸುವವರು ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯವಾಗಿದೆ. ವಿಮಾನಯಾನ ಸಂಸ್ಥೆಗಳ ಸಿಬಂದಿ ಬೋರ್ಡಿಂಗ್‌ ಹಂತದಲ್ಲೇ ಇದನ್ನು ಖಾತರಿ ಪಡಿಸಿಕೊಳ್ಳಬೇಕು.

ಬಸ್‌ ಪ್ರಯಾಣಿಕರ ವರದಿ ಪರಿಶೀಲಿಸಿ ಖಾತರಿ ಬಳಿಕವಷ್ಟೇ ನಿರ್ವಾಹಕರು ಟಿಕೆಟ್‌ ನೀಡಬೇಕು. ಆನ್‌ಲೈನ್‌ನಲ್ಲಿ ಟಿಕೆಟ್‌ ಪಡೆದ ಪ್ರಯಾಣಿಕರು ಬಸ್‌ ಏರುವ ಮುನ್ನ ನಿರ್ವಾಹಕರು ಪರಿಶೀಲಿಸ ಬೇಕು. ರೈಲು ಪ್ರಯಾಣಿಕರ ವರದಿ ಪರಿಶೀಲನೆಗೂ ಸಿಬಂದಿ ಕ್ರಮ ಕೈಗೊಳ್ಳಬೇಕು. ಖಾಸಗಿ ವಾಹನಗಳಲ್ಲಿ ರಾಜ್ಯ ಪ್ರವೇಶಿಸುವ ವರ ವರದಿಗಳನ್ನು ಟೋಲ್‌ಗೇಟ್‌ ಬಳಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.

Advertisement

ವಿದ್ಯಾರ್ಥಿ, ಸಿಬಂದಿಗೂ ಟೆಸ್ಟ್‌ ಕಡ್ಡಾಯ
ಯಾವುದೇ ಹಾಸ್ಟೆಲ್‌, ವಸತಿ ಶಾಲೆ ಮತ್ತು ಶಾಲೆಗಳಲ್ಲಿ 5 ಮತ್ತು ಅದಕ್ಕಿಂತ ಹೆಚ್ಚು ಕೋವಿಡ್‌- 19 ಪ್ರಕರಣ ವರದಿಯಾದರೆ ಆ ಸ್ಥಳವನ್ನು “ಕಂಟೈನ್‌ಮೆಂಟ್‌ ವಲಯ’ ಎಂದು ಘೋಷಿಸಬೇಕು. 7 ದಿನಗಳ ಬಳಿಕ ವಿದ್ಯಾರ್ಥಿ, ಸಿಬಂದಿಗೆ ಪುನಃ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಬೇಕು. ಹಾಗೆಯೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ, ಸ್ಯಾನಿಟೈಸರ್‌ ಬಳಕೆ, ಸೋಂಕಿನ ಲಕ್ಷಣ ಹೊಂದಿರುವವರ ಮೇಲ್ವಿಚಾರಣೆ ಮತ್ತಿತರ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಕೋವಿಡ್‌ ತಡೆಯಲು ಕೆಲವು ಮುನ್ನೆಚ್ಚರಿಕೆ ಕ್ರಮ ಪಾಲನೆಗೆ ಶಿಫಾರಸು ಮಾಡಲಾಗಿದೆ. ಕಾಲೇಜು, ಶಾಲೆಗಳಲ್ಲಿ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಗಳಲ್ಲಿ ಕೋವಿಡ್‌ ಲಕ್ಷಣಗಳಿದ್ದರೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಖಾತರಿಗಾಗಿ ಸಂಸ್ಥೆಗಳು ನೋಡಲ್‌ ವ್ಯಕ್ತಿಯನ್ನು ನೇಮಿಸಬೇಕು.

ಲಾಕ್‌ ಡೌನ್‌ ಇಲ್ಲ
ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌, ಎರಡನೇ ಅಲೆ ಕಾಣಿಸಿಕೊಳ್ಳುತ್ತಿದೆ ಎಂಬ ಆಲೋಚನೆ ಮೂಡುತ್ತಿದೆ. ಹೀಗಾಗಿ ರಾಜ್ಯದ ಎಲ್ಲ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಹೆಚ್ಚಾಗಿಲ್ಲ. ಹಾಗಾಗಿ ಲಾಕ್‌ಡೌನ್‌, ಭಾಗಶಃ ಲಾಕ್‌ಡೌನ್‌ ಹೇರುವ ಸ್ಥಿತಿಯಿಲ್ಲ. ಹಾಗೆಂದು ನಿರ್ಲಕ್ಷ್ಯ ತೋರುವಂತಿಲ್ಲ. ಈಗಿರುವ ವ್ಯವಸ್ಥೆ ಮುಂದುವರಿಯಬೇಕೆಂದರೆ ಜನ ಸಹಕರಿಸಬೇಕು. ಸಿಎಂ ಮುಂದಿನ ವಾರ ಎಲ್ಲ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಚರ್ಚಿಸಲಿದ್ದಾರೆ ಎಂದು ವಿಧಾನಸೌಧದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಡಾ| ಸುಧಾಕರ್‌ ಹೇಳಿದರು.

ಮದುವೆ ಸಮಾರಂಭಕ್ಕೆ
500 ಮಂದಿಯ ಮಿತಿಯಿದೆ. ಹಾಗಿದ್ದರೂ ಸಾವಿರಾರು ಮಂದಿ ಎಗ್ಗಿಲ್ಲದೆ ಸೇರುತ್ತಿದ್ದಾರೆ. 500ಕ್ಕಿಂತ ಹೆಚ್ಚು ಮಂದಿ ಯಿರುವ ಮದುವೆ ಸಮಾರಂಭಕ್ಕೆ ನಾನು ಹೋಗುವುದಿಲ್ಲ.

– ಡಾ| ಕೆ. ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next