ಬೆಳಗಾವಿ: ಸಂಭವನೀಯ ಕೋವಿಡ್ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಶನಿವಾರ ರಾಜ್ಯದ ಗಡಿಭಾಗದಲ್ಲಿರುವ ಕೊಗನೊಳ್ಳಿ ರಾಷ್ಟ್ರೀಯ ಹೆದ್ದಾರಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ, ಕೋವಿಡ್ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿದರು.
ನೆರೆಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ವರದಿಯನ್ನು ಹೊಂದಿರುವವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಒಂದು ವೇಳೆ ಕರ್ನಾಟಕದ ನಿವಾಸಿಗಳು ಮಹಾರಾಷ್ಟ್ರದಿಂದ ಆಗಮಿಸಿದರೆ ಗಡಿಯಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿಯೇ ಅವರ ಮಾದರಿಯನ್ನು ಸಂಗ್ರಹಿಸಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಕಳುಹಿಸಬೇಕು. ವರದಿ ಬಂದ ತಕ್ಷಣವೇ ಸಂಬಂಧಿಸಿದ ವ್ಯಕ್ತಿಗಳಿಗೆ ಮಾಹಿತಿಯನ್ನು ನೀಡಬೇಕು. ನಂತರ ಅವರ ವರದಿಯನ್ನು ಅವರ ವಿಳಾಸಕ್ಕೆ ಕಳುಹಿಸಿಕೊಡಬೇಕು ಎಂದು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಆರೋಗ್ಯ ಇಲಾಖೆಯ ತಂಡಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರತಿಭಟನೆ, ಫಡ್ನವೀಸ್ ಸೇರಿ ಬಿಜೆಪಿ ಪ್ರತಿಭಟನಾಕಾರರು ವಶಕ್ಕೆ
ರಾಜ್ಯಕ್ಕೆ ಆಗಮಿಸುವ ಸ್ಥಳೀಯ ಪ್ರಯಾಣಿಕರ ಕೋವಿಡ್ ತಪಾಸಣೆಗೆ ಅನುಕೂಲವಾಗುವಂತೆ ಚೆಕ್ ಪೋಸ್ಟ್ ಬಳಿಯೇ ಕೋವಿಡ್ ತಪಾಸಣಾ ಕೇಂದ್ರವನ್ನು ಸ್ಥಾಪಿಸಿ, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಹೇಳಿದರು.
ಸಂಭವನೀಯ 3 ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಆದ್ದರಿಂದ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು.
ಸರಕಾರದ ಮಾರ್ಗಸೂಚಿ ಪ್ರಕಾರ ಅಂತರರಾಜ್ಯ ಪ್ರಯಾಣಿಕರಿಂದ ಸಮರ್ಪಕ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಚಿಕ್ಕೋಡಿಯ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಗಡೇದ, ನಿಪ್ಪಾಣಿ ತಹಶೀಲ್ದಾರ ಉಪಸ್ಥಿತರಿದ್ದರು.