ರಾಯಚೂರು: ಕೊರೊನಾ ವೈರಸ್ ಎರಡನೇ ಅಲೆ ಕೂಡ ಅನೇಕ ಬದುಕುಗಳನ್ನು ಮೂರಾಬಟ್ಟೆ ಮಾಡುತ್ತಿದೆ. ಕಳೆದ ವರ್ಷ ನಾನಾ ತಾಪತ್ರಯ ಎದುರಿಸಿದ್ದ ಫೋಟೋಗ್ರಾಫರ್‌ಗಳು ಈ ಬಾರಿಯೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಉಪಜೀವನಕ್ಕೆ ನಾನಾ ಕೆಲಸ ಮಾಡುವಂತಾಗಿದೆ.
ನಗರದಲ್ಲಿ ಕಳೆದ 30 ವರ್ಷದಿಂದ ಫೋಟೋಗ್ರಾಫರ್ ವೃತ್ತಿ ಮಾಡಿಕೊಂಡಿದ್ದ ಬಸವರಾಜ್ ಗೌಡ ಇಂದು ಕೆಲಸವಿಲ್ಲದೇ ಉಪಜೀವನಕ್ಕಾಗಿ ತರಕಾರಿ ಅಂಗಡಿ ಮಾಡಿಕೊಂಡಿದ್ದಾರೆ. ಬಹುತೇಕ ಮದುವೆ ಸಮಾರಂಭಗಳು ರದ್ದಾಗಿವೆ. ಇದರಿಂದ ಆದಾಯ ಇಲ್ಲದಾಗಿದೆ. ಕಳೆದ ವರ್ಷ ಲಾಕ್ ಡೌನ್ ಜಾರಿ ಮಾಡಿದಾಗಲೂ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಬಳಿಕ ವಾತಾವರಣ ತಿಳಿಯಾದ ಮತ್ತೆ ಫೋಟೋಗ್ರμ ವೃತ್ತಿ ಮುಂದುವರಿಸಿದ್ದರು.
ಈ ವರ್ಷ ಮದುವೆ ಸೀಜನ್ ವೇಳೆ ಒಂದಷ್ಟು ಹಣ ಬಂದರೆ ಕುಟುಂಬ ನಿರ್ವಹಣೆ ಮಾಡಬಹುದು ಎಂಬ ಆಶಾಭಾವದಲ್ಲಿದ್ದರೆ; ಕೊರೊನಾ ಎರಡನೇ ಅಲೆ ಮತ್ತೆ ಒಕ್ಕರಿಸಿ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾಗಿದೆ. ಹೀಗಾಗಿ ಮತ್ತೆ ತರಕಾರಿ ವ್ಯಾಪಾರವನ್ನೇ ನೆಚ್ಚಿಕೊಳ್ಳುವಂತಾಗಿದೆ.
ಸಮೀಪದ ಅಸ್ಕಿಹಾಳ ಬಳಿ ಬಸವರಾಜ್ ಫೋಟೋ ಸ್ಟುಡಿಯೋ ಆರಂಭಿಸಿದ್ದರು. ಆದರೆ, ಆದಾಯವೇ ಇಲ್ಲದಕ್ಕೆ ಅದಕ್ಕೂ ಬೀಗ ಬಿದ್ದಿದೆ. ಸರ್ಕಾರ ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಿದೆ. ಅಂಥ ಮದುವೆಗಳಿಗೆ ಫೋಟೋ ತೆಗೆಯಲು ಹೋದರೆ ಓಡಾಡಿದ ಖರ್ಚು ಕೂಡ ಬರುತ್ತಿಲ್ಲ.
ಇನ್ನೂ ಕರ್ಫ್ಯೂ ಇರುವ ಕಾರಣಕ್ಕೆ ಎಲ್ಲಿಗಾದರೂ ಹೋದರೆ ಪೊಲೀಸರು ಬಿಡುತ್ತಿಲ್ಲ. ಏನು ಮಾಡಬೇಕು ತೋಚದಾಗಿದೆ ಎನ್ನುತ್ತಾರೆ ಬಸವರಾಜ್.ಬೇರೆ ಕೆಲಸ ಮಾಡುವುದು ಗೊತ್ತಿಲ್ಲ. ಹಣ ಹೂಡಿ ಬೇರೆ ವ್ಯಾಪಾರ ಮಾಡಬೇಕೆಂದರೂ ಲಾಕ್‌ಡೌನ್ ಇರುವ ಕಾರಣಕ್ಕೆ ಸಮಸ್ಯೆಯಾಗಲಿದೆ ಎನ್ನುವುದು ಅವರ ನೋವು.