ಕೋವಿಡ್-19 ಬಳಿಕ ಡೆಲ್ಟಾ, ಡೆಲ್ಟಾ ಪ್ಲಸ್, ಒಮಿಕ್ರಾನ್ ಸಹಿತ ರೂಪಾಂತರಿಗಳ ಹಾವಳಿಗೆ ಮತ್ತೆ ಜಗತ್ತು ಕಕ್ಕಾಬಿಕ್ಕಿಯಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಕೋವಿಡ್ ಲಸಿಕೆ, ಪರೀಕ್ಷೆ ವಿಚಾರಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ವಿಚಾರಗಳಲ್ಲಿ ಜಗತ್ತಿಗೆ ವಿಶಿಷ್ಟವಾಗಿ ಗುರುತಿಸಿಕೊಂಡ ಉಡುಪಿ ಜಿಲ್ಲೆ ಕೋವಿಡ್ ಸಮುದಾಯ ಹೊಣೆಗಾರಿಕೆಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು. ಆದರೆ ಇಂದಿನ ವಾಸ್ತವ ಸ್ಥಿತಿ ಹಾಗಿಲ್ಲ, ಜನ ಸಮೂಹವೇ ಮಾಸ್ಕ್, ಸಾಮಾಜಿಕ ಅಂತರ ಪಾಲಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದರಿಂದ ಸರಕಾರಕ್ಕೇನೋ ಆದಾಯವಿದೆ. ಮುಂದಿನ ದಿನಗಳಲ್ಲಿ ಮತ್ತೆ ಕೊರೊನಾ ಸಂಖ್ಯೆ ಸ್ಫೋಟಗೊಂಡು ಲಾಕ್‌ಡೌನ್ ಅನಿವಾರ್ಯವಾದಲ್ಲಿ ನಷ್ಟ ಆಗುವುದು ಯಾರಿಗೆ ? ಇಡೀ ಜನ ಸಮೂಹ ಮತ್ತೂಮ್ಮೆ ತತ್ತರಿಸಿಹೋಗಬೇಕಾಗುತ್ತದೆ ಎಂಬ ಎಚ್ಚರಿಕೆ ಬೇಕು.
ಪ್ರತಿಯೊಂದಕ್ಕೂ ಆಡಳಿತ ವ್ಯವಸ್ಥೆ, ಕಾನೂನಿನ ಲೋಪದೋಷ, ಇಲಾಖೆಗಳ ನಿಯಮಾವಳಿಗಳನ್ನು ದೂರುತ್ತ ಕೂರುವುದರಲ್ಲಿ ಅರ್ಥವೇ ಇಲ್ಲ. ನಮ್ಮ ಜಿಲ್ಲೆಯನ್ನು ಕೋವಿಡ್‌ನಿಂದ ತಡೆಗಟ್ಟಬೇಕಾದಲ್ಲಿ ನಾವೇ ಒಂದಿಷ್ಟು ಕಟ್ಟುಪಾಡುಗಳನ್ನು ಅಳವಡಿಸಿಕೊಳ್ಳಬೇಕು. ಕಟ್ಟುನಿಟ್ಟಾಗಿ ಕಾನೂನು ಜಾರಿ ಮಾಡಿದರೂ ಜನರು ವ್ಯವಸ್ಥೆ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯೂ ಹೆಚ್ಚು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾಗೃತಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾನು, ನನ್ನವರಿಗೋಸ್ಕರ ಕೋವಿಡ್‌ನಿಂದ ರಕ್ಷಣೆಗಾಗಿ ನನ್ನ ನಿಲುವು ಬದ್ಧವಾಗಿರಬೇಕು ಎಂಬ ಹೊಣೆಗಾರಿಕೆ, ತಿಳಿವಳಿಕೆ ಮೂಡಬೇಕಾಗಿದೆ.
ಕಳೆದ ಬಾರಿ ಕೋವಿಡ್ ಲಾಕ್‌ಡೌನ್ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ವಿವಾಹ, ಶುಭ ಸಮಾರಂಭಗಳು ನಿಂತು ಹೋಗಿದ್ದು, ಪ್ರಸ್ತುತ ವರ್ಷ ಮದುವೆ ಸೀಸನ್ ಆರಂಭಗೊಂಡಿದೆ. ಗರಿಷ್ಠ ಸಂಖ್ಯೆಯಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯುತ್ತಿವೆ. ಯಾವ ಸಭಾಂಗಣದಲ್ಲಿ ಹೋಗಿ ನೋಡಿದರೂ ಮಾಸ್ಕ್ ಮಾತ್ರ ಕಾಣುತ್ತಿಲ್ಲ. ಕುಟುಂಬದ ಹಿರಿಯರೆನಿಸಿಕೊಂಡವರು ಮಗಳ, ಮಗನ ಮದುವೆಯಲ್ಲಿ ನೂರಾರು ಮಂದಿ ಆರೋಗ್ಯದ ಬಗ್ಗೆಯೂ ಯೋಚನೆ ಮಾಡಬೇಕು.
ಇನ್ನು ಪ್ರವಾಸಿ ತಾಣಗಳ ಸ್ಥಿತಿಯೂ ಭಿನ್ನವಾಗಿಲ್ಲ. ಹೊರ ಜಿಲ್ಲೆಗಳಿಂದ ಗರಿಷ್ಠ ಸಂಖ್ಯೆಯಲ್ಲಿ ಜಿಲ್ಲೆಗೆ ಜನರು ಬರುತ್ತಿದ್ದಾರೆ. ಆದರೆ ಎಲ್ಲಿಯೂ ಜನರು ಮಾಸ್ಕ್ ಧರಿಸುವುದು ಕಾಣಿಸುತ್ತಿಲ್ಲ. ಸರಕಾರಿ ಸಭೆ, ಸಮಾರಂಭ, ರಾಜಕೀಯ ಪಕ್ಷಗಳ ಸಭೆ, ವಿವಿಧ ಧರ್ಮಗಳ ಧಾರ್ಮಿಕ ಕಾರ್ಯಕ್ರಮ, ಚಿತ್ರಮಂದಿರ ಸಿನೆಮಾ ಪ್ರದರ್ಶನ ಗಳಲ್ಲಿ ಸರಕಾರಿ ಮತ್ತು ಖಾಸಗಿ ಕಚೇರಿಗಳು, ಸಮೂಹ ಸಾರಿಗೆಗಳಲ್ಲಿ ಸುಮಾರು ಶೇ.30 ಜನರು ಮಾತ್ರ ಮಾಸ್ಕ್ ಧರಿಸಿರುತ್ತಾರೆ.
ಸರಕಾರ ಕೋವಿಡ್ ನಿಯಂತ್ರಣದ ಹೆಸರಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿಗೆ ತಂದಿದೆ. ಸರಕಾರದ ದಂಡಾಸ್ತ್ರದ ಪರಿಣಾಮಕ್ಕಿಂತ ಜನ ಸಮೂಹವೇ ಒಂದಿಷ್ಟು ಪ್ರಬುದ್ಧರಾದಲ್ಲಿ ಕೋವಿಡ್ ಸಂಭಾವ್ಯ ಮೂರನೇ ಅಲೆಯಿಂದ ಪಾರಾಗ
ಬಹುದು. ಉಡುಪಿ ಜಿಲ್ಲೆಯ ಪಾಸಿಟಿವಿ ದರ ಕ್ರಮೇಣ ಇಳಿಕೆಯಾಗುತ್ತಿರುವ ಜತೆಗೆ ಅತ್ಯುತ್ತಮ ಪರೀಕ್ಷಾ ಮಟ್ಟ ಆಶಾದಾಯಕ ಬೆಳವಣಿಗೆಯಾಗಿದೆ. ಸಾರ್ವಜನಿಕ, ಪ್ರವಾಸಿ ಸ್ಥಳಗಳಲ್ಲಿ ಒಂದಿಷ್ಟು ಬಿಗಿ ನಿಯಮ ಜಾರಿಗೆ ತರುವ ಬಗ್ಗೆ ಜಿಲ್ಲಾಡಳಿತವು ಯೋಜನೆ ರೂಪಿಸಬೇಕಿದೆ.
–ಸಂ.