Advertisement

ಬೆಂಗಳೂರು ನಗರದ 23 ವರ್ಷದ ಯುವಕ ಕೋವಿಡ್ ಸೋಂಕಿಗೆ ಬಲಿ!

11:02 AM Jun 14, 2020 | keerthan |

ಬೆಂಗಳೂರು: ನಗರದಲ್ಲಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯಯೇ ಇದೇ ಮೊದಲ ಬಾರಿಗೆ 23 ವರ್ಷದ ಯುವಕರೊಬ್ಬರು ಸೋಂಕಿನಿಂದ ನಗರದಲ್ಲಿ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಕೋವಿಡ್-19 ಸೋಂಕಿನ ಲಕ್ಷಣಗಳು ಹಾಗೂ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಪಿ ನಗರದ 23 ವರ್ಷದ ಯುವಕನನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇವರು ಜ್ವರ, ವಾಂತಿ, ಭೇದಿಯಿಂದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಬೌರಿಂಗ್‍ನಲ್ಲಿ ಚಿಕಿತ್ಸೆ ನೀಡುವ ವೇಳೆ ಕೋವಿಡ್-19 ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ (ಜೂನ್.12)ಕ್ಕೆ ಮೃತಪಟ್ಟಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನುಸಾರ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿ ಪರಶುರಾಮ ತಿಳಿಸಿದ್ದಾರೆ.

ಭಯದಿಂದ ಹೃದಯಾಘಾತ ಸಾಧ್ಯತೆ: ಶಿವಾಜಿನಗರದಲ್ಲಿ ನೆಲೆಸಿದ್ದ ಯುವಕ ಅಲ್ಲಿ ಬಾಡಿಗೆ ಜಾಸ್ತಿ ನೀಡಬೇಕು ಎಂದು ಹದಿನೈದು ದಿನಗಳ ಹಿಂದಷ್ಟೇ ಜೆ.ಸಿ ನಗರಕ್ಕೆ ಮನೆ ಬದಲಾಯಿಸಿಕೊಂಡು ವಾಸವಾಗಿದ್ದರು. ಕೋವಿಡ್-19 ಸೋಂಕಿನ ಲಕ್ಷಣ, ಜ್ವರ, ವಾಂತಿ, ಭೇದಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕು ತಗುಲಿತು ಎಂದು ಆತಂಕಕ್ಕೆ ಒಳಗಾಗ ಹಿನ್ನೆಲೆಯಲ್ಲಿ ಹೃದಯಾಘಾತ ಸಂಭವಿಸಿರುವ ಸಾಧ್ಯತೆ ಇದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಇವರ ತಾಯಿ, ಅಣ್ಣ ಹಾಗೂ ಅಣ್ಣನ ಪತ್ನಿ ಸೇರಿ ಐವರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ, ಇವರ ದ್ವಿತೀಯ ಸಂರ್ಪಕಿತರನ್ನು ಪತ್ತೆ ಹಚ್ಚುವುದು ಕುಟುಂಬಸ್ಥರು ಸಹಕಾರ ನೀಡುತ್ತಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next