ಚಾಮರಾಜನಗರ: ಕೋವಿಡ್- 19 ಶಂಕಿತರ ಮಾದರಿಗಳನ್ನು ಟೆಸ್‌ಟ್ ಮಾಡುತ್ತಿದ್ದ ಪ್ರಯೋಗಾಲಯ ತಂತ್ರಜ್ಞರೋರ್ವರಿಗೇ (ಲ್ಯಾಬ್ ಟೆಕ್ನಿಷಿಯನ್) ಕೋವಿಡ್ 19 ಪಾಸಿಟಿವ್ ಬಂದಿರುವ ಪ್ರಕರಣ ನಗರದಲ್ಲಿ ನಡೆದಿದೆ!
ಅಲ್ಲದೇ ತಂತ್ರಜ್ಞೆಯ ಪತಿಗೂ ಸೋಂಕು ತಗುಲಿದೆ.ನಗರದ ಸರ್ಕಾರ ವೈದ್ಯಕೀಯ ಕಾಲೇಜು ಕಟ್ಟಡದಲ್ಲಿ ಕೋವಿಡ್ ತಪಾಸಣಾ (ಆರ್‌ಟಿಪಿಸಿಆರ್) ಪ್ರಯೋಗಾಲಯವನ್ನು ಕೆಲ ದಿನಗಳ ಹಿಂದಷ್ಟೇ ಆರಂಭಿಸಲಾಗಿದೆ. ಅಲ್ಲಿ ಶಂಕಿತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಮಾಡುತ್ತಿದ್ದ 29 ವರ್ಷದ ಪ್ರಯೋಗಾಲಯ ತಂತ್ರಜ್ಞೆಯೋರ್ವರಿಗೆ ಸೋಂಕು ದೃಢಪಟ್ಟಿದೆ.
ಅಲ್ಲದೇ, ನಗರದ ಜಿಲ್ಲಾಸ್ಪತ್ರೆಯ ಸಮೀಪದ ಫ್ಯಾನ್ಸಿ ಸ್ಟೋರ್ ಹೊಂದಿರುವ ಆಕೆಯ ಪತಿಗೂ (32ವರ್ಷ) ಸೋಂಕು ತಗುಲಿರುವುದು ದೃಢಪಟ್ಟಿದೆ.
ಪ್ರಯೋಗಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಇನ್ನುಳಿದ ಸಿಬ್ಬಂದಿಯನ್ನು ಪರೀಕ್ಷಿಸಿದಾಗ ನೆಗೆಟಿವ್ ಬಂದಿದೆ. ಪತ್ನಿಯಿಂದ ಪತಿಗೆ ಸೋಂಕು ತಗುಲಿದೆಯೋ ಅಥವಾ ಪತ್ನಿಯಿಂದ ಪತಿಗೆ ತಗುಲಿದೆಯೋ ಎಂದು ತನಿಖೆ ನಡೆಸಲಾಗುತ್ತಿದೆ.
ಕೋವಿಡ್ ಪ್ರಯೋಗಾಲಯವನ್ನು ಶನಿವಾರ ಸ್ಯಾನಿಟೈಸ್ ಮಾಡಿ ಮುಚ್ಚಲಾಗಿದೆ. ಸೋಂಕು ಕಾಣಿಸಿಕೊಂಡಿರುವುದರಿಂದ ಪ್ರಯೋಗಾಲಯದಲ್ಲಿ ಸದ್ಯಕ್ಕೆ ಕೋವಿಡ್ ಪರೀಕ್ಷೆ ನಡೆಸಲಾಗುವುದಿಲ್ಲ. ತಾತ್ಕಾಲಿಕವಾಗಿ ಮೈಸೂರಿಗೆ ಮಾದರಿಗಳನ್ನು ಕಳುಹಿಸಿ ಪರೀಕ್ಷೆ ಮಾಡಿಸಬೇಕಾಗುತ್ತದೆ.