ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಈಗ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ. ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಯ 24 ವರ್ಷದ ಯುವಕ (ರೋಗಿ ನಂಬರ್ 1186)ನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದ ಲಾತೂರ್‌ಗೆ ಕೃಷಿ ಕಾರ್ಮಿಕನಾಗಿ ತೆರಳಿದ್ದ ಯುವಕ ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆ ಊರಿಗೆ ಮರಳಲು ಸೊಲ್ಲಾಪುರಕ್ಕೆ ಆಗಮಿಸಿದ್ದಾನೆ. ಆದರೆ, ಲಾಕ್ ಡೌನ್ ಇದ್ದ ಕಾರಣಕ್ಕೆ ಒಂದೂವರೆ ತಿಂಗಳು ಸೊಲ್ಲಾಪುರದಲ್ಲೇ ಉಳಿಯುವಂತಾಗಿದೆ.
ಮೇ 9ರಂದು ಮೈಸೂರು, ಹೊಸನಗರ, ಕುಂದಾಪುರದ ಮೂವರೊಡಗೂಡಿ ಸೊಲ್ಲಾಪುರದಿಂದ ಹೊರಟು ವಿಜಯಪುರ, ಹುಬ್ಬಳ್ಳಿ ಮೂಲಕ ಹರಿಹರ ಬೈಪಾಸ್ ತಲುಪಿದ್ದಾನೆ. ಹರಿಹರ ಬೈಪಾಸ್‌ನಿಂದ ತಮ್ಮನೊಂದಿಗೆ ಬೈಕ್‌ನಲ್ಲಿ ಮಾದೇನಹಳ್ಳಿಗೆ ತೆರಳಿದ್ದಾನೆ. ವಿಷಯ ತಿಳಿದ ಗ್ರಾಮಸ್ಥರು ಗ್ರಾಮದ ಹೊರ ಭಾಗದಲ್ಲೇ ತಡೆದು, ಹೊನ್ನಾಳಿ ತಾಲೂಕು ಆಡಳಿತ, ಆರೋಗ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಯುವಕನನ್ನು ಸಾಂಸ್ಥಿಕ ಕಾರಂಟೈನ್ ಮಾಡಿದ್ದರು. ಮೇ 12ರಂದು ಆತನ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಭಾನುವಾರ ತಡರಾತ್ರಿ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ.
ಪ್ರಾಥಮಿಕ ಸಂಪರ್ಕದಲ್ಲಿದ್ದ ಆತನ ತಾಯಿ, ಸಹೋದರ, ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡಂತೆ 6 ಜನರನ್ನು ಐಸೋಲೇಷನ್ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್ ಒಳಗೊಂಡಂತೆ ಸಂಪೂರ್ಣ ರಕ್ಷಣಾ ಸಾಮಗ್ರಿಗಳೊಂದಿಗೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಯುವಕನನ್ನು ನೋಡಿಕೊಂಡಿದ್ದರೂ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಸಂಪರ್ಕದಲ್ಲಿದ್ದವರನ್ನ ಐಸೋಲೇಷನ್ ಮಾಡಲಾಗಿದೆ.