ಬಾಗಲಕೋಟೆ: ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನ ವ್ಯಕ್ತಿಯೊಬ್ಬರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಮುಂಬೈನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕನಾಗಿ ಆಗಿ ಕೆಲಸ ಮಾಡುತ್ತಿದ್ದ 33 ವರ್ಷದ ಪುರುಷ ಪಿ-1063, ಕಳೆದ ಮೇ 12ರಂದು ಸ್ವಂತ ಊರು ಕುಳಗೇರಿ ಕ್ರಾಸ್‌ಗೆ ಬಂದಿದ್ದ. ಅಂದಿನಿಂದಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೇ ವ್ಯಕ್ತಿಯ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದಿದೆ. ಸದ್ಯ ಆತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
111 ವರದಿ ನೆಗೆಟಿವ್: ಜಿಲ್ಲೆಯಿಂದ ಒಟ್ಟು 112 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 111 ಸ್ಯಾಂಪಲ್‌ಗಳ ವರದಿ ನೆಗೆಟಿವ್ ಬಂದಿದ್ದು, ಒಂದು ಮಾತ್ರ ಪಾಸಿಟಿವ್ ವರದಿಯಾಗಿದೆ. ಹೊಸದಾಗಿ 42 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 892 ಜನರನ್ನು ಪ್ರತ್ಯೇಕವಾಗಿ ನಿಗಾದಲ್ಲಿರಿಸಿದ್ದು, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1251 ಜನರಿದ್ದಾರೆ. ಇಲ್ಲಿಯವರೆಗೆ ಒಟ್ಟು 4725 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 4597 ನೆಗೆಟಿವ್, 71 ಪಾಸಿಟಿವ್ ಹಾಗೂ ಓರ್ವ ವ್ಯಕ್ತಿ ಮೃತಟ್ಟಿದ್ದಾರೆಂದು ಹೇಳಿದ್ದಾರೆ. ಕೋವಿಡ್-19 ಸೋಂಕಿನಿಂದ ಒಟ್ಟು 27 ಜನ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 43 ಜನ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಒಂಭತ್ತು ಕಂಟೇನ್ಮೆಂಟ್ ಝೋನ್‌ಗಳಿದ್ದು, ಮುಧೋಳ ತಾಲೂಕಿನ ಮುಗಳಖೋಡ ಗ್ರಾಮ, ಜಮಖಂಡಿಯ ಹಾಗೂ ಬಾಗಲಕೋಟೆಯ ಕಂಟೇನ್ಮೆಂಟ್ ಝೋನ್ ತೆರವುಗೊಳಿಸಲಾಗಿದೆ ಎಂದಿದ್ದಾರೆ. ಒಟ್ಟು ಒಂಭತ್ತು ಸ್ಯಾಂಪಲ್ ಮಾತ್ರ ರಿಜೆಕ್ಟ್ ಆಗಿದ್ದು, 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಿಂದ 288 ಜನರನ್ನು ಬಿಡುಗಡೆ ಮಾಡಿರುವುದಾಗಿ ಡಿಸಿ ತಿಳಿಸಿದ್ದಾರೆ.
ನವನಗರದ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಶನಿವಾರದಿಂದ ಕೋವಿಡ್ ಪರೀಕ್ಷೆ ಆರಂಭಿಸಲಾಗಿದೆ. ಕೋವಿಡ್ ಪರೀಕ್ಷೆ ಲ್ಯಾಬ್‌ನಲ್ಲಿ ಮೊದಲ ದಿನ 6 ಸ್ಯಾಂಪಲ್‌ಗಳ ಪರೀಕ್ಷೆ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿವೆ.
–ಡಾ| ಕೆ.ರಾಜೇಂದ್ರ, ಜಿಲ್ಲಾಧಿಕಾರಿ