Advertisement

ಕಂಪ್ಲಿಗೂ ಕಾಲಿಟ್ಟಿತು ಕೋವಿಡ್

11:37 AM May 12, 2020 | mahesh |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೂಂದು ಕೋವಿಡ್‌-19 ಪತ್ತೆಯಾಗಿದ್ದು, ಜಿಲ್ಲೆಯ ಕಂಪ್ಲಿ ತಾಲೂಕಿನ ಶಿಬಿರದಿನ್ನಿ ಮಾರುತಿನಗರದ ನಿವಾಸಿಯೊಬ್ಬರಲ್ಲಿ ಕೋವಿಡ್‌
-19 ಸೋಂಕು ಆವರಿಸಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 16ಕ್ಕೆ ಏರಿದಂತಾಗಿದೆ.

Advertisement

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕಳೆದೆರಡು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಬಂದಿದ್ದ ಕಂಪ್ಲಿಯ ಶಿಬಿರದಿನ್ನಿಯ ವಲಸೆ ಕಾರ್ಮಿಕ 28 ವರ್ಷದ ವ್ಯಕ್ತಿಗೆ ಮಹಾಮಾರಿ ಕೋವಿಡ್ ಸೋಂಕು ಆವರಿಸಿದ್ದು, ಈ ಕುರಿತು ಮೇ 12ರ ಮೀಡಿಯಾ ಬುಲೆಟಿನ್‌ನಲ್ಲಿ ಅ ಧಿಕೃತ ಘೋಷಣೆಯೊಂದೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸೋಂಕಿತನನ್ನು ಬಳ್ಳಾರಿಯ ಕೋವಿಡ್‌ (ಜಿಲ್ಲಾ) ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಅಲ್ಲದೇ, ಸೋಂಕಿತನೊಂದಿಗೆ ಸರ್ಕಾರಿ ಬಸ್‌ ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಬಂದಿದ್ದ ಸಹ ಪ್ರಯಾಣಿಕರನ್ನು ಸಹ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸೋಂಕಿತನಿಗೆ ತಾಯಿ, ಪತ್ನಿ, ಮಗು ಇದ್ದಾರೆ ಎಂದು ತಿಳಿದು ಬಂದಿದೆ. ಇವರ ಗಂಟಲು ದ್ರವವನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರಬೇಕಿದೆ ಅಷ್ಟೇ. ಸದ್ಯ ಇವರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತನು ಕಳೆದ ಮೇ 5 ರಂದು ಬೆಂಗಳೂರಿನಿಂದ ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಸರ್ಕಾರಿ ಬಸ್‌ನಲ್ಲಿ ಬಂದಿದ್ದು, ಅಲ್ಲಿಂದ ಆಟೋ ಮೂಲಕ ಕಂಪ್ಲಿ ಶಿಬಿರದಿನ್ನಿಯ ಮಾರುತಿ ನಗರಕ್ಕೆ ಬಂದಿದ್ದಾನೆ. ಗಂಗಾವತಿಯಲ್ಲಿ ಸೋಂಕಿತನನ್ನು ಇಳಿಸಿದ ಸರ್ಕಾರಿ ಬಸ್‌, ಅಲ್ಲಿಂದ ಮುಂದೆ ಕೊಪ್ಪಳಕ್ಕೆ ಹೋಗಿದೆ. ಅಲ್ಲದೇ, ಸೋಂಕಿತನೊಂದಿಗೆ
ಸರ್ಕಾರಿ ಬಸ್‌ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಬಂದಿದ್ದ 28 ಸಹ ಪ್ರಯಾಣಿಕರನ್ನು ಪ್ರೈಮರಿ ಕಾಂಟ್ಯಾಕ್ಟ್ ಎಂದು ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

16ಕ್ಕೇರಿದ ಪ್ರಕರಣಗಳ ಸಂಖ್ಯೆ: ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 15 ಪ್ರಕರಣಗಳಿದ್ದು, ಕಂಪ್ಲಿಯ 1 ಸೇರಿ 16ಕ್ಕೆ ಏರಿದಂತಾಗಿದೆ. ಹೊಸಪೇಟೆಯ ಒಂದೇ ಕುಟುಂಬದ 11 ಜನರ ಪೈಕಿ ಈಗಾಗಲೇ 10 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಜತೆಗೆ ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದ ವ್ಯಕ್ತಿ ಸಹ ಗುಣಮುಖರಾಗಿದ್ದಾರೆ. ಇದೀಗ
ಬಳ್ಳಾರಿ ಕೌಲ್‌ಬಜಾರ್‌ನ 1, ಸಂಡೂರು ತಾಲೂಕು ಕೃಷ್ಣನಗರ 1, ಸಿರುಗುಪ್ಪ ತಾಲೂಕು ಎಚ್‌.ಹೊಸಳ್ಳಿ 1, ಕಂಪ್ಲಿ 1, ಹೊಸಪೇಟೆ 1 ಸೇರಿ ಒಟ್ಟು 5 ಸಕ್ರಿಯ ಪ್ರಕರಣಗಳಾಗಿವೆ.

ಜನತೆಯಲ್ಲಿ ಹೆಚ್ಚಿದ ಆತಂಕ
ಕಂಪ್ಲಿ: ಪಟ್ಟಣದಲ್ಲಿ ಮಾರಕ ಶಿಬಿರದಿನ್ನಿ ಮಾರುತಿನಗರ ನಿವಾಸಿ 28 ವರ್ಷದ ವಲಸೆ ಕಾರ್ಮಿಕನಲ್ಲಿ ಸೋಂಕು ದೃಢ ಸೋಂಕು ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ
ಮೂಡಿಸಿದೆ. ಕಳೆದ ಹಲವು ದಿನಗಳಿಂದ ಪಟ್ಟಣದಲ್ಲಿ ಬೇರೆ ಊರುಗಳಿಂದ ಆಗಮಿಸಿದ ಸುಮಾರು 50ಕ್ಕೂ ಅಧಿಕ ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಜೊತೆಗೆ ಸೋಂಕಿನ ಲಕ್ಷಣಗಳು ಕಂಡು ಬಂದವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದರಲ್ಲಿ ಒಬ್ಬರದು ಪಾಸಿಟೀವ್‌ ಬಂದಿರುವುದು ದೃಢವಾಗಿದ್ದು, ಸೋಂಕಿತ ವ್ಯಕ್ತಿ
ವಾಸವಾಗಿರುವ ಪಟ್ಟಣದ ಶಿಬಿರದಿನ್ನೆ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯವನ್ನಾಗಿ ರೂಪಿಸುತ್ತಿದ್ದು, ಆರೋಗ್ಯ, ಪುರಸಭೆ, ಕಂದಾಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಈ ಪ್ರದೇಶಕ್ಕೆ ಒಳ ಬರುವ, ಹೊರ ಹೋಗುವ ಮಾರ್ಗ ಬಂದ್‌ ಮಾಡಲಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ ನಂತರ ಇನ್ನು ಹೆಚ್ಚಿನ ವಿವರಗಳು ತಿಳಿದು ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next