ಗಂಗಾವತಿ: ಬಳ್ಳಾರಿ ವಿಮ್ಸ್ ನಲ್ಲಿ ಭಾನುವಾರ ಮೃತ ಪಟ್ಟ ಜಂಗ್ಲಿ ರಂಗಾಪೂರ ಗ್ರಾಮದ 43 ವರ್ಷದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯಿಂದ ಆತನಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ.
ಈ ಹಿನ್ನಲೆಯಲ್ಲಿ ಜಂಗ್ಲಿ ರಂಗಾಪೂರ ಗ್ರಾಮಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಗ್ರಾಮವನ್ನು ಸೀಲ್ ಡೌನ್ ಮಾಡಿ ಕಂಟೋನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ.
ಗ್ರಾಮದ ಜನರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಿ ಮೃತ ವ್ಯಕ್ತಿಯ ಕುಟುಂಬ ಹಾಗೂ ಪ್ರಾಥಮಿಕ ದ್ವಿತೀಯ ಸಂಪರ್ಕಿತರ ಕುರಿತು ಮಾಹಿತಿ ಸಂಗ್ರಹಿಸಿದರು.
ಮೃತ ವ್ಯಕ್ತಿಯನ್ನು ಬಳ್ಳಾರಿ ವಿಮ್ಸ್ ಗೆ ದಾಖಲು ಮಾಡಲು ಬಳಸಿದ್ದ ಆನೆಗೊಂದಿ ಸರಕಾರಿ ಅಂಬುಲೆನ್ಸ್ ನ್ನು ಸ್ಯಾನಿಟೈಜರ್ ಮತ್ತು ಲವಣ ದ್ರಾವಣ ಮಿಶ್ರಿತ ನೀರಿನಿಂದ ಸ್ವಚ್ಚಗೊಳಿಸಲಾಗಿದೆ.
ಹಲವು ದಿನಗಳಿಂದ ಅನಾರೋಗ್ಯ: ಮೃತ ವ್ಯಕ್ತಿ ಹಲವು ದಿನಗಳಿಂದ ಲಿವರ್ ಸಮಸ್ಯೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬಳ್ಳಾರಿ ವಿಮ್ಸ್ ಗೆ ದಾಖಲಾಗಿದ್ದ ಈ ಸಂದರ್ಭದಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಭಾನುವಾರ ರಾತ್ರಿ ವ್ಯಕ್ತಿ ಮೃತಪಟ್ಟಿದ್ದು ಗ್ರಾಮದಲ್ಲಿ ಸೀಲ್ ಡೌನ್ ಹಾಕಲಾಗಿದೆ.