ಬೆಂಗಳೂರು: ಧಾರವಾಡ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಮತ್ತು ಕೇರಳದಲ್ಲೂ ಸೋಂಕು ಹೆಚ್ಚಳವಾಗುತ್ತಿರುವ ಬಗ್ಗೆ ಶೀಘ್ರದಲ್ಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಇವತ್ತು ಸಂಜೆ ಸಭೆ ನಡೆಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಆರೋಗ್ಯ, ಕೋವಿಡ್ ತಜ್ಞರು ಇರುತ್ತಾರೆ. ಹೊಸ ತಳಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಹೊಸ ತಳಿ ಸಂಬಂಧ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸ್ತೇವೆ. ಸಭೆಯಲ್ಲಿ ಚರ್ಚೆ ಬಳಿಕ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸುತ್ತೇವೆ ಎಂದರು.
ಕಲ್ಬುರ್ಗಿ ಆಯುಕ್ತ ಸ್ನೇಹಲ್ ಕಂಡೇಲ್ ವಿರುದ್ಧ ಯುವತಿ ದೂರು ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇದರ ಬಗ್ಗೆ ಕಚೇರಿಗೆ ಹೋಗಿ ಗಮನಿಸುತ್ತೇನೆ. ಯುವತಿ ದೂರು ಏನು ಎಂಬುದರ ಬಗ್ಗೆ ಗಮನಿಸುತ್ತೇನೆ ಎಂದರು.
ಇದನ್ನೂ ಓದಿ:ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ
ಸರ್ಕಾರದಲ್ಲಿ ಅನೇಕ ಕಡತಗಳ ವಿಲೇವಾರಿ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಕೆಲವು ಇಲಾಖೆಗಳಲ್ಲಿ ಕಡತಗಳು ವಿಲೇವಾರಿಯಾಗಿಲ್ಲ. ತಾಂತ್ರಿಕ ಮತ್ತು ಕಾನೂನಾತ್ಮಕ ಕಾರಣಗಳಿಂದ ಈ ಫೈಲ್ ಗಳು ನಿರ್ಣಯವಾಗಿಲ್ಲ. ಇವುಗಳ ಬಗ್ಗೆ ಈಗಾಗಲೇ ಒಂದು ಸಭೆ ನಡೆಸಿದ್ದೇನೆ. ಯಾವೆಲ್ಲ ಕಾನೂನು ತೊಡಕುಗಳಿವೆ, ತಾಂತ್ರಿಕ ತೊಡಕುಗಳಿವೆಯೆಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಪರಿಶೀಲಿಸಲು ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ್ದೇನೆ. ಕಾನೂನು ಇಲಾಖೆ, ಕಾನೂನು ಸಚಿವರಿಂದಲೂ ಅಭಿಪ್ರಾಯ ಕೇಳಿದ್ದೇನೆ ಎಂದರು.