ರಾಯಚೂರು: ಕೆಲ ದಿನಗಳ ಹಿಂದೆ ನಿತ್ಯ ನೂರರ ಗಡಿ ದಾಡುತ್ತಿದ್ದ ಕೋವಿಡ್ ಪಾಸಿಟಿವ್‌ಪ್ರಕರಣಗಳ ಸಂಖ್ಯೆ ಈಗ ಒಂದಂಕಿಗೆ ಬಂದುತಲುಪಿದೆ. ಶಂಕಿತರ ಪರೀಕ್ಷೆ ಯಥಾ ರೀತಿ ನಡೆದಿದ್ದರೂ ಸೋಂಕಿತರ ಸಂಖ್ಯೆ ದಿನೇ ದಿನೆ ಇಳಿಮುಖವಾಗುತ್ತಿರುವುದು ತುಸು ಸಮಾಧಾನ ತಂದಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 153 ತಲುಪಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇದು ಕಡಿಮೆಯಾದರೂ ಜಿಲ್ಲೆಯ ಜನರ ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ. ಜಿಲ್ಲೆಯ ಜನಪ್ರತಿನಿಧಿ ಗಳೇ ನಮಗೆ ಕೊರೊನಾ ಸೋಂಕು ತಗುಲಿದೆ ಎಂಬ ಹೇಳಿಕೆ ನೀಡಿದಾಗ; ಜನಸಾಮಾನ್ಯರ ಕತೆ ಏನು? ಎಂಬ ಚರ್ಚೆಯೂ ನಡೆಯುತ್ತಿತ್ತು. ಆದರೆ, ಈಗಿನ ಪರಿಸ್ಥಿತಿ ಅವಲೋಕಿಸುತ್ತಿದ್ದರೆ, ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಕೆಲ ದಿನಗಳಿಂದ ಸಾವಿನ ಸಂಖ್ಯೆಯಲ್ಲೂ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ, ಆರಂಭದಲ್ಲಿ ನಿತ್ಯ 3-4 ಸಾವು ಸಂಭವಿಸುತ್ತಿದ್ದು,ಈಗ ಕುಗ್ಗಿದೆ. ಒಂದೆರಡು ತಿಂಗಳ ಹಿಂದೆ ನಿತ್ಯ ಮೂರಂಕಿ ದಾಡುತ್ತಿದ್ದ ಸೋಂಕಿತರ ಸಂಖ್ಯೆ ಈಗ ಒಂದಂಕಿಗೆ ಬಂದಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಜಿಲ್ಲೆ ಸೋಂಕುಮುಕ್ತವಾದರೂ ಅಚ್ಚರಿಪಡಬೇಕಿಲ್ಲ.ಚಳಿಗಾಲ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಕೋವಿಡ್ ಸೋಂಕು ಹೆಚ್ಚಾಗಬಹುದೇ ಎಂಬ ಆತಂಕವೂ ಹೆಚ್ಚಾಗಿದೆ. ನೆಗಡಿಯಂಥ ಸಾಂಕ್ರಾಮಿಕ ಈಗ ಹೆಚ್ಚಾಗಿ ಹರಡುವ ಸಾಧ್ಯತೆಯಿದ್ದು, ಆತಂಕ ಹೆಚ್ಚಿಸಿರುವುದು ನಿಜ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಹೀಗಿದೆ ಕೋವಿಡ್ ಹಿನ್ನೆಲೆ: ಜಿಲ್ಲೆಗೆ ತಡವಾಗಿ ಪ್ರವೇಶಿಸಿದ ಕೋವಿಡ್ ಕ್ರಮೇಣ ಶರವೇಗದಲ್ಲಿ ಹರಡಿತು. ಅದರಲ್ಲೂ ಮುಂಬೈ ವಲಸಿಗರದಿಂದಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿತ್ಯ ದ್ವಿಶತಕ, ತ್ರಿಶತಕ ತಲುಪಿತು. ಜನರಲ್ಲೂ ಸೋಂಕಿನ ಭೀತಿ ಹೆಚ್ಚಿದಂತೆ ಮುನ್ನೆಚ್ಚರಿಕೆ ವಹಿಸಿದ್ದರಿಂದ ಪರಿಸ್ಥಿತಿ ತಹಬದಿಗೆ ಬಂತು. ಈವರೆಗೆ ಜಿಲ್ಲೆಯಲ್ಲಿ 13,474 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅದರಲ್ಲಿ 13,160 ಜನ ಸಂಪೂರ್ಣಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 1,68,204 ಜನರ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 1,52,869 ವರದಿ ನೆಗೆಟಿವ್ ಆಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜೀವನಕ್ರಮ ಬದಲು : ಆರಂಭದಲ್ಲಿ ಕೋವಿಡ್ ಬಗ್ಗೆ ಅಸಡ್ಡೆ ತೋರಿದ ಜನ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದಂತೆ ಎಚ್ಚರಿಕೆ ವಹಿಸಲಾರಂಭಿಸಿದರು. ಮಾಸ್ಕ್ ಧರಿಸದೆ ಹೊರ ಬರುವುದೇ ವಿರಳ ಎನ್ನುವಂತಾಯಿತು. ಮಾಸ್ಕ್ ಹಾಕದಿದ್ದರೆ ಪೊಲೀಸರು ದಂಡ ಹಾಕುತ್ತಾರೆ ಎನ್ನುವ ಭಯಕ್ಕಾದರೂ ಅನೇಕರು ಮಾಸ್ಕ್ ಹಾಕಿದರು. ದೇಹದ ಉಷ್ಣಾಂಶ ಹೆಚ್ಚಿಸುವಂಥ ಕಷಾಯ, ಪೇಯಗಳಿಗೆ ಜನ ಮೊರೆ ಹೋಗಿದ್ದು ವಿಶೇಷ. ಆಯುಷ್ ಇಲಾಖೆಯಲ್ಲಿ ನೀಡುವ ಕಷಾಯಚೂರ್ಣಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಗಮನಾರ್ಹ.
ಚಳಿಗಾಲದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ಕಾಲದಲ್ಲಿ ನೆಗಡಿ, ಕೆಮ್ಮು ಜ್ವರ ಹೆಚ್ಚಾಗುತ್ತದೆ. ಇದರಿಂದ ಸೋಂಕು ಕೂಡ ಹರಡಬಹುದು. ಮುಖ್ಯವಾಗಿ ಜನ ದೇಹದಲ್ಲಿ ಉಷ್ಣಾಂಶ ಹೆಚ್ಚಿಸುವಂಥ ಆಹಾರ ಸೇವನೆ ಮಾಡಬೇಕು. ಹೊರಗೆ ಅನಗತ್ಯ ಓಡಾಟ ಮಾಡದಿರುವುದೇ ಸೂಕ್ತ
. -ಡಾ| ರಾಮಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ, ರಾಯಚೂರು