ಬೀದರ: ನಗರದಲ್ಲಿ ಕೋವಿಡ್ ಸೋಂಕಿತರು ದಾಖಲಿರುವ ಬ್ರಿಮ್ಸ್ ಕೋವಿಡ್-19 ಆಸ್ಪತ್ರೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಗುರುವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಪಿಪಿಇ ಕಿಟ್ ಧರಿಸಿ, ವೈದ್ಯರ ತಂಡದೊಂದಿಗೆ ಆಸ್ಪತ್ರೆ ಪ್ರವೇಶಿಸಿದ ಡಿಸಿ, ಅಲ್ಲಿನ ಐಸಿಯು ವಾರ್ಡ್‌ಗಳಲ್ಲಿ ಸಂಚರಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಕೋವಿಡ್ ಆಸ್ಪತ್ರೆಯಲ್ಲಿ ಊಟ, ಉಪಹಾರ, ಚಿಕಿತ್ಸೆ ಮತ್ತು ಆರೈಕೆ ವ್ಯವಸ್ತೆ ಕುರಿತು ವಿಚಾರಿಸಿದರು. ಎಲ್ಲವೂ ಸರಿಯಾಗಿ ಸಿಗುತ್ತಿದೆ ಎಂದು ರೋಗಿಗಳು ಪ್ರತಿಕ್ರಿಯಿಸಿದರು.
ಕೋವಿಡ್ ಮತ್ತು ಕೋವಿಡ್ ಅಲ್ಲದವರು ಯಾರೆಂದು ಗುರುತಿಸಲು ಗಂಟಲು ದ್ರವದ ಮಾದರಿ ಕಳುಹಿಸಿದ ಕೂಡಲೇ ವರದಿ ಬರುವವರೆಗೆ ಅಂಥವರನ್ನು ವಿಂಗಡಣಾ ಘಟಕಗಳಲ್ಲಿ ದಾಖಲು ಮಾಡಲಾಗುತ್ತದೆ. ವರದಿ ಬಂದ ಕೂಡಲೇ ಕೋವಿಡ್ ಸೋಂಕಿತರನ್ನು ಕೋವಿಡ್-19 ನಿಗದಿತ ಆಸ್ಪತ್ರೆಯ ವಾರ್ಡ್‌ಗೆ ಕಳುಹಿಸಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ಡಿಸಿಗೆ ಮಾಹಿತಿ ನೀಡಿದರು.
ಇದಕ್ಕೂ ಮೊದಲು ಡಿಸಿ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಿ ಅಲ್ಲಿ ಇಡಲಾಗಿದ್ದ ಹಲವಾರು ವಹಿಗಳನ್ನು ಪರಿಶೀಲಿಸಿದರು. ಆಸ್ಪತ್ರೆಗೆ ಬರುವ ರೋಗಿಗಳನ್ನು ಇಲ್ಲಿ ಪರಿಶೀಲಿಸಿ ವಿಂಗಡಿಸಲಾಗುತ್ತದೆ. ಈ ವೇಳೆ ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಅಂಥ ರೋಗಿಗಳ ಗಂಟಲು ದ್ರವದ ಪರೀಕ್ಷೆಗೆ ಏರ್ಪಾಡು ಮಾಡಲಾಗುತ್ತದೆ ಎಂದು ವೈದ್ಯಾಧಿ ಕಾರಿಗಳು ಮಾಹಿತಿ ನೀಡಿದರು.
ಹೆಲ್ಪ್ ಡೆಸ್ಕ್ ಪರಿಶೀಲನೆ: ಹೆಲ್ಪ್ ಡೆಸ್ಕ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ರಕ್ತದ ಪರೀಕ್ಷೆ ಕಳುಹಿಸಿದ ಸಮಯ, ಕಳುಹಿಸಬೇಕಾದ ಸಮಯ, ರೋಗಿಗಳು ದಾಖಲು ಮತ್ತು ಬಿಡುಗಡೆ ವಿವರ ಸೇರಿದಂತೆ ಯಾವುದೇ ಮಾಹಿತಿಯು ಹೊರಗಿನಿಂದ ಒಳಗೆ, ಒಳಗಿನಿಂದ ಹೊರಗೆ ಹೋಗುವಾಗ ಈ ಹೆಲ್ಪ್ ಡೆಸ್ಕ್ನಲ್ಲಿ ದಾಖಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ರ್ಯಾಪಿಡ್ ಎಂಟಿಜೆನ್ ಟೆಸ್ಟಿಂಗ್ ಬಗ್ಗೆ ಕೂಡ ಮಾಹಿತಿ ಪಡೆದರು. ಬ್ರಿಮ್ಸ್ ನಿರ್ದೇಶಕ ಡಾ| ಶಿವಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ರತಿಕಾಂತ ಸ್ವಾಮಿ, ವೈದ್ಯಕೀಯ ಅಧಿಧೀಕ್ಷಕ ಡಾ| ವಿಜಯಕುಮಾರ ಅಂತಪ್ಪನವರ ಇದ್ದರು.
ಬ್ರಿಮ್ಸ್ ವ್ಯವಸ್ಥೆಗೆ ಮೆಚ್ಚುಗೆ : ಕೋವಿಡ್ ಸೋಂಕು ನಿಯಂತ್ರಣ ಕಾರ್ಯಾಚರಣೆಯಲ್ಲಿ ಬ್ರಿಮ್ಸ್ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲ ವೈದ್ಯಾಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿನ ರೋಗಿಗಳಿಗೆ ತಾವು ಖುದ್ದು ಭೇಟಿ ಮಾಡಿದ್ದು, ಚಿಕಿತ್ಸೆ ಮತ್ತು ಆರೈಕೆ ಉತ್ತಮವಾಗಿ ಸಿಗುತ್ತಿರುವುದಾಗಿ ಸೋಂಕಿತರು ಹೇಳಿದ್ದಾರೆ. ರೋಗಿಗಳ ಮೇಲೆ ತಾಯಿ ಪ್ರೀತಿ ತೋರುತ್ತ ಚಿಕಿತ್ಸೆ ನೀಡುತ್ತಿರುವ ಎಲ್ಲ ಆರೋಗ್ಯ ಸಿಬ್ಬಂದಿಗೆ ನಮನ ಸಲ್ಲಿಸುತ್ತೇನೆ. –
ಆರ್. ರಾಮಚಂದ್ರನ್, ಡಿಸಿ, ಬೀದರ.