Advertisement
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ನೀಡಿದ ಉಡುಪಿ ತಾಲೂಕಿನಲ್ಲಿ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಕಾರ್ಕಳ ತಾಲೂಕಿನಲ್ಲಿ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸುರು ನಿಶಾನೆ ತೋರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ರಾಜ್ಯ ಸರಕಾರ ಮಹಾರಾಷ್ಟ, ತಮಿಳುನಾಡು, ಗುಜರಾತ್ ಮತ್ತು ಕೇರಳ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಮೇ 31 ರ ವರೆಗೆ ನಿರ್ಬಂಧ ವಿಧಿಸಿರುವುದರಿಂದ ಜಿಲ್ಲೆಗೆ ಹೊರರಾಜ್ಯದಿಂದ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಈಗಾಗಲೇ ಕುಂದಾಪುರ ತಾಲೂಕಿನಲ್ಲಿ ಒಂದು ಸಂಚಾರಿ ಕೋವಿಡ್ ಮಾದರಿ ಸಂಗ್ರಹ ವಾಹನವಿದ್ದು, ಪ್ರಸ್ತುತ ಉಡುಪಿ ಮತ್ತು ಕಾರ್ಕಳ ತಾಲೂಕಿಗೆ ವಾಹನ ದೊರೆತಿರುವುದರಿಂದ ಕ್ವಾರಂಟೈನ್ ಕೇಂದ್ರಗಳಲ್ಲಿರುವವರ ಗಂಟಲ ದ್ರವ ಸಂಗ್ರಹ ಸುಲಭವಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್, ಡಿಎಚ್‌ಒ ಡಾ| ಸುಧೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ, ಖಜಾಂಚಿ ಚಂದ್ರಶೇಖರ್, ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ದಿವಾಕರ ಖಾರ್ವಿ, ರವಿ ಪೂಜಾರಿ ಉಪಸ್ಥಿತರಿದ್ದರು. 7,000 ಮಂದಿ ಕ್ವಾರಂಟೈನ್
ಜಿಲ್ಲೆಗೆ ಹೊರ ರಾಜ್ಯ ಹಾಗೂ ರಾಷ್ಟ್ರದಿಂದ ಇಲ್ಲಿಯವರೆಗೆ 7,000 ಜನರು ಬಂದಿದ್ದಾರೆ. ಅವರೆಲ್ಲರನ್ನು ಸರಕಾರಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇನ್ನೂ ಕೆಲವೇ ದಿನದಲ್ಲಿ ಮೊದಲ ಹಂತದ ಕ್ವಾರಂಟೈನ್ ಮುಗಿಯಲಿದೆ. ಬಳಿಕ ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ವರದಿ ನೆಗೆಟಿವ್ ಬಂದರೆ ಅವರನ್ನು ಮನೆ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. ಪಾಸಿಟಿವ್ ಬಂದರೆ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಎಂದರು.