ಮಣಿಪಾಲ: ಕೋವಿಡ್ ವೈರಸ್ ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಲಾಕ್‌ಡೌನ್ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಕಟಾವಿಗೆ ಬಂದಿದ್ದ ಚಹಾ ಬೆಳೆಯನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಲಾಕ್‌ಡೌನ್ ಕಾರಣ ಚಹಾದ ಬೇಡಿಕೆಯೂ ಹೆಚ್ಚಾಗಿದೆ.
ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಬೇಡಿಕೆಯನ್ನು ಸರಿದೂಗಿಸಲು ಚಹಾ ಬೆಳೆಗಾರರಿಗೆ ಲಾಕ್‌ಡೌನ್ ಸಮಸ್ಯೆಯಾಗುತ್ತಿದೆ. ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಬರುತ್ತಿಲ್ಲ. ಇದು ಚಹಾ ಉತ್ಪಾದನೆ ಮತ್ತು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದ್ದು 2020ರಲ್ಲಿ ದೇಶೀಯ ಉತ್ಪಾದನೆ ಶೇ. 9ರಷ್ಟು ಇಳಿಕೆಯಾಗಬಹುದು.
ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಅಸ್ಸಾಂನಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಚಹಾ ತೋಟಗಳಲ್ಲಿನ ಕಾರ್ಮಿಕರ ಕೊರತೆ ಈ ವರ್ಷದ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕೋವಿಡ್ ಬರೀ ಜಗತ್ತಿಗಲ್ಲ ; ಭಾರತೀಯ ಚಹಾ ಉತ್ಪಾದಕರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.
ಈಶಾನ್ಯ ಭಾಗದಲ್ಲಿ ಬೆಳೆಯಲಾಗುವ ಚಹಾವನ್ನು ಅತ್ಯುತ್ಕೃಷ್ಟವಾದುದು. ಸಾಮಾನ್ಯವಾಗಿ ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಚಹಾ ಸೊಪ್ಪಿನ ಕಟಾವು. ಭಾರತ ಮಾತ್ರವಲ್ಲದೇ ಚೀನ, ಶ್ರಿಲಂಕಾ, ವಿಯೆಟ್ನಾಂ ಸೇರಿದಂತೆ ಇತರ ಚಹಾ ರಫ್ತು ಮಾಡುವ ದೇಶಗಳು ಈ ಸಮಸ್ಯೆಗೆ ಸಿಲುಕಿವೆ. ಕೀನ್ಯಾದಲ್ಲಿನ ಹವಾಮಾನದ ಕಾರಣಕ್ಕೆ ವರ್ಷಪೂರ್ತಿ ಚಹಾ ಬೆಳೆಯಬಹುದು.
ಶ್ರೀಲಂಕಾದಲ್ಲಿ ಮೊದಲ ತ್ತೈಮಾಸಿಕದಲ್ಲೇ ಚಹಾ ಉತ್ಪಾದನೆಯು ದಶಕಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಕೂಡ ನಷ್ಟ ಅನುಭವಿಸಿದ್ದು, 59.5 ದಶಲಕ್ಷ ಕಿ.ಗ್ರಾಂ.ನಿಂದ 14.1 ದಶಲಕ್ಷ ಕಿ.ಗ್ರಾಂ.ಗೆ ಇಳಿಕೆಯಾಗಿದೆ.
ಸಾಂಕ್ರಾಮಿಕ ಕಾಯಿಲೆಯೊಂದು ಚಹಾ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದು ಇದೇ ಮೊದಲು ಎನ್ನುತ್ತಾರೆ ಬೆಳೆಗಾರರು. ಕಾಫಿ ಬೆಳೆಗಾರರೂ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ಕೃಷಿ ಚಟುವಟಿಕೆಗಳು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ.