Advertisement

2ನೇ ಅಲೆ ನಿಯಂತ್ರಣಕ್ಕೆ ಅಧಿಕಾರಿಗಳು ಮಾರ್ಗಸೂಚಿ ಪಾಲಿಸಿ, ತಪ್ಪಿದರೆ ಕ್ರಮ: ಡಿಸಿ ಸೂಚನೆ

07:18 PM Apr 27, 2021 | Team Udayavani |

ಉಡುಪಿ: ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎ. 27 ರಿಂದ ಮೇ 12ರ ವರೆಗೆ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು. ಮಾರ್ಗಸೂಚಿಗಳನ್ನು ಕಾಟಾಚಾರಕ್ಕೆ ಅನುಷ್ಠಾನ ಮಾಡುವ ಅಧಿಕಾರಿಗಳ ವಿರುದ್ಧ ಎಪಿಡಮಿಕ್‌ ಕಾಯಿದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಕೆ ನೀಡಿದರು.

Advertisement

ಅವರು ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ಕೋವಿಡ್‌ ಮಾರ್ಗಸೂಚಿ ಅನುಷ್ಠಾನ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ಜಿಲ್ಲೆಯಲ್ಲಿ ಕೋವಿಡ್‌ ಉಲ್ಬಣವಾಗುವುದನ್ನು ನಿಯಂತ್ರಿಸಬೇಕು. ರೈಲು ಮತ್ತು ವಿಮಾನ ಪ್ರಯಾಣ ಮಾಡುವವರನ್ನು ಅವರು ಹೊಂದಿರುವ ಅಧಿಕೃತ ಟಿಕೆಟ್‌ ಆಧಾರದಲ್ಲಿ ಸಂಚಾರಕ್ಕೆ ಅನುಮತಿ ನೀಡಿ. ತುರ್ತು ಆರೋಗ್ಯ ಸಮಸ್ಯೆಯಿರುವ ರೋಗಿಗಳು ಆಟೋ, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಸಂಚರಿಸಲು ಅನುಮತಿ ಇದೆ. ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶವಿದೆ ಎಂದರು.

ಇದನ್ನೂ ಓದಿ :ಕೊಪ್ಪಳದಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ವೃದ್ಧನ ಅಂತ್ಯಸಂಸ್ಕಾರ

ಅವಶ್ಯಕ ಮತ್ತು ತುರ್ತು ಸೇವೆ ಒದಗಿಸುವ ಸಿಬಂದಿಗಳಿಗೆ ಅವರ ಗುರುತಿನ ಚೀಟಿ ಆಧಾರದಲ್ಲಿ ಸಂಚರಿಸಲು ಅವಕಾಶ ಇದೆ. ಗಾರ್ಮೆಂಟ್ಸ್‌ ಹೊರತುಪಡಿಸಿ ಎಲ್ಲ ಕೈಗಾರಿಕೆಗಳಲ್ಲಿ ಹಾಗೂ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಸೂಕ್ತ ಗುರುತಿನ ಚೀಟಿ ಹೊಂದಿ ಸಂಚರಿಸಲು ಅವಕಾಶ ಇದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮದವರು ತಮ್ಮ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. ಸರಕು ಸಾಗಾಣಿಕೆ ವಾಹನಗಳು ಲೋಡ್‌ ಮತ್ತು ಅನ್‌ಲೋಡ್‌ ಮಾಡಿ ಸಂಚರಿಸಲು ಯಾವುದೇ ನಿರ್ಭಂಧಗಳಿಲ್ಲ. ಅಂತಹ ವಾಹನಗಳನ್ನು ತಡೆಯಬಾರದು ಎಂದು ಡಿಸಿ ಹೆಳಿದರು.

Advertisement

ಬೆಳಗ್ಗೆ 6ರಿಂದ 10ರ ವರೆಗೆ ಅವಕಾಶ
ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6 ರಿಂದ 10 ರ ವರೆಗೆ ಅವಕಾಶವಿದ್ದು, ಸಾರ್ವಜನಿಕರು ತಮ್ಮ ಮನೆಯ ಸಮೀಪದ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಬೇಕು. ಅನಾವಶ್ಯಕವಾಗಿ ಸಂಚರಿಸಬಾರದು.

ಲಸಿಕೆ: ಅಂತರ ಅಗತ್ಯ
ಕೋವಿಡ್‌ ಲಸಿಕೆ ಪಡೆಯುವವರು ತಮ್ಮ ಸಮೀಪದ ಆಸ್ಪತ್ರೆಗಳಿಗೆ ಮಾತ್ರ ತೆರಳಿ, ಲಸಿಕೆ ಪಡೆಯಲು ಅವಕಾಶವಿದೆ. ಲಸಿಕೆ ಪಡೆಯುವ ಉದ್ದೇಶದಿಂದ ಅನಗತ್ಯ ಸಂಚಾರ ಮಾಡುವಂತಿಲ್ಲ. ಲಸಿಕೆ ನೀಡುವ ಕೇಂದ್ರಗಳಲ್ಲಿ ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ನೀಡಲು ವ್ಯವಸ್ಥೆ ಮಾಡುವಂತೆ ಡಿಸಿ ಸೂಚನೆ ನೀಡಿದರು.

ನಿರ್ಮಾಣ, ಮೀನುಗಾರಿಕೆ
ಕಟ್ಟಡ ನಿರ್ಮಾಣ ಚಟುವಟಿಕೆಗೆ ಅವಕಾಶವಿದ್ದು, ಕಾರ್ಮಿಕರಿಗೆ ಸಂಬಂಧಪಟ್ಟ ನಿರ್ಮಾಣ ಸಂಸ್ಥೆ ಅಥವಾ ಮಾಲೀಕರು ಸೂಕ್ತ ಗುರುತಿನ ಚೀಟಿ ಒದಗಿಸಬೇಕು. ಮೀನುಗಾರಿಕೆಯನ್ನು ನಿಗದಿತ ಅವಧಿಯೊಳಗೆ ಮಾಡಲು ಕ್ರಮ ಕೈಗೊಳ್ಳಿ. ಕೃಷಿ ಚಟುವಟಿಕೆ ನಡೆಸಲು ನಿರ್ಬಂಧಗಳಿಲ್ಲ.

ಮದುವೆಗೆ 50, ಶವಸಂಸ್ಕಾರಕ್ಕೆ 5 ಮಂದಿ
ಮದುವೆ ಕಾರ್ಯಕ್ರಮಕ್ಕೆ 50 ಮಂದಿ, ಶವ ಸಂಸ್ಕಾರಕ್ಕೆ 5 ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ. ಮೊನ್ನೆ ನಡೆದ ವಿವಾಹ ಕಾರ್ಯಕ್ರಮಗಳ ಬಗ್ಗೆ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಕೋವಿಡ್‌ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಂಡಿದ್ದಾರೆ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಜಿ.ಜಗದೀಶ್‌ ಹೇಳಿದರು.

ಜಿ.ಪಂ. ಸಿಇಓ ಡಾ| ನವೀನ್‌ ಭಟ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಬಾಗಾಧಿಕಾರಿ ರಾಜು, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್‌ ಫ‌ಡ್ನೇಕರ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next