ಸಾಗರ: ಪ್ರಪಂಚವನ್ನು ಕಾಡುತ್ತಿರುವ ಕೋವಿಡ್ ಸಾಂಕ್ರಾಮಿಕ ರೋಗವನ್ನು ತಾಲೂಕಿನ ಮೂಲೆಯೊಂದರಲ್ಲಿರುವ ಅರಲಗೋಡು ಗ್ರಾಮದ ಯುವಕರನ್ನು ಕಾಡಿ, ಜಾಗೃತಿಯ ಸಂದೇಶವನ್ನು ಪ್ರಸ್ತುತಪಡಿಸಿದ ರೀತಿ ವಿಶೇಷ ಗಮನ ಸೆಳೆದಿದೆ.
ಇಲ್ಲಿನ ವಿವೇಕಾನಂದ ಯುವಕ ಸಂಘದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಗಣೇಶೋತ್ಸವದ ನಿಮಿತ್ತ ಪ್ರತಿಷ್ಠಾಪಿಸಿ, ಪೂಜಿಸಿದ ಗಣಪತಿ ವಿಗ್ರಹದ ಜತೆಗೆ ಸೃಷ್ಟಿಸಿದ ಸನ್ನಿವೇಶ ಅಪರೂಪದ ಕಲ್ಪನೆಯಾಗಿತ್ತು. ಕೋವಿಡ್ ಲಸಿಕೆಗಳ ಬಾಟಲ್ ಮತ್ತು ಸಿರಿಂಜ್ ಮೇಲೆ ಕೂರಿಸಿದ ಗಣಪತಿ ವಿಗ್ರಹದ ಮೂಲಕ ಗ್ರಾಮಾಂತರದಲ್ಲಿ ಲಸಿಕೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ.
ಇದನ್ನೂ ಓದಿ:ಹುಣಸೋಡು ಕ್ವಾರಿ ದುರಂತದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತು ಪತ್ತೆ; ಯಾರು ಆ ವ್ಯಕ್ತಿ?
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಹಾಗೂ ಜೋಗ್ ಕಾರ್ಗಲ್ ಪಪಂ ಸದಸ್ಯ ನಾಗರಾಜ ವಾಟೆಮಕ್ಕಿ, ಅರಳಗೋಡು ಭಾಗದಲ್ಲಿ ಮಂಗನ ಕಾಯಿಲೆ ಭೀಕರವಾಗಿ ಬಾಧಿಸಿತ್ತು. ಸಾವುನೋವಿಗೆ ಕಾರಣವಾದ ಮಂಗನ ಕಾಯಿಲೆಯ ಸಂಕಟದ ನಡುವೆ ಕೊರೊನಾ ಭೀತಿ ಆವರಿಸಿದ್ದು, ಸರಕಾರ ಪ್ರತಿಬಂಧಕ ಲಸಿಕೆ ವ್ಯವಸ್ಥೆ ಮಾಡಿದೆ. ಸ್ಥಳೀಯವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಬಹಳ ಕಾಳಜಿಯಿಂದ ಲಸಿಕೆ ನೀಡುವ ಕಾರ‍್ಯ ಮಾಡುತ್ತಿದ್ದಾರೆ.
ಗ್ರಾಮೀಣ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಲಸಿಕೆಯ ಬಾಟಲ್ ಹಾಗೂ ಸಿರಿಂಜ್ ಮೇಲೆ ಈ ವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಲಸಿಕೆ ಯುಕ್ತ ಕೊರೊನಾ ಮುಕ್ತ ಸ್ವಾಸ್ಥ್ಯ ಸಮಾಜದ ಸಂಕಲ್ಪಕ್ಕೆ ಪೂರಕವಾಗಿ ಈ ಕಾರ‍್ಯ ಮಾಡಲಾಗಿದೆ ಎಂದರು. ಕಾರ‍್ಯದರ್ಶಿ ಶಿವರಾಜ್ ವಾಟೇಮಕ್ಕಿ, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.