Advertisement

ರಾಜಕಾರಣಿಗಳಿಗೆ ಕೋವಿಡ್‌ ಕಾಟ; ಪಾಕ್‌ ಸಚಿವರಿಗೂ ಸೋಂಕು

02:44 PM Jun 17, 2020 | mahesh |

ಕರಾಚಿ: ಪಾಕಿಸ್ಥಾನದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ವಿಸ್ತರಿಸುತ್ತಿದ್ದು ಪ್ರಮುಖ ಸಚಿವರು, ಅಧಿಕಾರಿಗಳೇ ತುತ್ತಾಗುತ್ತಿದ್ದಾರೆ. ಮಂಗಳವಾರ ಪಾಕ್‌ನ ಮಾಹಿತಿ ತಂತ್ರಜ್ಞಾನ ಸಚಿವ ಸಯ್ಯದ್‌ ಅಮಿನುಲ್‌ ಅವರಿಗೆ ಕೋವಿಡ್‌ ಸೋಂಕಿರುವುದು ದೃಢಪಟ್ಟಿದೆ. ಜ್ವರದಿಂದ ಅವರು ಬಳಲುತ್ತಿದ್ದು ಟೈಫಾಯಿಡ್‌ ಇರುವುದು ದೃಢಪಟ್ಟಿತ್ತು. ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ವೇಳೆ ಕೋವಿಡ್‌ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಜಿಯೋ ನ್ಯೂಸ್‌ ವರದಿ ಮಾಡಿದೆ. ಅಮಿನುಲ್‌ ಅವರು ಮುತ್ತಾಹಿದಾ ಖವಾಮಿ ಮೂವ್‌ಮೆಂಟ್‌ನ ನಾಯಕರಾಗಿದ್ದು, ಎ.6ರಂದು ಮಾಹಿತಿ ತಂತ್ರಜ್ಞಾನ ಸಚಿವರಾಗಿ ನಿಯುಕ್ತರಾಗಿದ್ದರು. ತಮಗೆ ಜ್ವರ ಇರುವುದು ಗೊತ್ತಾದ ಕೂಡಲೇ ಇವರು ಐಸೋಲೇಷನ್‌ನಲ್ಲಿದ್ದು ಬೇರೆಯವರಿಗೆ ಸೋಂಕು ಹರಡದಂತೆ ನೋಡಿಕೊಂಡಿದ್ದಾರೆ. ಇದೇ ವೇಳೆ ಪಾಕ್‌ನಲ್ಲಿ ಕೋವಿಡ್‌ನಿಂದ ಮೃತರಾದವರ ಸಂಖ್ಯೆ 2839ಕ್ಕೇರಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1.14 ಲಕ್ಷದ ಗಡಿ ದಾಟಿದೆ.

Advertisement

ಇನ್ನು ರಾಜಕಾರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವುದು ಪಾಕ್‌ನ ರಾಜಕೀಯ ವಲಯದಲ್ಲಿ ಆಘಾತ ಸೃಷ್ಟಿಸಿದೆ. ಸೋಮವಾರ ಸಿಂಧ್‌ನ ಮಹಿಳಾ ಅಭಿವೃದ್ಧಿ ಸಚಿವೆ ಶೆಹ್ಲಾ ರಾಜಾ ಅವರು ಸೋಂಕಿಗೆ ತುತ್ತಾಗಿದ್ದರು. ಕಳೆದ ವಾರ, ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ಅದಕ್ಕೂ ಮೊದಲು ಪಾಕ್‌ ವಿಪಕ್ಷ ನಾಯಕ ಪಿಎಮ್‌ಎಲ್‌ಎನ್‌ನ ಶೆಹಬಾಝ್ ಶರೀಫ್, ರೈಲ್ವೇ ಸಚಿವ ಶೇಖ್‌ ರಶೀದ್‌ ಅಹ್ಮದ್‌, ಪಿಎಲ್‌ಎಮ್‌ಎನ್‌ ನಾಯಕರಾದ ಅಶಾನ್‌ ಅಕ್ಬಲ್‌, ಮರಿಯುಮ್‌ ಔರಂಗಜೇಬ್‌ ಮೊದಲಾದವರೂ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲಿ ಕೋವಿಡ್‌ ಈ ಮೊದಲಿಗಿಂತಲೂ ಕ್ಷಿಪ್ರ ಪ್ರಮಾಣದಲ್ಲಿ ಹರಡುತ್ತಿದ್ದು, ಸಾವಿನ ಪ್ರಮಾಣವೂ ದಿನದಿಂದ ದಿನಕ್ಕೆ ಏರುತ್ತಿದೆ. ಸೋಮವಾರ 111 ಮಂದಿ ಮೃತಪಟ್ಟಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next