Advertisement

ಕೋವಿಡ್‌ನಿಂದಾಗಿ ಮಕ್ಕಳ ಲಸಿಕೆ ಕಾರ್ಯಕ್ರಮಕ್ಕೆ ಕುತ್ತು

06:39 PM May 24, 2020 | Sriram |

ಸವಾಲುಗಳನ್ನು ಮೀರಿ ಹಲವು ರಾಷ್ಟ್ರಗಳು ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಮುಂದುವರಿಸುವುದಕ್ಕೆ ವಿಶೇಷ ಪ್ರಯತ್ನಗಳನ್ನು ನಡೆಸುತ್ತಿವೆ.ಉಗಾಂಡಾ ಇತರ ಆವಶ್ಯಕ ಆರೋಗ್ಯ ಸೇವೆಗಳೊಂದಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿಸುತ್ತಿದೆ. ಲಾವೋಸ್‌ನಲ್ಲಿ ಮಾರ್ಚ್‌ನಿಂದ ರಾಷ್ಟ್ರೀಯ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ನಿಗದಿತ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಲಸಿಕೆ ನೀಡುವ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ.

Advertisement

ವಿಶ್ವಸಂಸ್ಥೆ: ವಿಶ್ವಾದ್ಯಂತ ಜೀವರಕ್ಷಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಕೋವಿಡ್‌ ಹೆಮ್ಮಾರಿ ಅಡ್ಡಿಯಾಗಿ ಪರಿಣಮಿಸಿದೆ ಮತ್ತು ಇದರಿಂದಾಗಿ ಒಂದು ವರ್ಷದೊಳಗಿನ 8 ಕೋಟಿ ಮಕ್ಕಳ ಮೇಲೆ ಪರಿಣಾಮವಾಗುವ ಸಾಧ್ಯತೆಯಿದೆ.

ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಅಸ್ತವ್ಯಸ್ತಗೊಳ್ಳಲು ಹಲವು ಕಾರಣಗಳಿವೆ. ಕೆಲ ಹೆತ್ತವರು ನಿರ್ಬಂಧಗಳು ಜಾರಿಯಲ್ಲಿರುವುದರಿಂದ, ಮಾಹಿತಿ ಕೊರತೆಯಿಂದ ಅಥವಾ ಕೋವಿಡ್‌ ಸೋಂಕು ತಗಲುವ ಭೀತಿಯಿಂದ ಮನೆಯಿಂದ ಹೊರಹೋಗಲು ಹಿಂಜರಿಯುತ್ತಿದ್ದಾರೆ.

ಸಂಚಾರ ನಿರ್ಬಂಧಗಳಿಂದಾಗಿ ಅಥವಾ ಕೋವಿಡ್‌ ಕರ್ತವ್ಯಕ್ಕೆ ಮರುನಿಯೋಜನೆಯಿಂದಾಗಿ ಹಾಗೂ ಸಂರಕ್ಷಕ ಸಾಧನಗಳ ಕೊರತೆಯಿಂದಾಗಿ ಅನೇಕ ಕಾರ್ಯಕರ್ತರು ಕೂಡ ಈ ಕಾರ್ಯಕ್ರಮಕ್ಕೆ ಲಭ್ಯರಾಗುತ್ತಿಲ್ಲ ಬಡ ಮತ್ತು ಶ್ರೀಮಂತ ರಾಷ್ಟ್ರಗಳೆರಡರಲ್ಲೂ ಕೋಟ್ಯಂತರ ಮಕ್ಕಳು ಡಿಫ್ತಿàರಿಯ, ದಡಾರ ಮತ್ತು ಪೋಲಿಯೋದಂಥ ರೋಗಗಳಿಗೆ ತುತ್ತಾಗುವ ಅಪಾಯ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಯುನಿಸೆಫ್, ಗಾವಿ ಮತ್ತು ಸಾಬಿನ್‌ ವ್ಯಾಕ್ಸಿನ್‌ ಇನ್‌ಸ್ಟಿಟ್ಯೂಟ್‌ ಸಂಗ್ರಹಿಸಿರುವ ದತ್ತಾಂಶಗಳಿಂದ ವ್ಯಕ್ತವಾಗಿದೆ.

ಸಾಧಿಸಿದ್ದ ಪ್ರಗತಿ ನಷ್ಟ
ಕೋವಿಡ್‌-19ರಿಂದಾಗಿ ರೋಗನಿರೋಧಕ ಲಸಿಕೆಗಳನ್ನು ನೀಡುವ ಕಾರ್ಯಕ್ರಮ ಅಸ್ತವ್ಯಸ್ತವಾಗಿರುದರಿಂದ ಲಸಿಕೆ ಮೂಲಕ ತಡೆಯಬಹುದಾದ ದಡಾರದಂಥ ರೋಗಗಳ ಮೇಲೆ ದಶಕಗಳಿಂದ ಸಾಧಿಸಲಾಗಿದ್ದ ಪ್ರಗತಿ ನಷ್ಟವಾಗುವ ಅಪಾಯವುಂಟಾಗಿದೆ ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಡಾ| ಟೆಡ್ರೋಸ್‌ಆಧನೋಮ್‌ ಹೇಳಿದ್ದಾರೆ.

Advertisement

ಅನೇಕ ರಾಷ್ಟ್ರಗಳು ಕೋವಿಡ್‌ ಸೋಂಕು ತಗಲುವ ಅಪಾಯ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯದ ಹಿನ್ನೆಲೆಯಲ್ಲಿ ಕಾಲರಾ, ದಡಾರ, ಮೆದುಳುಜ್ವರ, ಪೋಲಿಯೊ, ಟಿಟೇನಸ್‌. ಟೈಫಾಯ್ಡ ಮತ್ತು ಹಳದಿ ಜ್ವರದಂಥ ಕಾಯಿಲೆಗಳನ್ನು ತಡೆಗಟ್ಟುವುದಕ್ಕೆ ಸಾಮೂಹಿಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಅಮಾನತುಗೊಳಿಸಿವೆ.

ವಿಶೇಷವಾಗಿ ದಡಾರ ಮತ್ತು ಪೋಲಿಯೊ ಲಸಿಕೆ ನೀಡುವ ಅಭಿಯಾನಗಳು ಬಾಧಿತವಾಗಿವೆ. 27 ರಾಷ್ಟ್ರಗಳು ದಡಾರ ಹಾಗೂ 38 ರಾಷ್ಟ್ರಗಳು ಪೋಲಿಯೊ ಅಭಿಯಾನವನ್ನು ಸ್ಥಗಿತಗೊಳಿಸಿವೆ.

ಅಭಿಯಾನಗಳನ್ನು ಮುಂದೂಡಿರುವುದು ಮತ್ತು ಹೊಸ ಲಸಿಕೆಗಳನ್ನು ಪರಿಚಯಿಸುವುದರಿಂದಾಗಿ 21 ಹಿಂದುಳಿದ ರಾಷ್ಟ್ರಗಳ ಕನಿಷ್ಠ 2.4 ಕೋಟಿ ಮಕ್ಕಳು ಪೋಲಿಯೊ, ದಡಾರ, ಟೈಫಾಯ್ಡ, ಹಳದಿ ಜ್ವರ, ಕಾಲರಾ, ರೋಟಾ ವೈರಸ್‌, ಎಚ್‌ಪಿವಿ, ಮೆದುಳುಜ್ವರ, ಹಾಗೂ ರುಬೆಲ್ಲಾ ನಿರೋಧಕ ಲಸಿಕೆಗಳಿಂದ ವಂಚಿತರಾಗುವ ಅಪಾಯದಲ್ಲಿದ್ದಾರೆ.

“ಕೋವಿಡ್‌-19ರಿಂದಾಗಿ ಈ ರೋಗಗಳನ್ನು ಹತ್ತಿಕ್ಕುವಲ್ಲಿ ಸಾಧಿಸಲಾಗಿದ್ದ ಪ್ರಗತಿ ನಷ್ಟವಾಗುವ ಅಪಾಯವುಂಟಾಗಿದೆ ಮತ್ತು ದಡಾರ ಹಾಗೂ ಪೋಲಿಯೊದಂಥ ರೋಗಗಳು ಮರುಕಳಿಸುವ ಅಪಾಯ ತಲೆದೋರಿದೆ ಎಂದು ಗಾವಿ ಸಿಇಒ ಡಾ| ಸೇತ್‌ ಬಕ್ಲಿ ಹೇಳುತ್ತಾರೆ.

ಸಾಗಣೆ ವಿಳಂಬ
ಲಸಿಕೆಗಳ ಸಾಗಣೆಯಲ್ಲಿನ ವಿಳಂಬದಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಲಾಕ್‌ಡೌನ್‌ ಕ್ರಮಗಳು, ವಾಣಿಜ್ಯ ವಿಮಾನಗಳ ಹಾರಾಟದಲ್ಲಿ ಇಳಿಕೆ ಹಾಗೂ ಬಾಡಿಗೆ ವಿಮಾನಗಳ ಲಭ್ಯತೆಯಲ್ಲಿನ ಕೊರತೆಯಿಂದಾಗಿ ಲಸಿಕೆಗಳ ರವಾನೆಯಲ್ಲಿ ಗಣನೀಯ ವಿಳಂಬವುಂಟಾಗುತ್ತಿದೆಯೆಂದು ಯುನಿಸೆಫ್ ಹೇಳಿದೆ.

ಯುನಿಸೆಫ್ ಮನವಿ
ಈ ಜೀವರಕ್ಷಕ ಲಸಿಕೆಗಳ ಸಾಗಣೆ ಸಾಧ್ಯವಾಗುವಂತಾಗಲು ಸರಕು ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಸರಕಾರಗಳು, ಖಾಸಗಿ ಕ್ಷೇತ್ರ ಹಾಗೂ ವಿಮಾನ ಉದ್ದಿಮೆಗೆ ಯುನಿಸೆಫ್ ಮನವಿ ಮಾಡಿದೆ.

ಬೇರೆ ರೋಗಗಳ ವಿರುದ್ಧ ಹೋರಾಟದಲ್ಲಿ ನಾವು ದೀರ್ಘ‌ಕಾಲದಲ್ಲಿ ಸಾಧಿಸಿರುವ ಪ್ರಗತಿ ಒಂದು ರೋಗದ ಕಾರಣಕ್ಕೆ ವ್ಯರ್ಥವಾಗುವುದಕ್ಕೆ ನಾವು ಅವಕಾಶ ನೀಡುವಂತಿಲ್ಲ ಎಂದು ಯುನಿಸೆಫ್ ನಿರ್ವಾಹಕ ನಿರ್ದೇಶಕ ಹೆನ್ರಿಟಾ ಫೋರ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next