Advertisement
ಒಂದೆಡೆ ಜಾಗತಿಕ ಮಾರಿ ಕೋವಿಡ್ ವೈರಸ್, ಮತ್ತೂಂದೆಡೆ ನೆರೆಯ ಚೀನಾದೊಂದಿಗೆ ಯುದ್ಧದ ಸನ್ನಿವೇಶ, ಇನ್ನೊಂದೆಡೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ. ಈ ಸವಾಲುಗಳ ನಡುವೆ ಮತ್ತೂಂದು ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ 13ನೇ ಆವೃತ್ತಿಗೆ ಬೆಂಗಳೂರು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋ ಮಹತ್ವ ಪಡೆದು ಕೊಂಡಿದೆ.
Related Articles
Advertisement
ವೈಮಾನಿಕ ಕ್ಷೇತ್ರದಲ್ಲಿ ಸರ್ಕಾರದ ಈ ಸ್ವಾವಲಂಬಿ ಹೆಜ್ಜೆ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬಂದರೆ, ಭವಿಷ್ಯದಲ್ಲಿ ಬೆಂಗಳೂರಿಗೆ ವರವಾಗಲಿದೆ. ಯಾಕೆಂದರೆ, ಅತಿ ಹೆಚ್ಚು ಉದ್ಯಮಗಳು ಇರುವುದು ಇಲ್ಲಿಯೇ. ಜತೆಗೆ ಎಚ್ ಎಎಲ್, ಎನ್‌ಎಎಲ್, ಡಿಆರ್‌ಡಿಒ, ಇಸ್ರೋ ಸೇರಿದಂತೆ ಪ್ರತಿಷ್ಠಿತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳೂ ಇಲ್ಲಿವೆ. ಸರ್ಕಾರ ದೊಡ್ಡ ದೊಡ್ಡ ಉಪಕರಣಗಳ ತಯಾರಿಕೆ ಮತ್ತು ಪೂರೈಕೆಗೆ ಒತ್ತುಕೊಟ್ಟಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಕೈಗಾರಿಕೆಗಳು ಇರುವುದು ಬಿಡಿಭಾಗಗಳನ್ನು ತಯಾರಿಸುವ ಉದ್ದಿಮೆಗಳು. ಹೀಗಾಗಿ, ಒಂದು ಹೆಲಿಕಾಪ್ಟರ್ ನಿರ್ಮಿಸುವಂತೆ ಸರ್ಕಾರ ಹೇಳಬಹುದು. ಆದರೆ, ಅದರ ಬಗ್ಗೆ ನಾವು ಯೋಚನೆ ಮಾಡಲಿಕ್ಕೂ ಆಗುವುದಿಲ್ಲ. ಇದರ ಬದಲಿಗೆ ಹೆಲಿಕಾಪ್ಟರ್‌ನ ಯಾವ ಭಾಗದ ಉಪಭಾಗ ಎಂದು ಹೇಳಿದರೆ, ಅದನ್ನು ತಯಾರಿಸಿಕೊಡಬಹುದು. ಅದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೂ ಅನುಕೂಲ ಆಗಲಿದೆ ಎಂದು ವೈಮಾನಿಕ ಕ್ಷೇತ್ರದ ಉದ್ಯಮಿ ವಿ.ಕೆ. ದೀಕ್ಷಿತ್ ಅಭಿಪ್ರಾಯಪಡುತ್ತಾರೆ.
ಅವಕಾಶಗಳ ಹೆಬ್ಟಾಗಿಲು ತೆರೆಯಿತು : 40ರ ದಶಕದಲ್ಲಿ ಜಪಾನ್ ಮತ್ತು ಇಂಗ್ಲೆಂಡ್ ನಡುವೆ ಯುದ್ಧ ನಡೆದಾಗ, ಕಾದಾಡುವ ಯುದ್ಧ ವಿಮಾನಗಳ ರಿಪೇರಿ, ನಿರ್ವಹಣೆ ಮತ್ತು ಅವುಗಳನ್ನು ಎಲ್ಲಿ ನಿಲ್ಲಿಸುವುದು ಎಂಬ ಚಿಂತೆ ಬ್ರಿಟಿಷರನ್ನು ಕಾಡುತ್ತಿತ್ತು. ಆಗ ಅವರು ಆಯ್ಕೆ ಮಾಡಿಕೊಂಡಿದ್ದು ಭಾರತವನ್ನು. ಅದರಲ್ಲೂ ಬೆಂಗಳೂರು ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. ಇದಕ್ಕೂ ಮುನ್ನ ಮದ್ರಾಸ್ ಆಯ್ಕೆಯಾಗಿತ್ತು. ಆದರೆ, ಅಲ್ಲಿ ಹಡಗುಗಳಿಂದ ವಿಮಾನವೊಂದನ್ನು ಸ್ಫೋಟಿಸಿದ ಘಟನೆ ನಡೆಯಿತು. ಆದ್ದರಿಂದ ಕಡಲ ತೀರಗಳಲ್ಲದ ಹಾಗೂ ರೆಸಿಡೆಂಟ್ ಮತ್ತು ಕಂಟೋನ್ಮೆಂಟ್ ಇರುವ ಬೆಂಗಳೂರು ಬೆಸ್ಟ್ ಎಂಬ ನಿರ್ಣಯಕ್ಕೆ ಬರಲಾಯಿತು. ಯುದ್ಧ ಮುಗಿಸಿದ ವಿಮಾನಗಳು ಈಗಿನ ಎಚ್‌ಎಎಲ್‌ನಲ್ಲಿ ಬಂದು ನಿಲ್ಲುತ್ತಿದ್ದವು. ಹೀಗೆ ಬಂದು ನಿಲ್ಲುವ ವಿಮಾನಗಳ ರಿಪೇರಿಗೆ ಜನರೂ ಬೇಕಾಯಿತು. ಆಗ ಸ್ಥಳೀಯರಿಗೆ ಆಹ್ವಾನ ಬಂತು. ಈ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಟಾಗಿಲು ತೆರೆಯಿತು.
ಸಂಬಂಧ ಬೆಸುಗೆಗೆ ವೇದಿಕೆ : ಸಾಮಾನ್ಯವಾಗಿ ಏರೋಸ್ಪೇಸ್ ಇಂಡಸ್ಟ್ರಿ ವಿದೇಶಿ ಕಂಪನಿಗಳೊಂದಿಗೆ ವ್ಯಾಪಾರ- ವಹಿವಾಟು ಹೆಚ್ಚು. ಕೋವಿಡ್ ದಿಂದ ಇಡೀ ಉದ್ಯಮ ಮಂಕಾಗಿದೆ. ನಗರದಲ್ಲಿರುವ ಕೈಗಾರಿಕೆ ಗಳಲ್ಲಿ ಶೇ. 50ರಷ್ಟು ಮಖಾಡೆ ಮಲಗಿವೆ. ಇವು ಮತ್ತೆ ಚೇತರಿಸಿಕೊಳ್ಳಲು ಕನಿಷ್ಠ ಆರೆಂಟು ತಿಂಗಳು ಬೇಕು. ಈ ಮಧ್ಯೆ ಏರೋ ಇಂಡಿಯಾ ಶೋ ಬರುತ್ತಿರುವುದರಿಂದ ಮತ್ತೆ ಸಂಬಂಧ ಬೆಸೆಯಲು ವೇದಿಕೆ ಆಗಲಿದೆ ಎಂದೂ ಅವರು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಅಥವಾ ಈ ನಿಟ್ಟಿನಲ್ಲಿ ನಮ್ಮ ಸಾಮರ್ಥ್ಯ ಸಾಬೀತುಪಡಿಸಿ ಕೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ಸರ್ಕಾರ ದೇಶೀಯ ಉದ್ದಿಮೆಗಳಿಗೆ ಉತ್ತೇಜನ ನೀಡುತ್ತಿದ್ದು, ಆಯ್ದ 101 ಉಪಕರಣಗಳನ್ನು ದೇಶೀಯ ಕಂಪನಿಗಳಿಂದಲೇ ಬರಬೇಕು ಎಂದು ಹೇಳಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಭಾರತಕ್ಕೆ ಇದೊಂದು ಸವಾಲಿನ ಜತೆಗೆ ಅವಕಾಶವೂ ಆಗಿದೆ ಎಂದು ಬೆಲ್ಜಿಯಂ ಟ್ರೇಡ್ ಕಮೀಷನರ್ ಜಯಂತ್ ನಾಡಿಗೇರ್ ತಿಳಿಸುತ್ತಾರೆ.
2021 ಫೆಬ್ರವರಿಗೆ ಏರ್ ಇಂಡಿಯಾ ಶೋ : 13ನೇ ಏರೋ ಇಂಡಿಯಾ ಶೋ 2021ರ ಫೆಬ್ರವರಿ 3ರಿಂದ 5ರವರೆಗೆ ನಡೆಯಲಿದೆ. ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳ ಕಾಲ ನಡೆಯುತ್ತಿದ್ದ ಶೋ, ಈ ಬಾರಿ ಮೂರು ದಿನಗಳಿಗೆಸೀಮಿತಗೊಳಿಸಲಾಗಿದೆ.
–ವಿಜಯಕುಮಾರ್ ಚಂದರಗಿ