ಹೊನ್ನಾವರ: ಲಾಕ್‌ಡೌನ್ ಆರಂಭವಾದ ಮೇಲೆ ಕೋವಿಡ್ ಕುರಿತು ಕಾಳಜಿ ಬಿತ್ತುವುದಕ್ಕಿಂತ ಹೆಚ್ಚು ಭೀತಿಮೂಡಿಸಿದ ಸಮಾಜ ಜನಕ್ಕೆ ಅರಿವುಮೂಡುವಷ್ಟರಲ್ಲಿ ಕೋವಿಡ್ ಏನೂ ಅಲ್ಲ, ಲಾಭಕೋರರ ನಾಟಕ ಎಂಬಂತೆ ಅಪಪ್ರಚಾರ ಮಾಡುತ್ತಿರುವುದು ಈ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಸಮಸ್ಯೆ ತಂದಿಟ್ಟಿದೆ.
ಸರ್ಕಾರಕ್ಕೆ ಕೆಲಸ ಇಲ್ಲ, ವೈದ್ಯರಿಗೆ ದುಡ್ಡ ಮಾಡಲು ಆಶಾಕಾರ್ಯಕರ್ತೆಯರನ್ನು ಹಳ್ಳಿಹಳ್ಳಿಗೆ ಕಳಿಸಿ ಜನರನ್ನು ಕರೆತಂದು ಅವರನ್ನು ತಪಾಸಿಸಿ ಸೋಂಕು ಎಂದು ಒಳಗೆ ಇಡುವ ಕಾರ್ಯ ನಡೆದಿದೆ ಎಂದು ಈಗ ಅಪಪ್ರಚಾರ ಜೋರಾಗಿದೆ.
ನಿಜವಾಗಿಯೂ ತಾಲೂಕಾಡಳಿತ, ವೈದ್ಯಕೀಯ ಇಲಾಖೆ ಸಿಬ್ಬಂದಿ, ಪೊಲೀಸರು, ಅಂಬ್ಯುಲೆನ್ಸ್ ಚಾಲಕರ ಸಹಿತ ಎಲ್ಲರೂ ದಣಿದಿದ್ದಾರೆ. ಅವರಿಗೆ ಧೈರ್ಯತುಂಬಿ, ಸಮಾಧಾನದ ಮಾತುಗಳನ್ನು ಹೇಳುವುದನ್ನು ಬಿಟ್ಟು ಜನ ಮನಸ್ಸಿಗೆ ಬಂದಂತೆ ನಾಲಿಗೆ ಹರಿಬಿಡುತ್ತಿದ್ದಾರೆ. ಪತ್ರಕರ್ತರಿಗೆ ಪ್ರಶ್ನೆ ಕೇಳುತ್ತಾರೆ, ನೀವು ಅವರ ಪಾರ್ಟಿ ಅನ್ನುತ್ತಾರೆ, ಜ್ವರ ಬಂದರೆ ಮನೆಯಲ್ಲೇ ಕೂತಿದ್ದು ಕೇರಿಗೆಲ್ಲ ಹಂಚಿ ನಂತರ ಆಸ್ಪತ್ರೆಗೆ ಬರುವುದು ನಡೆದಿದೆ. ವಸ್ತುಸ್ಥಿತಿಯ ಅರಿವು ಮೂಡಿಸುವುದು ಅಲ್ಲಲ್ಲಿ ನಡೆದಿದ್ದರೂ ಸಾರ್ವಜನಿಕ ಸೇವಾ ಸಂಸ್ಥೆಗಳು ಈ ಕುರಿತು ಸ್ಪಷ್ಟ ಅರಿವು ಮೂಡಿಸುವುದು ಹಬ್ಬಗಳು ಹತ್ತಿರ ಇರುವುದರಿಂದ ತುರ್ತು ಅಗತ್ಯ ಎನ್ನಿಸುತ್ತಿದೆ.
ತಾಲೂಕಾಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಲ್ಲಿ ಹೆಚ್ಚಿನವರು ಸ್ಥಳೀಯರಾಗಿದ್ದಾರೆ, ಅವರ ಪತ್ನಿಯರು ಹಳ್ಳಿಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹಳ್ಳಿಗಳಲ್ಲಿರುವ ವೈದ್ಯೆಯರು ಆಶಾ ಕಾರ್ಯಕರ್ತೆಯರನ್ನು ಮನೆಮನೆಗೆ ಕಳಿಸಿ ಅವರ ಮುಖಾಂತರ ತಮ್ಮ ಗಂಡ ಕೆಲಸಮಾಡುವ ಆಸ್ಪತ್ರೆಗೆ ಜನರನ್ನು ಕರೆಸಿಕೊಂಡು ಗಂಟಲುದ್ರವ ಪರೀಕ್ಷೆ ಮಾಡುವ ನೆಪದಲ್ಲಿ ಕೋವಿಡ್ ಎಂದು ಹೇಳಿ ನಾಲ್ಕುದಿನ ಇಟ್ಟುಕೊಂಡು ನಾಲ್ಕು ಗುಳಿಗೆ, ಊಟಕೊಟ್ಟು ಮತ್ತೂಮ್ಮೆ ಪರೀಕ್ಷೆ ಮಾಡಿದಂತೆ ಮಾಡಿ ಮನೆಗೆ ಕಳಿಸುತ್ತಾರೆ. ಹೀಗೆ ಕೋವಿಡ್ ಇಲ್ಲ ಎಂದು ಮನೆಗೆ ಬಂದವರೇ ಹೆಚ್ಚು. ಸರ್ಕಾರ ಆದಾಯಕ್ಕಾಗಿ ಹೀಗೆ ಮಾಡುತ್ತದೆ ಎಂದು ಕಲಿತವರು ಹೇಳುತ್ತಿರುವುದು ವಿಷಾದನೀಯ.
ಕೋವಿಡ್ ಏನೂ ಅಲ್ಲ. ನೆಲನೆಲ್ಲಿ, ಅಮೃತಬಳ್ಳಿ, ಕಾಳುಮೆಣಸು, ಜೀರಿಗೆ, ಕಷಾಯ ಕುಡಿದರೆ ಗುಣವಾಗುತ್ತದೆ. ನನಗೆ ನೋಡಿ ಎರಡು ದಿನ ತಂಡಿ ಜ್ವರ ಬಂತು ಏನೂ ಆಗಲಿಲ್ಲ ಎಂದು ಎದೆಮುಂದೆ ಮಾಡುವವರೂ ಇದ್ದಾರೆ. ಕಷಾಯಗಳು ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲವೇ ವಿನಃ ಕಷಾಯವೇ ಔಷಧ ಅಲ್ಲ ಎಂದು ಸರ್ಕಾರ ಸಾರಿ ಹೇಳುತ್ತಿದ್ದರೂ ಜನ ಕಿವಿಗೆ ಹಾಕಿಕೊಳ್ಳಲು ಸಿದ್ಧರಿಲ್ಲ. ಕೋವಿಡ್ ದಿಂದ ವೈದ್ಯರಿಗೋ, ಸರ್ಕಾರಕ್ಕೋ ಏನೋ ಲಾಭವಿದೆ ಎಂಬ ಗುಮಾನಿಯನ್ನು ಸರ್ವತ್ರ ಬಿತ್ತಲಾಗಿದೆ.
ಸರ್ಕಾರ ಲಾಕ್‌ಡೌನ್, ಸೀಲ್‌ಡೌನ್, ಅರ್ಧದಿನ ಲಾಕ್‌ಡೌನ್ ಏನೆಲ್ಲ ಮಾಡಿ ಕೋವಿಡ್ ನಿಯಂತ್ರಿಸಲು ಹೆಣಗಾಡುತ್ತಿದ್ದರೆ, ಜನ ಬಿಂದಾಸಾಗಿ ತಿರುಗಿದರು. ಕೈ ಸ್ವತ್ಛವಾಗಿಟ್ಟುಕೊಳ್ಳಿ, ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ ಎಂಬ ಸಾಮಾನ್ಯ ನಿಯಮವನ್ನು ಜನ ಈಗಲೂ ಪಾಲಿಸುತ್ತಿಲ್ಲ. ಬಕ್ರೀದ್‌ನಿಂದ ತಿಂಗಳು ಆರಂಭವಾಗಿದೆ,
ಸ್ವಾತಂತ್ರೋತ್ಸವ, ಗಣೇಶೋತ್ಸವ ಸಹಿತ ಹಲವು ಹಬ್ಬಗಳ ಸರಣಿ ಕಾದಿದೆ. ಇಂತಹ ಸಂದರ್ಭದಲ್ಲಿ ಜನ ಮೈಮರೆಯುವುದು ಹೆಚ್ಚು. ಕೋವಿಡ್ ಕುರಿತು ಭೀತಿಯೂ ಇಲ್ಲ, ಜಾಗೃತಿಯೂ ಇಲ್ಲ. ಅಪನಂಬಿಕೆಯೇ ಬೆಳೆದರೆ, ವದಂತಿಗೆ ಜನ ಮರುಳಾದರೆ ಕೊರೊನಾ ಸಮಸ್ಯೆ ನಿವಾರಣೆ ಹೇಗೆ ಎಂಬುದು ಕೆಲವರ ಚಿಂತೆ. ಕೇಂದ್ರ ಸರ್ಕಾರ ಕೋವಿಡ್ ದೊಂದಿಗೆ ಬದುಕಲು ಕಲಿಯಬೇಕು ಎಂದು ಜುಲೈ ಆರಂಭದಲ್ಲಿ ಹೇಳಿದ್ದರೆ, ಭಾರತದಂತಹ ದೊಡ್ಡ ದೇಶದಲ್ಲಿ ಲಸಿಕೆ ಬರದಿದ್ದರೆ ಕೋವಿಡ್ ನಿಯಂತ್ರಣ ಕಷ್ಟಸಾಧ್ಯವೆಂದು ಜುಲೈ ಕೊನೆಯಲ್ಲಿ ಹೇಳಿದೆ. ಹೀಗಿರುವಾಗ ವದಂತಿ, ಭೀತಿ ಬಿಟ್ಟು ನಮ್ಮ ಜನ ವಾಸ್ತವಿಕತೆ ಅರಿಯುವುದು ಯಾವಾಗ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.
ಜನರ ವರ್ತನೆಗೆ ಬೇಸರ : ತಮ್ಮ ಜೀವವನ್ನು ಅಪಾಯಕೊಡ್ಡಿ ಹಗಲು, ರಾತ್ರಿಯೆನ್ನದೆ ಕೋವಿಡ್ ನಿವಾರಣೆ ಕಾರ್ಯದಲ್ಲಿ ತೊಡಗಿಕೊಂಡವರು ಬೇಸರಗೊಂಡಿದ್ದಾರೆ. ನಾವು ಇಷ್ಟು ಕಾಳಜಿಯಿಂದ ಕೆಲಸಮಾಡಿದ್ದರೂ ನಮ್ಮ ಒಟ್ಟಾರೆ ಕೆಲಸವನ್ನು ಕಂಡು ಪ್ರಶಂಸಿಸುವುದನ್ನು, ಅಭಿನಂದಿಸುವುದನ್ನು ಬಿಟ್ಟು ಅಪನಂಬಿಕೆಯನ್ನು ವ್ಯಕ್ತಮಾಡಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
–ಜೀಯು ಹೊನ್ನಾವರ