Advertisement
ನವನಗರದ ಸೆಕ್ಟರ್ ನಂ. 57ರ ನಿವಾಸಿ ಗೂಡ್ಸ್ ವಾಹನ ಚಾಲಕ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತನ ಪ್ರಯಾಣದ ಹಿನ್ನೆಲೆ ಗಮನಿಸಿದರೆ, ಭಯಾನಕವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೂ, ಆ ಆಸ್ಪತ್ರೆಯನ್ನು ರಾತ್ರಿ 8ರ ಬಳಿಕ ಸೀಲ್‌ಡೌನ್ ಮಾಡಲಾಗಿದೆ. ಆ ವ್ಯಕ್ತಿ ಈ ಖಾಸಗಿ ಆಸ್ಪತ್ರೆಗೆ ಹೋಗುವ ಮುನ್ನ ಮತ್ತೆರೆಡು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ. ಅವರು ಚಿಕಿತ್ಸೆಗೆ ನಿರಾಕರಿಸಿದ ಬಳಿಕ ಮತ್ತೂಂದು ಆಸ್ಪತ್ರೆಗೆ ಹೋಗಿದ್ದ. ಈ ವಿಷಯ ತಿಳಿದ ಅಧಿಕಾರಿಗಳು ತಡರಾತ್ರಿ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನವನಗರದ ಮೃತಪಟ್ಟ ವ್ಯಕ್ತಿ ನಿಮ್ಮ ಆಸ್ಪತ್ರೆಗೆ ಬಂದಾಗ ಆತನೊಂದಿಗೆ ಸಂವಹನ ನಡೆಸಿದ್ದವರು ಯಾರು?, ಎಷ್ಟು ಜನ ಸಂಪರ್ಕಕ್ಕೆ ಬಂದಿದ್ದಾರೆ? ಎಂಬೆಲ್ಲ ಮಾಹಿತಿ ಕಲೆ ಹಾಕಿದ್ದು, ಮುಂಜಾಗ್ರತೆಯಾಗಿ ಇಡೀ ಆಸ್ಪತ್ರೆ ಸ್ಯಾನಿಟೈಸರ್ ಮಾಡುವಂತೆ ಸೂಚನೆಯೂ ನೀಡಲಾಗಿದೆ.
Related Articles
Advertisement
ಜಿಲ್ಲಾಡಳಿತ ಮೌನವೇಕೆ?: ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ಆರಂಭದಲ್ಲಿ ಕೈಗೊಂಡ ಉತ್ಸಾಹ ಈಗ ಕಾಣುತ್ತಿಲ್ಲ. ಜನರಲ್ಲಿ ಜಾಗೃತಿ, ಎಚ್ಚರಿಕೆ ನೀಡುವ ಜತೆಗೆ ಈ ವಿಷಯದಲ್ಲಿ ಜನಸ್ನೇಹಿ ಆಡಳಿತ ದೂರವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸ್ವತಃ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಸಹಿತ ಹಲವು ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳೇ ಮಾಧ್ಯಮದವರ ಕರೆ ಸ್ವೀಕರಿಸುತ್ತಿಲ್ಲ. ಕೋವಿಡ್ ಹತೋಟಿ ಕುರಿತು ಜನರಿಗಾಗಿ ಕೈಗೊಂಡ ಪ್ರಮುಖ ನಿರ್ಧಾರಗಳು ಹೊರ ಬೀಳುತ್ತಿಲ್ಲ. ಸ್ಥಳೀಯ ಲ್ಯಾಬ್ ನಲ್ಲಿ ಕೋವಿಡ್ ದೃಢಪಟ್ಟ ಬಳಿಕ ಆ ಸೋಂಕಿತರ ಏರಿಯಾ ಸೀಲ್‌ಡೌನ್ ಮಾಡುವ ವಿಷಯದಲ್ಲಿ, ಸಂಪರ್ಕಿತರ ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತಾಳುತ್ತಿದೆ ಎಂಬ ಅಸಮಾಧಾನ ಕೇಳಿ ಬಂದಿದೆ.
ಸಮುದಾಯಕ್ಕೆ ವಿಸ್ತರಣೆ? : ಕೋವಿಡ್ ಸೋಂಕು ಈ ವರೆಗೆ ಬೇರೆ ರಾಜ್ಯ, ಸೋಂಕಿತರು ಇರುವ ಪ್ರದೇಶಕ್ಕೆ ಭೇಟಿ ನೀಡಿದವರಲ್ಲಿ ಪತ್ತೆಯಾಗಿತ್ತು. ಆದರೆ, ಇತ್ತೀಚಿನ ಒಂದು ವಾರದಿಂದ ಬೇರೆ ರಾಜ್ಯಕ್ಕೆ ಭೇಟಿ ನೀಡದವರಿಗೆ, ಬಾಗಲಕೋಟೆ ನಗರ ಬಿಟ್ಟು ಹೊರ ಹೋಗದವರಿಗೂ ಸೋಂಕು ಬಂದಿದೆ. ಹೀಗಾಗಿ ಕೋವಿಡ್ ಸೋಂಕು ಈಗ ಸಮುದಾಯದಲ್ಲಿ ವಿಸ್ತರಣೆಯಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಂಕಿತರ ಪ್ರಯಾಣ ಹಿನ್ನೆಲೆ, ಯಾರಿಂದ ಸೋಂಕು ಬಂತು? ಎಂಬುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚುವ ಕಾರ್ಯ ಮಾಡುತ್ತಿತ್ತು. ಆದರೆ, ಎರಡು ದಿನದಿಂದ ಈ ಗೋಜಿಗೆ ಹೋಗುತ್ತಿಲ್ಲ. ಕೇವಲ ಸೋಂಕಿತರ ವಿವರ ನೀಡಲಾಗುತ್ತಿದೆ. ಯಾರಿಂದ, ಹೇಗೆ ಬಂತು ಎಂಬುದು ತಿಳಿಯುತ್ತಿಲ್ಲ. ಇದು, ಭೀತಿ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ.
ಬಿಟಿಡಿಎ ಅಧಿಕಾರಿಗಳೆಲ್ಲಿ? : ಮೊದಲು ಹಳೆಯ ಬಾಗಲಕೋಟೆಗೆ ಸೀಮಿತವಾಗಿದ್ದ ಕೋವಿಡ್ ಈಗ ನವನಗರದಲ್ಲಿ ಕೇಕೆ ಹಾಕುತ್ತಿದೆ. ಹಲವು ಕ್ವಾರಂಟೈನ್ ಕೇಂದ್ರಗಳೂ ನವನಗರದಲ್ಲಿವೆ. ಸೋಂಕಿತ ವ್ಯಕ್ತಿಯೊಬ್ಬ ಮೃತಪಟ್ಟರೂ ಇಡೀ ನವನಗರದ ಜವಾಬ್ದಾರಿ ಹೊತ್ತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪತ್ತೆ ಇಲ್ಲ. ಸೋಂಕಿತ ವ್ಯಕ್ತಿಗಳ ಮನೆ ಸುತ್ತ ಸ್ಯಾನಿಟೈಸರ್ ಮಾಡಿಲ್ಲ. ಸೀಲ್‌ಡೌನ್ ಗೆ ತಲೆ ಕೆಡಿಸಿಕೊಂಡಿಲ್ಲ. ಬಿಟಿಡಿಎ ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ನವನಗರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನವನಗರದಲ್ಲಿ ರವಿವಾರ ಒಂದು ಮದುವೆ ನಡೆದಿದೆ. ಆ ಸ್ಥಳಕ್ಕೆ ನಾವು ಭೇಟಿ ನೀಡಿದ್ದು, ಅದು ಸೆಕ್ಟರ್ ನಂ.57ರ ಕೊನೆ ಭಾಗದಲ್ಲಿದೆ. ಮೃತಪಟ್ಟ ಸೋಂಕಿತ ವ್ಯಕ್ತಿಯ ಮನೆಗೂ, ಮದುವೆ ನಡೆದ ಸ್ಥಳಕ್ಕೂ ದೂರವಿದೆ. ಕೇವಲ 50 ಜನರೊಂದಿಗೆ ಮದುವೆ ಮುಗಿಸಿರುವ ಕುರಿತು ಕ್ರಾಸ್ ಚೆಕ್ಕಿಂಗ್ ಕೂಡ ಮಾಡಿದ್ದೇವೆ. –ಗುರುಸಿದ್ದಯ್ಯ ಹಿರೇಮಠ, ತಹಶೀಲ್ದಾರ್, ಬಾಗಲಕೋಟೆ
ಕೋವಿಡ್-19 ದಿನೇ ದಿನೇ ಹೆಚ್ಚುತ್ತಿದ್ದು, ರವಿವಾರ ಪರವಾನಗಿಗಾಗಿ ಬಂದಿದ್ದ ನಾಲ್ಕು ಮದುವೆ ರದ್ದುಪಡಿಸಲಾಗಿದೆ. ನವನಗರದಲ್ಲಿ ಒಂದು ಮದುವೆ ನಡೆದಿದ್ದು, ಅವರು 15 ದಿನಗಳ ಹಿಂದೆಯೇ ಪರವಾನಗಿ ಪಡೆದಿದ್ದರು. ಆದರೂ ಸ್ಥಳ ಪರಿಶೀಲನೆ ನಡೆಸಲಾಗಿದೆ. –ಮುನಿಶಾಮಪ್ಪ, ಪೌರಾಯುಕ್ತ, ನಗರಸಭೆ
-ಶ್ರೀಶೈಲ ಕೆ. ಬಿರಾದಾರ