Advertisement

ಮನೆಗಳಿಗೂ ಹಬ್ಬುತ್ತಿದೆ ಕೋವಿಡ್; ಸ್ವಯಂ ಎಚ್ಚರಿಕೆ ಅಗತ್ಯ

10:23 PM Apr 29, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತೀವ್ರ ಗತಿಯಲ್ಲಿ ಹಬ್ಬುತ್ತಿದ್ದು, ಜಿಲ್ಲೆಯಲ್ಲಿ ಪ್ರತೀ ದಿನ ಸರಾ ಸರಿ    500ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ.  ಅದರಲ್ಲೂ ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚಿನ ಮನೆಗಳಲ್ಲಿ ತಲಾ ಐದಕ್ಕಿಂತ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

Advertisement

ಈ ಹಿಂದೆ ಹಾಸ್ಟೆಲ್‌ಗ‌ಳಲ್ಲಿ, ಅಪಾರ್ಟ್‌ ಮೆಂಟ್‌ಗಳಲ್ಲಿ ಸಹಿತ ಒಂದು ಮನೆಯಲ್ಲಿ ಸೀಮಿತ ಕೋವಿಡ್ ಪ್ರಕರಣ ದಾಖಲಾಗುತ್ತಿತ್ತು. ಆದರೆ ಎರಡು ವಾರಗಳಿಂದ ಈ ಸಂಖ್ಯೆ ಏರತೊಡಗಿದೆ. ಜಿಲ್ಲೆಯಲ್ಲಿ ಈ ತಿಂಗಳಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಇದೇ ಕಾರಣಕ್ಕೆ ಆರೋಗ್ಯ ಇಲಾಖೆ ಕೊರೊನಾ ತಪಾಸಣೆಯನ್ನೂ ಹೆಚ್ಚಳ ಮಾಡತೊಡಗಿದೆ.

ಪಾಸಿಟಿವಿಟಿ ರೇಟಿಂಗ್‌ ಶೇ.10ಕ್ಕೆ ಏರಿಕೆ :

ಜಿಲ್ಲೆಯಲ್ಲಿ ಈ ವರ್ಷ ಮಾರ್ಚ್‌ವರೆಗೆ ಶೇ.5.77ರಷ್ಟು ಪಾಸಿಟಿವಿಟಿ ರೇಟಿಂಗ್‌ ಇತ್ತು. ಇದೀಗ ಈ ಸಂಖ್ಯೆ ಸುಮಾರು ಶೇ.10ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಪ್ರತೀ ದಿನ 3ರಿಂದ 4 ಸಾವಿರ ಕೊರೊನಾ ರೋಗ ತಪಾಸಣೆ ನಡೆಯುತ್ತಿದ್ದು, ಇದರಲ್ಲಿ ದೊಡ್ಡ ಮಟ್ಟಿನ ಪಾಸಿಟಿವ್‌ ಪ್ರಕರಣ ದಾಖಲಾಗುತ್ತಿದೆ. ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕ ಸೇರಿದಂತೆ ರೋಗ ಗುಣ ಲಕ್ಷಣ ಉಳ್ಳವರ ತಪಾಸಣೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೋವಿಡ್ ಪಾಸಿಟಿವ್‌ ಸಂಖ್ಯೆ ದಿನವೊಂದಕ್ಕೆ ಒಂದು ಸಾವಿರಕ್ಕೆ ಏರಿಕೆಯಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಎ. 6ರಂದು ಶಕ್ತಿನಗರದ ಕಾರ್ಮಿಕರ ಕಾಲನಿಯಲ್ಲಿರುವ ಒಂದು ಮನೆಯ 7 ಮಂದಿಗೆ ಕೋವಿಡ್ ದೃಢಪಟ್ಟಿತ್ತು. ಎ. 16ರಂದು ನೀರುಮಾರ್ಗದ ಮನೆಯೊಂದರಲ್ಲಿ ಐದು ಮಂದಿಗೆ, ಎ. 18ರಂದು ಬಂಟ್ವಾಳ ತಾಲೂಕಿನ ಮಂಚಿ ಬಳಿಯ ಮನೆಯೊಂದರಲ್ಲಿ ಐವರು ಕೊರೊನಾಗೆ ತುತ್ತಾಗಿದ್ದರು. ಎ. 20ರಂದು ಮಂಗಳೂರಿನ ಪಾಂಡೇಶ್ವರ ಬಳಿ ಮನೆಯೊಂದರಲ್ಲಿ 5 ಮಂದಿಗೆ, ಕಟೀಲು ಬಳಿಯ ಮೆನ್ನಬೆಟ್ಟುವಿನ ಅಪಾರ್ಟ್‌ಮೆಂಟ್‌ವೊಂದರ 5 ಮಂದಿಗೆ ಮತ್ತು ಕಡಬ ಬಳಿಯ ಬೆಳಂದೂರಿನಲ್ಲಿ ಮನೆಯೊಂದರ 5 ಮಂದಿಗೆ ಕೊರೊನಾ ದೃಢಪಟ್ಟಿತ್ತು.

Advertisement

ಎ. 21ರಂದು ಭಟ್ರಕೆರೆಯ ಮನೆಯೊಂದರಲ್ಲಿ 8 ಮಂದಿ, ಬಜಪೆ ಬಳಿಯ 5 ಮಂದಿಗೆ ಕೊರೊನಾ ಸೋಂಕು ತಗಲಿತ್ತು. ಎ. 22ರಂದು ಮಂಗಳೂರಿನ ಕೊಡಿಯಾಲ್‌ಗ‌ುತ್ತು ಬಳಿ ಮನೆಯೊಂದರ 5 ಮಂದಿಗೆ, ಎ. 23ರಂದು ಕೊಣಾಜೆಯ ಒಂದು ಮನೆಯ ಐವರಿಗೆ, ಎ. 24ರಂದು ಮಂಗಳೂರು ನಗರದ ಮನೆಯೊಂದರಲ್ಲಿ 5 ಮಂದಿಗೆ ಮತ್ತು ಅಪಾರ್ಟ್‌ಮೆಂಟ್‌ ಒಂದರಲ್ಲಿ 5 ಮಂದಿಗೆ ಕೋವಿಡ್ ದೃಢಪಟ್ಟಿತ್ತು. ಸುಳ್ಯ ತಾಲೂಕಿನಲ್ಲಿ ಮನೆಯೊಂದರಲ್ಲೇ 6 ಮಂದಿಗೆ ಕೊರೊನಾ ಸೋಂಕು ತಗಲಿತ್ತು. ಎ. 25ರಂದು ಜೋಕಟ್ಟೆ ಬಳಿ ಮನೆಯೊಂದರ 11 ಮಂದಿಗೆ, ಎ. 27ರಂದು ಕೊಣಾಜೆ ಬಳಿ ಮನೆಯೊಂದರ 5 ಮಂದಿಗೆ, ನಿಡ್ಡೋಡಿ ಬಳಿ ಅಕ್ಕಪಕ್ಕದ 2 ಮನೆಯ 8 ಮಂದಿಗೆ, ಕಲ್ಲಮುಂಡ್ಕೂರು ಬಳಿ ಅಕ್ಕಪಕ್ಕದ ಮನೆಯ 16 ಮಂದಿಗೆ ಮತ್ತು ಮಂಚಿ ಬಳಿ ಮನೆಯೊಂದರ 5 ಮಂದಿಗೆ, ಬಲ್ಲಾಳ್‌ಬಾಗ್‌, ಹಂಪನಕಟ್ಟೆ ಪ್ರದೇಶ ಮನೆಯೊಂದರ ಐದು ಮಂದಿಗೆ ಕೊರೊನಾ ದೃಢಪಟ್ಟಿತ್ತು. ಈ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.

ಮುನ್ನೆಚ್ಚರಿಕೆ ಅಗತ್ಯ :

ದ.ಕ. ಜಿಲ್ಲೆಯಲ್ಲಿ ಕೋವಿಡ್ ದೈನಂದಿನ ಪ್ರಕರಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆದಷ್ಟೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೋವಿಡ್ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಲಾಕ್‌ಡೌನ್‌ ಮಾದರಿಯ ಕರ್ಫ್ಯೂ ವಿಧಿಸಿದ್ದು, ಈ ವೇಳೆ ರಸ್ತೆಗಳಲ್ಲಿ ಅನಗತ್ಯವಾಗಿ ಸಂಚರಿಸುವವರ ಸಂಖ್ಯೆ ಕಾಣುತ್ತಿದೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದರೆ ಮಾತ್ರ ಸೋಂಕು ಏರಿಕೆಗೆ ಕಡಿವಾಣ ಹಾಕಬಹುದಾಗಿದೆ.

4,884 ಹಾಸಿಗೆ ಲಭ್ಯ; 877 ಮಂದಿಗೆ ಚಿಕಿತ್ಸೆ :

ಜಿಲ್ಲೆಯಲ್ಲಿ ಎ. 27ರ ವರೆಗೆ 4,290 ಸಕ್ರಿಯ ಪ್ರಕರಣ ಇದ್ದು, ಇದರಲ್ಲಿ 877 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 3,413 ಮಂದಿ ಗೃಹ ನಿಗಾವಣೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಟ್ಟು 877 ಮಂದಿ ಪೈಕಿ 281 ಮಂದಿ ನಾರ್ಮಲ್‌ ಬೆಡ್‌, 390 ಮಂದಿ ಆಕ್ಸಿಜನ್‌, 55 ಮಂದಿ ಹೈ ಆಕ್ಸಿಜನ್‌, 77 ಮಂದಿ ಐಸಿಯುನಲ್ಲಿ ಮತ್ತು 74 ಮಂದಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆನಾÉಕ್‌ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಒಟ್ಟು 274 ಹಾಸಿಗೆ ಮೀಸಲಿರಿಸಲಾಗಿದ್ದು, ಸದ್ಯ 83 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 66 ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ 4,884 ಹಾಸಿಗೆ ಮೀಸಲಿರಿಸಿದ್ದು, ಸದ್ಯ 877 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ವೆನಾÉಕ್‌ ಆಸ್ಪತ್ರೆಯ ಪ್ರತ್ಯೇಕ ಬ್ಲಾಕ್‌ನಲ್ಲಿ ಕೊರೊನೇತರರಿಗೆ ಚಿಕಿತ್ಸೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next