ಪಣಜಿ: ಮುಂದಿನ 8 ರಿಂದ 10 ದಿನಗಳಲ್ಲಿ ಗೋವಾದಲ್ಲಿ ಕೊರೊನ ಸೋಂಕಿನ ಮೂರನೇಯ ಅಲೆ ತೀವ್ರಗೊಳ್ಳುವ ಆತಂಕವಿದ್ದು, ಆ ವೇಳೆ ಪ್ರತಿದಿನ 10 ರಿಂದ 15 ಸಾವಿರ ಜನರಿಗೆ ಕರೋನಾ ಸೋಂಕು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞ ರ ಸಮಿತಿ ಹಾಗೂ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯ ಡಾ. ಶೇಖರ್ ಸಾಲ್ಕರ್ ಅಂದಾಜಿಸಿದ್ದಾರೆ.
ಗೋವಾದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚಳವಾಗುತ್ತಿದೆ.ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಬೀಡುವ ಸಾಧ್ಯತೆಯಿದೆ ಎಂದು ಡಾ. ಶೇಖರ್ ಸಾಲ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಗೋವಾ ಮೆಡಿಕಲ್ ಕಾಲೇಜಿನಲ್ಲಿ ಶೇ 40 ರಷ್ಟು ಬೆಡ್‍ಗಳು ರೋಗಿಗಳಿಂದ ಭರ್ತಿಯಾದರೆ ರಾಜ್ಯದಲ್ಲಿ ಇನ್ನಷ್ಟು ನಿರ್ಬಂಧ ವಿಧಿಸಬೇಕಾಗಲಿದೆ. ಶೇ 50 ರಷ್ಟು ಬೆಡ್‍ಗಳು ಭರ್ತಿಯಾದರೆ ಉತ್ತರ ಮತ್ತು ದಕ್ಷಿಣ ಗೋವಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳಿಗಾಗಿ ಕಾಯ್ದಿರಿಸಬೇಕಾಗಲಿದೆ. ಇದರ ನಂತರ ರಾಜ್ಯದಲ್ಲಿ ಕರ್ಫ್ಯೂ ಅಥವಾ ಕಟ್ಟುನಿಟ್ಟಾದ ಲಾಕ್‍ಡೌನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಡಾ. ಶೇಖರ್ ಸಾಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನೈಟ್ ಕರ್ಫ್ಯೂ ಅರ್ಥವಿಲ್ಲ
ನೈಟ್ ಕರ್ಫ್ಯೂ ಹೇರುವ ಮಾತಿಗೆ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅಂತ್ಯ ಹಾಡಿದ್ದಾರೆ.ಸದ್ಯ ಗೋವಾ ಕರೋನಾ ಭೀತಿಯಲ್ಲಿದೆ. ಹೆಚ್ಚುತ್ತಿರುವ ಕರೋನಾ ಸೋಂಕಿತರ ಸಂಖ್ಯೆ ರಾಜ್ಯ ಸರ್ಕಾರ ಮತ್ತು ನಾಗರೀಕರ ಆತಂಕದ ವಿಷಯವಾಗಿದೆ. ನೈಟ್ ಕರ್ಫ್ಯೂ ಜಾರಿಗೊಳಿಸಿದರೆ ಜನತೆ ಅದನ್ನು ಪಾಲಿಸಬೇಕು ಇಲ್ಲವಾದಲ್ಲಿ ನಿರ್ಬಂಧ ಹೇರುವುದರಲ್ಲಿ ಅರ್ಥವಿಲ್ಲ ಎಂದರು.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜನರು ನಿರ್ಬಂಧಗಳನ್ನು ಪಾಲಿಸದಿದ್ದರೆ ನಿರ್ಬಂಧಗಳನ್ನು ಹೇರುವುದರಲ್ಲಿ ಅರ್ಥವಿಲ್ಲ. ಪ್ರಸ್ತುತ ಹೋಟೆಲ್‍ಗಳಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿದೆ. ಜನರು ಮಾಸ್ಕ್ ಧರಿಸಬೇಕು. ರಾಜ್ಯದಲ್ಲಿ ಅನೇಕ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.
ನಾವು ರಾಜ್ಯದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಕಾಯ್ದಿರಿಸಿದ್ದೇವೆ, ಜನರಲ್ಲಿ ಭಯ ಬೇಡ ಎಂದರು.