ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ನಗರದಲ್ಲಿ ದಿನೇ ದಿನೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಭಾನುವಾರ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸಭೆ ನಡೆಯಿತು. ನಗರದಲ್ಲಿ ಸಂಚಾರ ದಟ್ಟಣೆ ಕ್ರಮೇಣ ಏರಿಕೆಯಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಅಧಿಕವಾಗುತ್ತಿವೆ. ಆ ನಿಟ್ಟಿ ನಲ್ಲಿ ಸಂಚಾರ ಪೊಲೀಸರು ಜಾಗ್ರತೆ ವಹಿಸ ಬೇಕು. “ಪೀಕ್ ಅವರ್’ನಲ್ಲಿ ಜಂಕ್ಷನ್‌ಗಳಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿಜಿಟಲ್ ಕಾರ್ಯಾಚರಣೆ ಹೆಚ್ಚಿಸಿ: ಸಂಚಾರ ವಿಭಾಗದಲ್ಲಿ 50 ವರ್ಷ ಮೇಲ್ಪಟ್ಟವರೇ ಹೆಚ್ಚು ಕಾರ್ಯನಿರ್ವಹಿಸುತ್ತಿದ್ದು, ಕೊರೊನಾ ಸಂಬಂಧ ಸದ್ಯ ಎಲ್ಲರೂ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವ ಸಿಬ್ಬಂದಿಯಲ್ಲಿ ಎಲ್ಲೆಡೆ ಸಂಚಾರ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಡಿಜಿಟಲ್ ಕಾರ್ಯಾಚರಣೆ ಹೆಚ್ಚಳ ಮಾಡುವಂತೆ ಆಯುಕ್ತರು ಸೂಚಿಸಿದ್ದಾರೆ.
ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಜಂಕ್ಷನ್ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತೆಗೆದು ಕಳುಹಿಸುವ ಫೋಟೋಗಳು, ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಸಂಚಾರ ನಿರ್ವಹಣಾ ಕೇಂದ್ರದಲ್ಲೇ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.ಈ ಮಧ್ಯೆಯೂ ನಗರದ ಎಲ್ಲ ಜಂಕ್ಷನ್ ಗಳಲ್ಲಿ ಕಡ್ಡಾಯವಾಗಿ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಸಮನ್ವಯತೆ: ಸಂಚಾರ ಪೊಲೀಸರು, ಬಿಬಿಎಂಪಿ ಮತ್ತು ಆರ್‌ಟಿಓ ಅಧಿಕಾರಿಗಳ ಜತೆ ಸಮನ್ವಯ ಹೆಚ್ಚಿಸಿಕೊಳ್ಳಬೇಕು. ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಆದೇಶಿಸಿದ್ದಾರೆ. ಇದೇ ವೇಳೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್. ರವಿಕಾಂತೇಗೌಡ ಸಂಚಾರ ವಿಭಾಗದ ಕುರಿತು ಸಂಪೂರ್ಣ ಚಿತ್ರಣವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಡಿಸಿಪಿಗಳಾದ ಸಾರಾ ಫಾತೀಮಾ, ಡಾ. ಸೌಮ್ಯಲತಾ, ನಾರಾಯಣ್ ಇದ್ದರು.