Advertisement

ಅಂಗವಿಕಲ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವ ಧನಕ್ಕೆ ಕೋವಿಡ್ ಕಾಟ

12:24 AM Oct 19, 2020 | mahesh |

ಕುಂದಾಪುರ: ರಾಜ್ಯದ ಪ್ರತಿ ಗ್ರಾಮ ಪಂ.ಗಳಲ್ಲಿರುವ ಅಂಗವಿಕಲ ಪುನರ್ವಸತಿ ಕಾರ್ಯಕರ್ತರು, ತಾಲೂಕು ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವಧನ ಕೈ ಸೇರದೇ 6 ತಿಂಗಳಾದವು. ಕೋವಿಡ್ ಲಾಕ್‌ಡೌನ್‌ ಘೋಷಣೆ ಯಾದಂದಿನಿಂದ ಈವರೆಗೆ ಇವರಿಗೆ ಗೌರವಧನ ಬಂದಿಲ್ಲ. ಹೀಗೆ ಪುನರ್ವಸತಿ ಕಾರ್ಯಕರ್ತರಾಗಿರುವವರು ಕೂಡ ಅಂಗವಿಕಲರು ಎನ್ನುವುದು ಗಮನಾರ್ಹ. ಅಂತೆಯೇ ಹಿರಿಯ ನಾಗರಿಕರ ಹೆಲ್ಪ್ಲೈನ್‌ನ ಕಾರ್ಯಕರ್ತರಿಗೆ ಒಂದು ವರ್ಷದಿಂದ ವೇತನ ಬಿಡುಗಡೆಯಾಗಿಲ್ಲ.

Advertisement

ಎಷ್ಟು ಜನ
ರಾಜ್ಯದಲ್ಲಿ 6,022 ಗ್ರಾ. ಪಂ.ಗಳಲ್ಲಿ ಗ್ರಾಮ ಪುನರ್ವಸತಿ ಕಾರ್ಯ ಕರ್ತರು, 613 ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಪುನರ್ವಸತಿ ಕಾರ್ಯಕರ್ತರು, 176 ತಾಲೂಕುಗಳಲ್ಲಿ ಬಹುವಿಧ ಪುನರ್ವಸತಿ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಪಂಚಾಯತ್‌ಗಳು ಹಾಗೂ ತಾಲೂಕುಗಳ ಸಂಖ್ಯೆ ಹೆಚ್ಚಾಗಿದ್ದು 224 ತಾಲೂಕುಗಳಲ್ಲಿ ಹೆಚ್ಚುವರಿ ಯಾದ ಪಂಚಾಯತ್‌ಗಳಲ್ಲೂ ಕಾರ್ಯಕರ್ತರಿದ್ದಾರೆ.

ಸೌಕರ್ಯ
ಕಾರ್ಯಕರ್ತರಿಗೆ ಗೌರವಧನದ ಜತೆ ಓಡಾಟದ ಖರ್ಚನ್ನು ಪಂಚಾಯತ್‌ ಇದೇ ಮೀಸಲು ನಿಧಿ ಮೂಲಕ ಭರಿಸುತ್ತದೆ. ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರ ನಿಧಿ ಮೂಲಕ ಇವರಿಗೆ ಓಡಾಟಕ್ಕೆ ತ್ರಿಚಕ್ರ ವಾಹನ ಕೊಡಿಸ ಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಇವರಿಗೆ ಕಚೇರಿ ಸೌಲಭ್ಯ ನೀಡಬೇಕು, ತಾಲೂಕು ಮಟ್ಟವಾದರೆ ಸಂಪನ್ಮೂಲ ಕೇಂದ್ರ, ಕಚೇರಿ ನೀಡಬೇಕು ಎಂದು ನಿಯಮ ಇದೆ.

ಸಮೀಕ್ಷೆ
21 ವಿಧದ ಅಂಗವಿಕಲರ ಸಮೀಕ್ಷೆ ನಡೆಸಲಾಗಿದೆ. ದ್ವಿಪ್ರತಿ ದಾಖಲಾಗಿ ಮಾಸಾಶನ ಎರಡು ಬಾರಿ ಹೋಗುವ ಕಾರಣದಿಂದ ಈಗ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತಿದೆ. 2011ರ ಗಣತಿಯಂತೆ ರಾಜ್ಯದಲ್ಲಿ 13.24 ಲಕ್ಷ ಜನ ಅಂಗವಿಕಲರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 15 ಸಾವಿರ ಜನ ಅಂಗವಿಕಲರು ಇದ್ದು 7,481 ಜನ ಸ್ಮಾರ್ಟ್‌ ಕಾರ್ಡ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಕುಂದಾಪುರದ 3,482 ಜನ ಅರ್ಜಿ ಸಲ್ಲಿಸಿದ್ದು 1,021 ಜನರಿಗೆ ಕಾರ್ಡ್‌ ನೀಡಲಾಗಿದೆ.

ಹಿರಿಯ ನಾಗರಿಕರ ಪ್ರತಿನಿಧಿ
ಹಿರಿಯ ನಾಗರಿಕರ ಹೆಲ್ಪ್ಲೈನ್‌ನ ಕಾರ್ಯಕರ್ತರಿಗೆ ಕಳೆದ 1 ವರ್ಷದಿಂದ ವೇತನ ಬಿಡುಗಡೆಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ನಾಲ್ವರಿದ್ದಾರೆ.

Advertisement

ಎಷ್ಟು ವೇತನ
ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸು ವವರಿಗೆ ಈ ಮೊದಲು ಮಾಸಿಕ 750 ರೂ. ಗೌರವಧನ ನೀಡಲಾಗುತ್ತಿತ್ತು. 2017-18ರಲ್ಲಿ ಅದು 2 ಸಾವಿರ ರೂ. ಇದ್ದುದು 3 ಸಾವಿರ ರೂ.ವರೆಗೆ ಏರಿಕೆಯಾಯಿತು. ಈ ವರ್ಷ ಫೆ.12ಕ್ಕೆ ಹೊಸ ಆದೇಶ ಬಂದು ಮಾರ್ಚ್‌ನಿಂದ 6 ಸಾವಿರ ರೂ.ಗಳಂತೆ ಸಂಭಾವನೆ ಏರಿಕೆಯಾಗಿದೆ. ಇದೇ ಮಾದರಿಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಕಾಯನಿರ್ವಹಿಸುವ ಬಹುವಿಧ ಕಾರ್ಯಕರ್ತರಿಗೆ ಮಾಸಿಕ 12 ಸಾವಿರ ರೂ. ಗೌರವಧನ ಇದೆ. ಮಾರ್ಚ್‌ನಲ್ಲಿ ಕೊರೊನಾ ಲಾಕ್‌ಡೌನ್‌ ಘೋಷಣೆಯಾದಲ್ಲಿಂದಲೇ ಈ ವೇತನ ಹಳ್ಳಿ ಹಳ್ಳಿಗಳಲ್ಲಿರುವ ಅಂಗವಿಕಲರ ಕೈ ಸೇರಿಲ್ಲ. ಲಭ್ಯ ಮಾಹಿತಿ ಪ್ರಕಾರ ಮೂರು ತಿಂಗಳ ವೇತನ ಮಂಜೂರಾಗಿದ್ದು ಇನ್ನುಳಿದ ಮೂರು ತಿಂಗಳ ವೇತನಾನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

1 ವಾರದಲ್ಲಿ ಲಭ್ಯ
ಮಾರ್ಚ್‌ನಿಂದ ಜೂನ್‌ವರೆಗಿನ ಗೌರವಧನ ಪಾವತಿಗೆ ಅನುದಾನ ಬಿಡುಗಡೆಯಾಗಿದ್ದು 1 ವಾರದಲ್ಲಿ ಪಂಚಾಯತ್‌ ಹಾಗೂ ತಾಲೂಕು ಕಾರ್ಯಕರ್ತರಿಗೆ ದೊರೆಯಲಿದೆ. ಅದರ ಅನಂತರದ ಗೌರವಧನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ರತ್ನಾ, ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ, ಉಡುಪಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next