ಧಾರವಾಡ: ಮನೆ ಕಟ್ಟುವುದಕ್ಕೆ ಅಗತ್ಯ ವಸ್ತುಗಳು ಕೊರತೆ, ಕಾರ್ಮಿಕರ ಕೊರತೆ, ಇದರ ಮಧ್ಯೆ ಮಳೆ, ಮತ್ತೂಂದೆಡೆ ಕೋವಿಡ್ ಕರಿಛಾಯೆ. ಒಟ್ಟಿನಲ್ಲಿ ಕಳೆದ ವರ್ಷದ ಅತಿವೃಷ್ಟಿಗೆ ಮನೆ ಕಳೆದುಕೊಂಡವರು ಸೂರು ಮುಚ್ಚಿಕೊಳ್ಳುವ ಮೊದಲೇ ಮತ್ತೂಂದು ಮಳೆಗಾಲ ಎದುರಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷದ ಭಾರಿ ಮಳೆಗೆ 21 ಸಾವಿರಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದವು. ಸರ್ಕಾರದ ಭರವಸೆ ಮತ್ತು ತುರ್ತು ಕ್ರಮಗಳಿಂದ ಒಂದಿಷ್ಟು ಜನರಿಗೆ ನೇರವಾಗಿ ನೆರವು ಸಿಕ್ಕಿದ್ದು ಸತ್ಯವಾದರೂ, ತಾಂತ್ರಿಕ ಅಡಚಣೆಗಳು, ಕೋವಿಡ್ ಮಹಾಮಾರಿಯ ಲಾಕ್‌ಡೌನ್ ದುಷ್ಪರಿಣಾಮ ಎಲ್ಲವೂ ಸೇರಿ ಇದೀಗ ಇವರ ಮನೆ ಮಾಳಿಗೆ ಸೋರುತ್ತಿದ್ದು, ಮನೆಗಳನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಜಿಪಿಎಸ್ ಮಾಡಲಾಗದ ಮನೆಗಳು, ತಾಂತ್ರಿಕ ತೊಂದರೆಯಿಂದ ಮನೆಗಳು, ಪರಿಹಾಸ ಸಿಕ್ಕದೇ ಕಟ್ಟಲಾಗದ ಮನೆಗಳು ಹೀಗೆ ಅನೇಕ ತೊಂದರೆಗಳಿಂದ ಇನ್ನು 6 ಸಾವಿರಕ್ಕೂ ಅಧಿಕ ಮನೆಗಳು ಕಳೆದ ವರ್ಷದ ಜಖಂ ಆಗಿರುವ ಹಂತದಲ್ಲಿಯೇ ಉಳಿದುಕೊಂಡಿವೆ ಎನ್ನಲಾಗಿದೆ. ಈ ಕುರಿತು ಅನೇಕ ಗ್ರಾಪಂಗಳು ಜಿಲ್ಲಾಡಳಿತಕ್ಕೆ ಮಾಹಿತಿ ಕೂಡ ನೀಡಿವೆ. ಇನ್ನು ಅತೀವೃಷ್ಠಿ ಹಾನಿ ಮತ್ತು ಅದರ ಪುನರ್ ನಿರ್ಮಾಣ ಕಾರ್ಯಕ್ಕೆ ನಿಯೋಜಿಸಿದ್ದ ಅಧಿಕಾರಿಗಳನ್ನು ಜಿಲ್ಲಾಡಳಿತ ಕೋವಿಡ್-19 ನಿಯಂತ್ರಣಕ್ಕಾಗಿ ನೇಮಿಸಿದ್ದರಿಂದ ಸರ್ಕಾರದಿಂದ ಸಿಕ್ಕಬೇಕಾದ ನೆರುವು ಮತ್ತಷ್ಟು ವಿಳಂಬವಾಯಿತು.
ಅದರಲ್ಲೂ ಮನೆಗಳ ಜಿಪಿಎಸ್ ಆಗದೇಯೇ ಪರಿಹಾಧನ ಬಿಡುಗಡೆ ಅಸಾಧ್ಯವಾಗಿದೆ. ಆದರೆ ಇನ್ನು ನೂರಾರು ಮನೆಗಳ ಜಿಪಿಎಸ್ ಬಾಕಿ ಇದ್ದು, ಅವುಗಳ ತ್ವರಿತ ವಿಲೇವಾರಿ ಆಗುತ್ತಲೇ ಇಲ್ಲ. ಸಿ ವರ್ಗದ ಸಾವಿರಾರು ಮೆನಗಳಿಗೆ ಈಗಾಗಲೇ ಮೊದಲ ಹಂತದಲ್ಲಿಯೇ ಚೆಕ್ ಮೂಲಕ ಪರಿಹಾರ ನೀಡಲಾಗಿದೆ. ಆದರೆ ಎ ವರ್ಗದ ಮನೆಗಳಿಗೆ ಮೊದಲ ಹಂತದ ಪರಿಹಾರ ಧನ ಮಾತ್ರ ಬಂದಿದ್ದು, ಉಳಿದ ಬಾಕಿ ಹಣ ಬರಬೇಕಿದೆ.
6 ಸಾವಿರಕ್ಕೂ ಅಧಿಕ ಮನೆ ಬಾಕಿ? : ಗ್ರಾಮಾಂತರ ಪ್ರದೇಶದಲ್ಲಿ 17500ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತು. ಈ ಪೈಕಿ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ ಅವುಗಳಿಗೆ ಕ್ರಮವಾಗಿ 5 ಲಕ್ಷ, 3 ಲಕ್ಷ ಮತ್ತು 1 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಹಾನಿಗೀಡಾಗಿದ್ದ ಮನೆಗಳ ಪುನರ್‌ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿ ಶೀಘ್ರವೇ ಅವುಗಳನ್ನು ಜಿಪಿಎಸ್‌ಗೆ ಅಳವಡಿಸಬೇಕಾಗಿತ್ತು. ಜೂ. 3ರ ವರೆಗೆ ಎ ಕೆಟಗೇರಿಯ 110 ಮನೆಗಳ ನಿರ್ಮಾಣ ಆರಂಭವಾಗಿದೆ ಅಷ್ಟೆ. ಇನ್ನು 8 ಮನೆಗಳ ನಿರ್ಮಾಣ ಬಾಕಿ ಇದೆ. ಬಿ ಕೆಟಗೇರಿಯ 1687 ಮನೆಗಳಿದ್ದು, 1466 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. 220 ಮನೆಗಳು ಬಾಕಿ ಇವೆ. ಇನ್ನು ಸಿ ಕೆಟಗೇರಿಯ 19,170 ಮನೆಗಳಲ್ಲಿ ಈಗಾಗಲೇ ಬಹುತೇಕ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಆದರೂ ಇಲ್ಲಿಯೇ 5 ಸಾವಿರಕ್ಕೂ ಅಧಿಕ ಮನೆಗಳು ಬಾಕಿ ಇವೆ ಎನ್ನಲಾಗಿದೆ. ಅವುಗಳನ್ನು ತ್ವರಿತವಾಗಿ ಜಿಪಿಎಸ್ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಅನೇಕ ಬಾರಿ ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡುತ್ತಲೇ ಇದ್ದರೂ, ಕೆಲಸ ಮಾತ್ರ ಆಗಿಲ್ಲ
ಮಾಳಿಗೆ ಮನೆಗಳ ಸಮಸ್ಯೆ : ಪ್ರತಿವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯ ಬಯಲುಸೀಮೆ ನಾಡಿನ ಮಾಳಿಗೆ ಮನೆಗಳಿಗೆ ರೈತರು ಮಣ್ಣು ಹಾಕುತ್ತಾರೆ. ಅಂದರೆ ಮನೆಯ ತಾರಸಿಯ ಮೇಲೆ ಹೊಸದೊಂದು ಮಣ್ಣಿನ ಪದರ ರಚಿಸುತ್ತಾರೆ. ಇದರಿಂದ ಮಾಳಿಗೆ ಮನೆಗಳು ಮಳೆಗಾಲದಲ್ಲಿ ಸೋರುವುದಿಲ್ಲ. ಆದರೆ ಈ ವರ್ಷ ಕೋವಿಡ್ ಲಾಕ್‌ಡೌನ್ ಬಂದಿದ್ದರಿಂದ ಹಳ್ಳಿಗರು ತಮ್ಮ ಮನೆಯ ಮಾಳಿಗೆಗಳಿಗೆ ಮಣ್ಣು ಹಾಕಿಸಿಲ್ಲ. ಹೀಗಾಗಿ ಈ ವರ್ಷದ ಮಳೆಗಾಲವೇನಾದರೂ ಅಧಿಕವಾದರೆ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮನೆಗಳು ಬೀಳುವುದು ಖಾತರಿ ಎನ್ನುವ ಆತಂಕದಲ್ಲಿದ್ದಾರೆ ಬೆಳವಲದ ಜನರು.
ಕೋವಿಡ್ ಏಟು : ಮಾರ್ಚ್‌ನಿಂದ ಸತತ ಮೂರು ತಿಂಗಳು ಕೋವಿಡ್ ತಂದಿಟ್ಟ ಫಜೀತಿಯಿಂದಾಗಿ ಮನೆಗಳನ್ನು ಪುನರ್ ನಿರ್ಮಿಸಿಕೊಳ್ಳುವುದು ಹಳ್ಳಿಗರಿಗೆ ಸಾಧ್ಯವಾಗಲಿಲ್ಲ. ಮನೆಕಟ್ಟಲು ಬೇಕಾಗುವ ಮರಳು, ಸಿಮೆಂಟ್ ಸಿಕ್ಕಲಿಲ್ಲ. ಇನ್ನೊಂದೆಡೆ ಇಟ್ಟಿಗೆ, ಮಣ್ಣು ಸಾಗಾಟವೂ ನಿಷೇಧವಾಗಿದ್ದರಿಂದ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ಓಡಾಟ ಸ್ಥಗಿತಗೊಂಡಿದ್ದರಿಂದ ಮನೆಗಳ ನಿರ್ಮಾಣವಾಗಲೇ ಇಲ್ಲ
ಸರ್ಕಾರದಿಂದ ಬಹುತೇಕ ಮನೆಗಳಿಗೆ ಪರಿಹಾರ ನೀಡಲಾಗಿದೆ. ಆದರೆ ಕೋವಿಡ್ ದಿಂದ ಮನೆಗಳ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಇದೀಗ ಮನೆ ಕಟ್ಟುವುದಕ್ಕೆ ಅವಕಾಶವಿದೆ. ಒಂದಿಷ್ಟು ಜಿಪಿಎಸ್ ಬಾಕಿ ಉಳಿದಿದ್ದು ಅವುಗಳನ್ನು ಶೀಘ್ರವೇ ಮುಗಿಸುತ್ತೇವೆ.
– ದೀಪಾ ಚೋಳನ್, ಜಿಲ್ಲಾಧಿಕಾರಿ
ನಮ್ಮ ಮನೆಗಳು ತೀವ್ರ ಹಾನಿಗೆ ಒಳಗಾಗಿ ಬಿದ್ದಿದ್ದವು. ಆದರೆ ನಮ್ಮ ಮನೆಗಳನ್ನು ಸಿ ವರ್ಗಕ್ಕೆ ಸೇರಿಸಲಾಗಿದೆ. ಇದರಿಂದ ಬರೀ 1 ಲಕ್ಷ ರೂ. ಪರಿಹಾರ ಮಾತ್ರ ಬಂದಿದೆ. ಇನ್ನು 2 ಲಕ್ಷ ರೂ. ಪರಿಹಾರ ಬರಬೇಕಿದೆ. –
ಶಂಕರಪ್ಪ, ಹೆಬ್ಬಳ್ಳಿ ಗ್ರಾಮಸ್ಥ
-ಬಸವರಾಜ ಹೊಂಗಲ್