ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಬೀರಿರುವ ಪರಿಣಾಮಗಳ ಕುರಿತು ರಾಜ್ಯ ಯೋಜನ ಮಂಡಳಿ ಅಧ್ಯಯನ ನಡೆಸುತ್ತಿದೆ. ಸೋಂಕು ಹರಡುವುದನ್ನು ನಿಯಂತ್ರಿಸಲು ಮಾರ್ಚ್ ಮಾಸಾಂತ್ಯದಲ್ಲಿ ಆರಂಭವಾದ ಲಾಕ್‌ಡೌನ್ ತೆರವುಗೊಳಿಸಿದ ಬಳಿಕವೂ ರಾಜ್ಯದ ಕೃಷಿ, ತೋಟಗಾರಿಕೆ, ಸಾರಿಗೆ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆ, ಕಾರ್ಮಿಕರು, ಉದ್ಯೋಗಿಗಳ ಮೇಲೆ ಉಂಟಾಗಿರುವ ಪರಿಣಾಮ, ಆಗಿರುವ ನಷ್ಟ ಮುಂತಾದವುಗಳ ಬಗ್ಗೆ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಂಶೋಧನೆ ನಡೆಸಲಾಗುತ್ತಿದೆ. ದೇಶದಲ್ಲಿಯೇ ಈ ರೀತಿಯ ಸಂಶೋಧನೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಡೆಯುತ್ತಿದೆ.
ಲಾಕ್‌ಡೌನ್‌ನಿಂದ ರಾಜ್ಯ ಸರಕಾರದ ಪ್ರಮುಖ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜನರನ್ನು ಗಮನದಲ್ಲಿಟ್ಟುಕೊಂಡು ಈ ಸಂಶೋಧನೆ ನಡೆಸಲಾಗುತ್ತಿದೆ. ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಕೈಗಾರಿಕೆ, ಸಾರಿಗೆ, ಇಂಧನ, ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ ಇಲಾಖೆ ಸಹಿತ ಎಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿ ಆಗಿರುವ ಸಮಸ್ಯೆಗಳು, ಕಂಡುಕೊಳ್ಳಬೇಕಾದ ಪರಿಹಾರದ ಕುರಿತು ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಯೋಜನ ಮಂಡಳಿಗೆ ವರದಿ ಸಲ್ಲಿಸಲಿದ್ದಾರೆ.
ಲಾಕ್‌ಡೌನ್‌ನಿಂದ ಸರಕಾರ ಹಾಗೂ ಸಮಾಜದ ಮೇಲಾಗಿರುವ ವಾಸ್ತವ ಅರಿಯದೇ ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿ ಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಯೋಜನ ಮಂಡಳಿ ಲಾಕ್‌ಡೌನ್ ಸಂದರ್ಭದಲ್ಲಿಯೇ ವೆಬಿನಾರ್ ಆಯೋಜಿಸಿ, ಅದರಲ್ಲಿ ವಿಶ್ವಾದ್ಯಂತ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದರು. ಆ ವೆಬಿನಾರ್‌ನಲ್ಲಿ ಬೇರೆ ಬೇರೆ ರಾಷ್ಟ್ರಗಳು ಹಾಗೂ ದೇಶದ ಬೇರೆ ರಾಜ್ಯಗಳಿಂದ ಸುಮಾರು 300 ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಜೂನ್, ಜುಲೈ ತಿಂಗಳಲ್ಲಿಯೇ ಸಂಶೋಧನ ಕಾರ್ಯ ಆರಂಭಿಸಲಾಗಿದೆ.
ನವೆಂಬರ್‌ನಲ್ಲಿ ಸರಕಾರಕ್ಕೆ ವರದಿ
ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಸಲ್ಲಿಸುವ ವರದಿ ಹಾಗೂ ಶಿಫಾರಸುಗಳನ್ನು ಆಧಾರವಾಗಿ ಇರಿಸಿಕೊಂಡು ರಾಜ್ಯ ಸರಕಾರದ ಪ್ರತಿಯೊಂದು ಇಲಾಖೆಯೂ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಹಾಕಿಕೊಳ್ಳುವ ಹಾಗೂ ಬದಲಾವಣೆ ಮಾಡಿಕೊಳ್ಳುವ ಕುರಿತಂತೆ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ನವೆಂಬರ್ ಮೊದಲ ವಾರದಲ್ಲಿ ಸಲ್ಲಿಸಲು ಮಂಡಳಿ ನಿರ್ಧರಿಸಿದೆ.
ಕೊರೊನಾ ಬಳಿಕ ಸರಕಾರದ ಇಲಾಖೆಗಳಲ್ಲಿ ಮಾಡಿಕೊಳ್ಳ ಬೇಕಾದ ಬದಲಾವಣೆಗಳು ಹಾಗೂ ಯೋಜನೆಗಳನ್ನು ರೂಪಿಸಲು ಕೋವಿಡ್ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಂದ ಸಂಶೋಧನೆ ಮಾಡಲಾಗುತ್ತಿದೆ. ಅವರ ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಯೋಜನೆ ರೂಪಿಸಲು ಶಿಫಾರಸು ಮಾಡಲಾಗುವುದು.
ಬಿ. ಜೆ. ಪುಟ್ಟಸ್ವಾಮಿ, ರಾಜ್ಯ ಯೋಜನ ಮಂಡಳಿ ಉಪಾಧ್ಯಕ್ಷ
ಶಂಕರ ಪಾಗೋಜಿ