Advertisement

ಜಿಪಂ ಚುನಾವಣೆಗೆ ಕೋವಿಡ್ 2ನೇ ಅಲೆ ಅಡ್ಡಿ

06:53 PM Apr 21, 2021 | Team Udayavani |

ವರದಿ : ಶ್ರೀಶೈಲ ಕೆ.ಬಿರಾದಾರ

Advertisement

ಬಾಗಲಕೋಟೆ: ಜಿಲ್ಲಾ ರಾಜಕಾರಣದ ಪ್ರಮುಖ ಮೆಟ್ಟಿಲು ಎಂದೇ ಕರೆಯಿಸಿಕೊಳ್ಳುವ ಜಿಪಂ ಚುನಾವಣೆಗೆ ಕೊರೊನಾ 2ನೇ ಅಲೆ ಅಡ್ಡಿಯಾಗಿದ್ದು, ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಚುನಾವಣೆ ಮುಂದೂಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದ ಹಲವರು, ಇನ್ನೂ ಸ್ವಲ್ಪ ದಿನ ಕಾಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೌದು. ಜಿಪಂ-ತಾಪಂ ಚುನಾವಣೆ ಪ್ರತಿಷ್ಠೆಯಿಂದ ನಡೆಯುತ್ತವೆ. ತಾಪಂಗಿಂತಲೂ ಜಿಪಂ ಚುನಾವಣೆಗೆ ಸ್ಪರ್ಧಿಸಲು ಎಲ್ಲಾ ರಾಜಕೀಯ ಪಕ್ಷಗಳಲ್ಲಿಯ ಹಲವರು ಪೈಪೋಟಿ ನಡೆಸುತ್ತಾರೆ. ಈಗಾಗಲೇ ಸದಸ್ಯರಾದವರೂ ಬೇರೆ ಬೇರೆ ಕ್ಷೇತ್ರಗಳತ್ತ ವಲಸೆ ಹೋಗಿ ಚುನಾವಣೆ ಎದುರಿಸುವ ತಯಾರಿಯಲ್ಲಿದ್ದಾರೆ. ಕೊರೊನಾ ಅಡ್ಡಿ: ಹಾಲಿ ಸದಸ್ಯರ ಅಧಿಕಾರವಧಿ ಮೇ 15ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಪ್ರಸ್ತುತ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳುವ ಆರು ತಿಂಗಳ ಮೊದಲೇ ಚುನಾವಣೆ ನಡೆಸಬೇಕು ಎಂಬುದು ಆಯೋಗದ ನಿಯಮ. ಆದರೆ ಸದ್ಯ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆಯ ಭೀತಿ ಹೆಚ್ಚಾಗಿದೆ. ಇದರಿಂದ ಜಿಲ್ಲೆಯ ಪ್ರವಾಸಿ ತಾಣ, ಪ್ರಮುಖ ದೇವಾಲಯಗಳಿಗೂ ಬೀಗ ಜಡಿಯಲಾಗಿದೆ.

ಜನರ ಆರೋಗ್ಯ ದೃಷ್ಟಿಯಿಂದ ಸದ್ಯ ಅನಿವಾರ್ಯವೂ ಹೌದು. ಜಿಪಂ-ತಾಪಂ ಚುನಾವಣೆಗೆ ಹಲವರು ಸಿದ್ಧತೆ ಮಾಡಿಕೊಂಡಿದ್ದರು. ಕಾಂಗ್ರೆಸ್‌ -ಬಿಜೆಪಿ ಪಕ್ಷಗಳಲ್ಲಿ ಪ್ರಮುಖ ತಯಾರಿ ಕೂಡ ನಡೆದಿದೆ. ಜೆಡಿಎಸ್‌ ಪಕ್ಷವೂ ಈ ಬಾರಿ ಕನಿಷ್ಠ ಎರಡರಿಂದ ಐದು ಜಿಪಂ ಕ್ಷೇತ್ರಗಳಲ್ಲಿ ಗೆದ್ದು, ಖಾತೆ ಓಪನ್‌ ಮಾಡುವ ತವಕದಲ್ಲಿದೆ.

ಕಳೆದ 2004ಕ್ಕೂ ಮುಂಚೆ ಜೆಡಿಎಸ್‌ನ ಕೆಲ ಸದಸ್ಯರು ಆಯ್ಕೆಯಾಗಿದ್ದರು. ಅದಾದ ಬಳಿಕ ಜಿಪಂಗೆ ಜೆಡಿಎಸ್‌ನಿಂದ ಈವರೆಗೆ ಯಾರೂ ಆಯ್ಕೆಯಾಗಿಲ್ಲ. ತಾಪಂಗಳಲ್ಲಿ ಕೆಲವೆಡೆ ಸದಸ್ಯರಿದ್ದಾರೆ. ಹಲವರ ತಯಾರಿ: ಕಳೆದ 2015-16ರಲ್ಲಿ ನಡೆದ ಜಿಪಂ, ತಾಪಂ ಚುನಾವಣೆ ಬಳಿಕ ಈಗ ಪುನಃ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಲಾಗಿದೆ. ಆಗ ಜಿಲ್ಲೆಯಲ್ಲಿ ಆರು ತಾಲೂಕುಗಳಿದ್ದವು. ಈಗ ತಾಲೂಕುಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, 36 ಇದ್ದ ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. ಕಳೆದ ಬಾರಿ 130 ಇದ್ದ ತಾಪಂ ಕ್ಷೇತ್ರಗಳನ್ನು ಈ ಬಾರಿ ಕಡಿತಗೊಳಿಸಿದ್ದು, ಸದ್ಯ 110 ಕ್ಷೇತ್ರ ಪುನರ್‌ ರಚನೆಯಾಗಿವೆ. ಆದರೆ, ತಾಪಂ ವ್ಯವಸ್ಥೆಯೇ ರದ್ದುಗೊಳಿಸಬೇಕೆಂಬ ಬಹುದೊಡ್ಡ ಚರ್ಚೆಯ ಮಧ್ಯೆಯೂ ಇದೊಂದು ಬಾರಿ ತಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ.

Advertisement

ರಾಜ್ಯ ಸರ್ಕಾರ ತಾಪಂ ವ್ಯವಸ್ಥೆ ರದ್ದುಪಡಿಸುವ ನಿರ್ಧಾರ ಕೈಗೊಂಡರೂ ಅದನ್ನು ಅಧಿಕೃತ ಅಧಿಸೂಚನೆ ಮೂಲಕ ಕೇಂದ್ರ ಸರ್ಕಾರ ಮಾಡಬೇಕಿದೆ. ತಾಪಂ ಬೇಕು-ಬೇಡ ಎಂಬ ಚರ್ಚೆ ಎಲ್ಲೆಡೆ ನಡೆದಿದೆಯಾದರೂ ತಾಲೂಕು ವ್ಯವಸ್ಥೆ ಇರುವಾಗ ತಾಪಂ ವ್ಯವಸ್ಥೆ ಏಕೆ ಬೇಡ, ಅನುದಾನ ಹೆಚ್ಚಿಸಿ, ವ್ಯವಸ್ಥೆ ಉಳಿಸಿ ಎಂಬ ಒತ್ತಡವೂ ಮತ್ತೂಂದೆಡೆ ಕೇಳಿ ಬಂದಿದೆ. ಜಿಪಂಗೆ ಸ್ಪರ್ಧಿಸುವವರು, ಗ್ರಾಪಂ ಅಧ್ಯಕ್ಷರಾಗಿ, ತಾಪಂ ಸದಸ್ಯರಾಗಿ ಅನುಭವ ಹೊಂದಿರಬೇಕು.

ಜಿಪಂ ಸದಸ್ಯರಾದವರು ಮುಂದೆ ಶಾಸಕ ಸ್ಥಾನಕ್ಕೂ ನಿಲ್ಲಲು ಅನುಭವ ಪಡೆಯುತ್ತಾರೆ. ಹೀಗಾಗಿ ಗ್ರಾಪಂ, ತಾಪಂ, ಜಿಪಂ ವ್ಯವಸ್ಥೆ ಇರಬೇಕೆಂಬುದು ಕೆಲ ರಾಜಕೀಯ ಪ್ರಮುಖರ ಅಭಿಪ್ರಾಯ. ಪ್ರತಿಷ್ಠೆಯಾದ ಮೀಸಲಾತಿ: ಜಿಲ್ಲೆಯ 40 ಜಿಪಂ ಹಾಗೂ 110 ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಅಧಿಸೂಚನೆ ಮೇಲೆ ಸದ್ಯ ಕಣ್ಣಿದೆ. ಸಹಜವಾಗಿ ಆಡಳಿತ ಪಕ್ಷದ ಶಾಸಕರು, ತಮಗೆ ಬೇಕಾದ ಅಥವಾ ತಮ್ಮ ಖಾಸಾ ಬೆಂಬಲಿಗರಿಗೆ ಸರಳವಾಗುವ, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗುವ ರೀತಿ ಮೀಸಲಾತಿ ನಿಗದಿಯಾಗುವಂತೆ ನೋಡಿಕೊಳ್ಳುವುದು ವಾಡಿಕೆ. ಇದನ್ನು ಆಡಳಿತದಲ್ಲಿರುವ ಎಲ್ಲ ಪಕ್ಷಗಳೂ ಈವರೆಗೂ ಮಾಡುತ್ತ ಬಂದಿವೆ. ಹೀಗಾಗಿ ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ, ಈ ಪರಂಪರೆ ಮುಂದುವರಿಸುವುದರಲ್ಲಿ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next