Advertisement

ಚಿನ್ನಾಭರಣ-ಜವಳಿ ಉದ್ಯಮಕ್ಕೆ ಕೋವಿಡ್ ಕೊಕ್ಕೆ

08:46 PM May 15, 2021 | Team Udayavani |

ವೀರೇಶ ಮಡ್ಲೂ

Advertisement

ಹಾವೇರಿ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಅನಿವಾರ್ಯವಾಗಿ ಸರ್ಕಾರ ಕೊರೊನಾ ಕರ್ಫ್ಯೂ ವಿಧಿ ಸಿರುವ ಪರಿಣಾಮ ಜವಳಿ, ಚಿನ್ನಾಭರಣ, ಅಟೋಮೊಬೈಲ್‌, ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೆ ಕರಿನೆರಳು ಬಿದ್ದಿದೆ. ಇದರಿಂದ ವ್ಯಾಪಾರ ಗಣನೀಯವಾಗಿ ಕುಸಿದಿದ್ದು, ಕೋಟ್ಯಂತರ ರೂ. ವಹಿವಾಟು ನೆಲಕಚ್ಚುವಂತಾಗಿದೆ.

ಸದ್ಯ ಬೇಸಿಗೆ ದಿನಗಳ ಹಿನ್ನೆಲೆ ಹಬ್ಬ-ಹರಿದಿನಗಳು ಸೇರಿದಂತೆ ಮದುವೆ ಸಮಾರಂಭಗಳು ನಡೆಯುತ್ತಿದ್ದು, ಜವಳಿ, ಚಿನ್ನಾಭರಣ ವಹಿವಾಟಿನ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ಇದೇ ಸೀಸನ್‌ನಲ್ಲಿ ಉದ್ಯಮದ ಶೇ.40 ರಷ್ಟು ವಹಿವಾಟು ನಡೆಯುತ್ತಿದೆ. ಕೊರೊನಾ ಮೊದಲ ಅಲೆ ಸಹ ಇದೇ ಸಮಯದಲ್ಲಿ ಒಕ್ಕರಿಸಿದ್ದರಿಂದ ಕಳೆದ ಸೀಸನ್‌ ವ್ಯಾಪಾರದಲ್ಲಿ ನಷ್ಟ ಅನುಭವಿಸುವಂತಾಗಿತ್ತು. ಈಗ ಎರಡನೇ ಅಲೆಯೂ ವಹಿವಾಟನ್ನು ಕುಸಿಯುವಂತೆ ಮಾಡಿದೆ.

ನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಬಟ್ಟೆ ಅಂಗಡಿಗಳಿದ್ದು, ಸೀಸನ್‌ನಲ್ಲಿ ಪ್ರತಿದಿನ ಲಕ್ಷಾಂತರ ರೂ. ವಹಿವಾಟು ನಡೆಯುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಬಟ್ಟೆ ಅಂಗಡಿಗಳ ವಹಿವಾಟು ಕುಸಿದಿದ್ದು, ವ್ಯಾಪಾರಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಪ್ರಸಕ್ತ ವರ್ಷ ಹಬ್ಬ, ಹರಿದಿನಗಳು ಹಾಗೂ ಮದುವೆ ಸೀಸನ್‌ ಹಿನ್ನೆಲೆ ಕೋಟ್ಯಂತರ ಬಂಡವಾಳ ಹಾಕಿ ಬಟ್ಟೆಗಳನ್ನು ಖರೀದಿಸಿದ್ದ ವ್ಯಾಪಾರಸ್ಥರು ಕೊರೊನಾ ಕರ್ಫ್ಯೂ ಮಾಡಿದ್ದರಿಂದ ಬಟ್ಟೆಗಳು ಗೋಡೌನ್‌ ನಲ್ಲಿಯೇ ಕೊಳೆಯುತ್ತಿವೆ.

ಕೊರೊನಾ ಕರ್ಫ್ಯೂನಿಂದ ನಿಗದಿಯಾಗಿದ್ದ ಕಾರ್ಯಕ್ರಮಗಳು ಒಂದಂದಾಗಿ ರದ್ದಾಗುತ್ತಿದ್ದು, ಇನ್ನು ಕೆಲವು ಮುಂದೂಡುತ್ತಿದ್ದಾರೆ. ಇದರಿಂದಾಗಿ ವಿವಾಹ ಕಾರ್ಯಕ್ರಮ ಅಲ್ಲದೇ ಶಾಲಾ-ಕಾಲೇಜುಗಳ ಸಮವಸ್ತ್ರದ ಬ್ಯುಸಿನೆಸ್‌ ಕೂಡ ನೆಲಕಚ್ಚಿದ್ದು, ಸುಮಾರು 80 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಹೊರತಿಲ್ಲ ಎಂಬಂತೆ ಚಿನ್ನಾಭರಣ ಅಂಗಡಿಗಳ ಮೇಲೂ ಪರಿಣಾಮ ಬೀರಿದ್ದು, ಕಳೆದ ವರ್ಷದಿಂದ ಚಿನ್ನಾಭರಣ ವ್ಯಾಪಾರ ಅಷ್ಟಕ್ಕಷ್ಟೇ ಎನ್ನುವಂತಾಗಿದೆ.

Advertisement

ಬೇಸಿಗೆ ದಿನಗಳಲ್ಲಿ ವಿವಾಹ, ಗೃಹ ಪ್ರವೇಶ ಸೇರಿದಂತೆ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ಆದರೆ ಈ ಸಮಯದಲ್ಲಿಯೇ ಕೊರೊನಾ ಎರಡನೇ ಅಲೆ ಅಪ್ಪಳಿಸಿದ್ದರಿಂದ ಕೆಲವರು ಸಮಾರಂಭಗಳನ್ನು ರದ್ದುಗೊಳಿಸಿದ್ದರೆ, ಇನ್ನೂ ಕೆಲವು ಮುಂದೂಡಲ್ಪಟ್ಟಿವೆ. ನಗರದಲ್ಲಿ ಸುಮಾರು 30ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿದ್ದು, ಈ ಸೀಸನ್‌ಲ್ಲಿ ಲಕ್ಷಾಂತರ ವಹಿವಾಟು ನಡೆಯುತ್ತಿತ್ತು. ಆದರೆ ಕೊರೊನಾದಿಂದ ವ್ಯಾಪಾರ ವಹಿವಾಟಕ್ಕೆ ಅವಕಾಶ ನೀಡದ ಪರಿಣಾಮ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ ಎಂದು ಚಿನ್ನಾಭರಣ ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಅಟೋಮೊಬೈಲ್‌, ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಕಳೆದ ವರ್ಷದಿಂದ ಜನರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದರಿಂದ ಹೊಸದಾಗಿ ವಾಹನಗಳ ಖರೀದಿ ಹಾಗೂ ಜಾಗೆಗಳ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಬಸವ ಜಯಂತಿ, ರಂಜಾನ್‌ ಹಬ್ಬದ ಹಿನ್ನೆಲೆ ಮುಂಗಡವಾಗಿ ತಮಗೆ ಬೇಕಾದ ವಾಹನಗಳನ್ನು ಬುಕ್‌ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕರ್ಫ್ಯೂನಿಂದಾಗಿ ಅಟೋಮೊಬೈಲ್‌ ಕ್ಷೇತ್ರದ ಮೇಲೆ ಹೊಡೆತ ಬಿದ್ದಿದ್ದು, ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ. ಇದೇ ರೀತಿ ರಿಯಲ್‌ ಎಸ್ಟೇಟ್‌ ಉದ್ಯಮ ಕೂಡ ನಷ್ಟದ ಹಾದಿಯಲ್ಲಿಯೇ ಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next