ಮುಂಬಯಿ, ಅ. 11: ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲ ಉದ್ಯಮಗಳು ನಷ್ಟ ಅನುಭವಿಸಿದ್ದು, ಅದರಲ್ಲೂ ಸಾಂಸ್ಕೃತಿಕ ನಗರಿ ಪುಣೆಯ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಪುಣೆಯಲ್ಲಿ ಸುಮಾರು ಎರಡೂವರೆ ಸಾವಿರಕ್ಕಿಂತಲೂ ಹೆಚ್ಚು ತುಳು-ಕನ್ನಡಿಗರ ಹೊಟೇಲ್‌ಗಳಿದ್ದು. ಹೊಟೇಲ್ ನಡೆಸುವವರ ಪಾಡು ಅಧೋಗತಿಗಿಳಿದಿದೆ. ಹೊಟೇಲ್ ನಡೆಸುವವರು ಹಾಕಿದ ಬಂಡವಾಳ ಕಳೆದುಕೊಂಡಿರುವುದಲ್ಲದೆ, ಲಾಕ್‌ಡೌನ್ ಸಮಯದಲ್ಲೂ ಮಾಲಕರು ಬಾಡಿಗೆಗಾಗಿ ಪಟ್ಟು ಹಿಡಿದಿದ್ದರಿಂದ ಹೊಟೇಲ್‌ಗಳ ಠೇವಣಿ ಕಳೆದುಕೊಂಡು ಉದ್ಯಮಕ್ಕೆ ತಿಲಾಂಜಲಿ ಇಟ್ಟಿದ್ದಾರೆ.
3 ಸಾವಿರ ಕೋಟಿ ರೂ. ನಷ್ಟ :
ಕಳೆದ ಆರೇಳು ತಿಂಗಳುಗಳಿಂದ ಸುಮಾರು ಮೂರು ಸಾವಿರ ಕೋ. ರೂ. ಗಳಷ್ಟು ವ್ಯವಹಾರ ನಷ್ಟಗೊಂಡಿರುವುದಲ್ಲದೆ, ಎರಡೂವರೆ ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಹೊಟೇಲ್ ವ್ಯವ ಹಾರಕ್ಕೆ ಸಂಬಂಧಪಟ್ಟ ಸುಮಾರು 25ಕ್ಕೂ ಹೆಚ್ಚು ಇತರ ರೀತಿಯ ವ್ಯಾಪಾರಿಗಳೂ ನಷ್ಟ ಅನುಭವಿಸಿದ್ದಾರೆ. ಹೊಟೇಲ್ ಬಂದ್ ಇದ್ದರೂ ಸರಕಾರ ಅಬಕಾರಿ ಶುಲ್ಕ ಭರಿಸಲು ಹೇಳುತ್ತಿರುವುದರಿಂದ ಹೊಟೇಲಿಗರು ಕಂಗಾಲಾಗಿದ್ದಾರೆ. ಸರ್ವಸ್ವ ಕಳಕೊಂಡ ಹಲವು ಮಂದಿ ತುಳು, ಕನ್ನಡಿಗರು ಸಾಲದ ಸುಳಿಯಲ್ಲಿ ಸಿಕ್ಕಿ ಕಷ್ಟ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ನಗರದ ಇಬ್ಬರು ಪ್ರಸಿದ್ಧ ಹೊಟೇಲ್ ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿರುವುದು ಹೊಟೇಲ್ ಉದ್ಯಮದ ದುರಂತ ಕತೆಗೆ ಸಾಕ್ಷಿಯಾಗಿದೆ.
ನೆಲ ಕಚ್ಚಿದ ಕ್ಯಾಂಟೀನ್ ಉದ್ಯಮ : ರಾಜ್ಯದಲ್ಲಿ ಪುಣೆಯು ಕಂಪೆನಿಗಳು ಮತ್ತು ಕೈಗಾರಿಕೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹೆಚ್ಚಿನ ಕಂಪೆನಿಗಳ ಕ್ಯಾಂಟೀನ್‌ಗಳು ಕನ್ನಡಿಗರಲ್ಲಿದೆ. ಕಂಪೆನಿಗಳು ಬಾಗಿಲು ಮುಚ್ಚಿದ್ದರಿಂದ ಕಾಂಟ್ರಾಕ್ಟ್ ದಾರರು ಪರದಾಡುವಂತಾಗಿದೆ. ಐಟಿ ಕಂಪೆನಿಗಳ ಉದ್ಯೋಗಿಗಳು ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಡಿಸೆಂಬರ್‌ವರೆಗೂ ತೆರೆಯುವುದು ಅನುಮಾನ. ತೆರೆದರೂ ಮೊದಲಿನಂತೆ ಕ್ಯಾಂಟೀನ್ ಉದ್ಯಮ ಸರಿಹೊಂದಲು ಹಲವಾರು ತಿಂಗಳುಗಳೇ ಬೇಕಾಗಬಹುದು. ಶಾಲಾ-ಕಾಲೇಜು, ಹಾಸ್ಟೆಲ್‌ಗಳು ಈ ವರ್ಷ ತೆರೆಯುವಂತಿಲ್ಲ, ಈ ಎಲ್ಲ ರೀತಿಯ ಉದ್ಯಮದಲ್ಲಿ ತುಳು – ಕನ್ನಡಿಗರು ಒಂದಲ್ಲ ಒಂದು ರೀತಿಯಲ್ಲಿ ನಷ್ಟವನ್ನು ಅನುಭವಿಸಿದ್ದಾರೆ. ಹೊಟೇಲ್ ಕಾರ್ಮಿಕರು ಲಾಕ್‌ಡೌನ್ ಸಮಯದಲ್ಲಿ ಊರಿನ ದಾರಿ ಹಿಡಿದಿದ್ದು, ಕಾರ್ಮಿಕರ ಸಮಸ್ಯೆ ಎದುರಾಗಿದ್ದು, ಪ್ರಸ್ತುತ ಶೇ. 10 ರಷ್ಟು ಕಾರ್ಮಿಕರು ಮಾತ್ರ ಲಭ್ಯರಿದ್ದಾರೆ.
3 ತಿಂಗಳಿನಿಂದ ಸತತ ಪ್ರಯತ್ನ : ಹೊಟೇಲ್ ಉದ್ಯಮವನ್ನು ಮರು ಪ್ರಾರಂಭಿಸುವಂತೆ ಸುಮಾರು ಮೂರು ತಿಂಗಳಿನಿಂದ ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ ಅಸೋಸಿಯೇಶನ್ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅಧ್ಯಕ್ಷ ಗಣೇಶ್ ಶೆಟ್ಟಿ ತಿಳಿಸಿದ್ದಾರೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅಬಕಾರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಅಧಿಕಾರಿ ಗಳನ್ನು ಸಂಪರ್ಕಿಸಿ ಸಭೆ ನಡೆಸಿ
ಚರ್ಚಿಸಿ ಒತ್ತಡವನ್ನು ಹಾಕಿದ್ದೇವೆ.
ಇದೀಗ ಶೇ. 50ರಷ್ಟು ಉದ್ಯಮ ಪ್ರಾರಂಭಿಸುವುದಕ್ಕೆ ಅನುಮತಿ ನೀಡಿರುವ ಸರಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಸರಕಾರದ ಮಾರ್ಗ ಸೂಚಿಗಳು ಕಠಿನವಾಗಿದ್ದು, ಅದನ್ನು ಪಾಲಿಸುವುದು ಹೊಟೇಲಿಗರ ಕರ್ತವ್ಯ ವಾಗಿದೆ ಎಂದು ಗಣೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.
ಆರೋಗ್ಯದೆಡೆಗೆ ಎಚ್ಚರ ಅಗತ್ಯ : ಈ ಹಿಂದೆ ಶೇ. 15ರಷ್ಟು ಹೊಟೇಲ್‌ಗಳು ಪಾರ್ಸೆಲ್ ವ್ಯವಹಾರ ಮಾಡುತ್ತಿದ್ದವು. ಪ್ರಸ್ತುತ ಹೊಟೇಲ್ ಪ್ರಾರಂಭ ಮಾಡಿದರೂ ಹೊಟೇಲಿಗರಿಗೆ ಲಾಭವಿಲ್ಲ. ವ್ಯಾಪಾರ ಆಗಬಹುದು ಎಂಬ ಭರವಸೆಯೂ ಇಲ್ಲ. ಕೆಲವು ಕಾರ್ಮಿಕರಿಗೆ ಕೆಲಸ ಸಿಗಬಹುದು. ಆದರೆ ಹೊಟೇಲ್ ಉದ್ಯಮಿಗಳು ತಮ್ಮ ವ್ಯಾಪಾರ ವಹಿವಾಟಿನಲ್ಲಿ ಸರಿಯಾಗಿ ಹೊಂದಿಕೊಳ್ಳಲು ಇನ್ನೆಷ್ಟು ದಿನಗಳು ಹೋಗಬಹುದು ಎಂದು ಹೇಳುವಂತಿಲ್ಲ. ನಮ್ಮ ಆರೋಗ್ಯದ ಜತೆಗೆ, ಕಾರ್ಮಿಕರ ಆರೋಗ್ಯ ಮತ್ತು ಗ್ರಾಹಕರ ಅರೋಗ್ಯದೆಡೆಗೆ ಕೂಡ ಎಚ್ಚರ ವಹಿಸಬೇಕಾಗಿದೆ. ಸಮಸ್ಯೆಗಳ ನಡುವೆ ಹೊಟೇಲ್ ಪ್ರಾರಂಭಿಸುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಗಣೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಅಸೋಸಿಯೇಶನ್ ಹೊಟೇಲಿಗರ ಸಮಸ್ಯೆಗಳಿಗೆ ಸ್ಪಂದಿಸು ತ್ತಿದೆ. ಅದಕ್ಕಾಗಿ ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಅಬಕಾರಿ ಶುಲ್ಕ, ಪುಣೆ ಮಹಾನಗರ ಪಾಲಿಕೆಯ ವಿವಿಧ ಲೈಸೆನ್ಸ್‌ಗಳ ಶುಲ್ಕ ಮನ್ನಾ ಅಥವಾ ಕಡಿತಗೊಳಿಸುವಂತೆ ಮನವಿ ಮಾಡಿದ್ದೇವೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಹೊಟೇಲ್ ಉದ್ಯಮ ಮತ್ತೆ ಹಳಿಯೇರಲು ಸ್ವಲ್ಪ ಸಮಯ ಹಿಡಿಯಬಹುದು. ಅಲ್ಲಿಯವರೆಗೆ ತಾಳ್ಮೆ ಮುಖ್ಯ. ಸಮಸ್ಯೆಗಳಿದ್ದರೆ ಅಸೋಸಿಯೇಶನ್ ಮುಖಾಂತರ ಪರಿಹರಿಸೋಣ.
-ಗಣೇಶ್ ಶೆಟ್ಟಿ ಅಧ್ಯಕ್ಷರು, ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ ಅಸೋಸಿಯೇಶನ್