ಕುರಗೋಡು: ವಿಶ್ವವಿಖ್ಯಾತ ಹಂಪಿಯಲ್ಲಿರುವ ವಿರೂಪಾಕ್ಷ ಸ್ವಾಮಿಗೆ ಎದುರು ಬಸವಣ್ಣ ಎಂದೇ ಪ್ರತೀತಿ ಪಡೆದಿರುವ ಕುರುಗೋಡು ದೊಡ್ಡಬಸವೇಶ್ವರ ದೇವರ ಜಾತ್ರೆಯನ್ನು ನಿಷೇಧಿ ಸಲಾಗಿದೆ. ದಕ್ಷಿಣ ಭಾಗದ ರಾಜ್ಯದಲ್ಲಿ ಅಪರೂಪವಾಗಿರುವ ಏಕಶಿಲೆಯ ಬೃಹತ್ ನಂದಿ ವಿಗ್ರಹ ಇದಾಗಿದ್ದು ಕಿರಿದಾದ ಕೋಡುಗಳಿವೆ. ಹಿಗಾಗಿ ಈ ಊರಿಗೆ ಆಡುಮಾತಿನಲ್ಲಿ ಕುರುಗೋಡು ಎಂಬ ಹೆಸರು ಬಂತು ಎನ್ನಲಾಗುತ್ತಿದೆ.
ಪ್ರತಿವರ್ಷ ಮಾರ್ಚ್ ತಿಂಗಳ ಹೋಳಿ ಹುಣ್ಣಿಮೆ ದಿನ ದೊಡ್ಡಬಸವೇಶ್ವರ ಜಾತ್ರೆ ನಡೆಯುತ್ತಿದ್ದು ಈ ಬಾರಿ ರದ್ದಾಗಿರುವುದು ಸಾರ್ವಜನಿಕರಿಗೆ ಬೇಸರ ತಂದಿದೆ. ನಾಡಿನಾದ್ಯಂತ ಜನ ಓಕುಳಿ ಆಟದಲ್ಲಿ ತಲ್ಲೀನರಾಗಿರುವಾಗ ಈ ಭಾಗದ ಜನ ಭಕ್ತಿಯಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ಕುರುಗೋಡಿನ ಆದಿ ದೈವ ದೊಡ್ಡಬಸವೇಶ್ವರ ಜಾತ್ರೆಯಲ್ಲಿ ನಾಡಿನ ವಿವಿಧ ಭಾಗದ ಜಿಲ್ಲೆಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದು ಈ ಬಾರಿ ಕೊರೊನಾ ಸಂಕಷ್ಟದಲ್ಲಿ ವಿವಿಧ ಭಾಗದ ಭಕ್ತಾ ದಿಗಳಿಗೆ ದರ್ಶನ ಸಿಗದಂತಾಗಿದೆ.
ಕುರುಗೋಡಿನ ಪಕ್ಕದ ಗ್ರಾಮಗಳಾದ ಕೆರೆಕೆರೆ, ಮುಷ್ಟಗಟ್ಟೆ. ಸೋಮಲಾಪು ಗ್ರಾಮಗಳ ಕಟ್ಟೆಮನೆ ನಾಯಕ ಜನಾಂಗದವರು ಜಾತ್ರೆ ಹಿಂದಿನ ದಿನದಿಂದಲೇ ಉಪವಾಸವಿದ್ದು ಬೆಳಗ್ಗೆ ಎದ್ದು ಶ್ರದ್ಧಾ ಭಕ್ತಿಯಿಂದ ಬರಿಗಾಲಿನಲ್ಲಿ ನಡೆದುಕೊಂಡು ದೇವಸ್ಥಾನಕ್ಕೆ ಬಂದು ಧೂಳುಗಾಯಿ ಒಡೆದು ಕುಂಭವನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರ್ಪಿಸಿ ರಥೋತ್ಸವಕ್ಕೆ ಚಾಲನೆ ನಿಡುವುದು ಪದ್ಧತಿ. ಹಿರಿಯರ ಪ್ರಕಾರ ತಿಂಗಳ ಪರ್ಯಂತ ನಡೆಯುತ್ತಿದ್ದ ರಥೋತ್ಸವ ಇತ್ತೀಚೆಗೆ ಕೆಲವೇ ದಿನಗಳಿಗೆ ಸೀಮಿತವಾಗಿದೆ. ಪ್ರತಿವರ್ಷ ಶಿವರಾತ್ರಿಯಂದು ರಥದ ಗಡ್ಡೆಯನ್ನು ಹೊರ ತೆಗೆಯಲಾಗುತ್ತದೆ.
ನಂತರ ಸುಮಾರು 60 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ರಥವನ್ನು ಕಟ್ಟಿ ಬಣ್ಣ ಬಣ್ಣದ ಬಟ್ಟೆ ಹೂವು, ಕಾಗದ, ಗೊಂಬೆ ಮತ್ತು ತಳಿರುತೋರಣಗಳಿಂದ ಸಿಂಗರಿಸುತ್ತಾರೆ. ರಥೋತ್ಸವ ನಡೆಯುವ 8 ದಿನಗಳ ಮುಂಚೆ ದೊಡ್ಡಬಸವೇಶ್ವರ ಮತ್ತು ನೀಲಮ್ಮನಿಗೆ ಕಂಕಣ ಕಟ್ಟುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತದೆ. ಸಿಂದಿಗೇರಿ ಮೂಲದ ಶರಣೆ ನೀಲಮ್ಮ ದೊಡ್ಡಬಸವೇಶ್ವರನ ಪರಮ ಭಕ್ತೆಯಾಗಿದ್ದ ಸಿಂದಿಗೇರಿಯಲ್ಲಿ ಮಾಯವಾಗಿ ಕುರುಗೋಡಿನಲ್ಲಿರುತ್ತಿದ್ದಳಂತೆ ಎಂಬುವುದನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇತಿಹಾಸ: ಸಿಂದಿಗೇರಿಯ ಲಿಂಗಾಯತ ಸಮುದಾಯದ ಲಾಳಗೊಂಡರ ಕುಟುಂಬದ ಕೆಂಚಮ್ಮ (ನಿಲ್ಲಮ್ಮನ ಮೊದಲ ಹೆಸರು) ಬಾಲ್ಯದಿಂದಲೂ ಪರಮ ದೈವಭಕ್ತೆ. ಒಮ್ಮೆ ಹತ್ತಿ ಹೊಲದಲ್ಲಿ ಬೃಹದಾಕಾರದ ಬಸವಣ್ಣನ ಮೂರ್ತಿಯನ್ನು ನೋಡಿ ಪುರಾಣಗಳಲ್ಲಿ ಕೇಳುತ್ತಿದ್ದ ಬಸವಣ್ಣನೇ ಈತನೆಂದು ಗ್ರಹಿಸಿ ಇದನ್ನು ಯೋಗದ ಮೂಲಕ ಅರಿಯಲು ಯೋಗ ಸಾಧನೆಯಲ್ಲಿ ತೊಡಗುತ್ತಾಳೆ. ಅದೊಂದು ದಿನ ಬಸವಣ್ಣನೇ ಜಂಗಮರೂಪಿಯಾಗಿ ಕೆಂಚಮ್ಮನ ಮನೆಗೆ ಭಿಕ್ಷೆ ಬೇಡಲು ಬಂದಾಗ ಕೆಂಚಮ್ಮ ಸ್ನಾನ ಮಾಡುತ್ತಿದ್ದಳಂತೆ.
ತಾಯಿ ಹೊರಗೆ ಹೋಗಿ ಭೀಕ್ಷೆ ನೀಡಿ ಬರುವುದರೊಳಗೆ ಕೆಂಚಮ್ಮ ಬಚ್ಚಲಲ್ಲಿ ಮಾಯವಾಗಿರುತ್ತಾಳೆ. (ಇಂದಿಗೂ ಅ ಬಚ್ಚಲನ್ನು ಸಿಂದಿಗೇರಿಯಲ್ಲಿ ನೋಡಬಹುದು) ನಂತರ ಈಕೆಯನ್ನು ಹುಡುಕಲು ಆರಂಭಿಸಿದಾಗ ಕುರುಗೋಡಿನಲ್ಲಿರುವ ಸುದ್ದಿ ತಿಳಿಯುತ್ತದೆ. ಸಿಂದಿಗೇರಿಯ ಹಿರಿಯರು ಬಂದು ಕರೆದಾಗ ನಾನು ಎಲ್ಲಿಗೂ ಬರುವುದಿಲ್ಲ ಬಸವೇಶ್ವರ ನನ್ನ ಪತಿ ಕುರುಗೋಡಿನಲ್ಲಿಯೇ ನನ್ನ ವಾಸ ಎಂದು ವಾದಿಸಿ ಕುರುಗೋಡಿನಲ್ಲಿಯೆ ನೆಲೆ ನಿಲ್ಲುತ್ತಾಳೆ. ಕಾಲ ಕಳೆದಂತೆ ತಪೋನಿಷ್ಟೆವಹಿಸಿ ಅಧಿ ಕಾರವನ್ನು ಪಡೆದು ಅಂತರ್ಧಾನಳಾಗುತ್ತಾಳೆ.
ಹೇಮಕೂಟ ಪೀಠದ ದ್ವಿತೀಯ ಶಂಭು ಎನಿಸಿದ ಕಪ್ಪಿನ ಚನ್ನಬಸವ ಮಹಾಸ್ವಾಮೀಜಿ ಈಕೆಯ ಯೋಗ ವ್ಯಕ್ತಿತ್ವ ಅರಿತು ಇಷ್ಟಲಿಂಗ ಸಂಸ್ಕಾರ ನೀಡಿ ದೊಡ್ಡಬಸವೇಶ್ವರನ ಹಿಂದೆ ಇದ್ದ ಬೇವಿನ ಮರದಡಿಯಲ್ಲಿ ಪೂಜಾ ಆಚರಣೆಗಳಿಗೆ ಅನುಕೂಲ ಮಾಡಿಕೊಟ್ಟು ಕೆಂಚ್ಚಮ್ಮನಿಗೆ ನೀಲಮ್ಮ ಎಂದು ಪುನರ್ ನಾಮಾಕರಣ ಮಾಡಿದರಂತೆ. ಇವರು ರಥೋತ್ಸವದಲ್ಲಿ ದೊಡ್ಡಬಸವೇಶ್ವರರ ಜೊತೆ ನೀಲಮ್ಮನ ಇರುವಿಕೆಯನ್ನು ರೂಢಿಗೆ ತಂದರಂತೆ ಎಂದು ಇತಿಹಾಸ ಲೇಖಕ ಡಾ| ಕೆ.ಎಂ.ಮೈತ್ರಿ ಹಾಗೂ ಡಾ| ಮೃತುಂಜಯ ರುಮಾಲೆ ಬರೆದಿರುವ “ಕುರುಗೋಡು ನೀಲಮ್ಮನವರ ಸಾಂಸ್ಕೃತಿಕ ಅಧ್ಯಯನ’ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.
-ಸುಧಾಕರ್ ಮಣ್ಣೂರು