ರಾಯಚೂರು: ಪ್ರತಿ ವರ್ಷ ಅದ್ಧೂರಿತನದಿಂದ ಕೂಡಿರುತ್ತಿದ್ದ ಗಣೇಶ ಚತುರ್ಥಿಗೆ ಈ ಬಾರಿ ಕೋವಿಡ್ ಸೋಂಕಿನ ಮಂಕು ಕವಿದಿದೆ. ಈ ಬಾರಿ ಸಡಗರಕ್ಕೆ ಕಡಿವಾಣ ಬಿದ್ದಿದ್ದು, ಎಲ್ಲೆಲ್ಲೂ ಪರಿಸರ ಸ್ನೇಹಿ ಗಣೇಶನದ್ದೇ ಹವಾ ಶುರುವಾಗಿದೆ.
ನಗರದಲ್ಲಿ ಹಿಂದಿನಂತೆ ಪಿಒಪಿ ಗಣೇಶಗಳ ಹಾವಳಿಗೆ ಕಡಿವಾಣ ಬಿದ್ದಿದೆ. ಮುಂಬಯಿ, ಹೈದರಾಬಾದ್ ಮೂಲದ ಹಾಗೂ ನಗರದ ವ್ಯಾಪಾರಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡುತ್ತಿದ್ದರು. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ವರ್ತಕರು ಮಾತ್ರ ಗಣೇಶ ಮೂರ್ತಿಗಳನ್ನು ಮಾರುತ್ತಿದ್ದಾರೆ. ಅದರಲ್ಲೂ ಮಣ್ಣಿನಿಂದ ಮಾಡಿದ ಐದು ಅಡಿಗಿಂತ ಚಿಕ್ಕ ಗಣೇಶಗಳೇ ಹೆಚ್ಚಾಗಿವೆ. ಆದರೂ ಚಿಕ್ಕ ಚಿಕ್ಕ ಮೂರ್ತಿಗಳ ಮಾರಾಟ ಅಲ್ಲಲ್ಲಿ ಕಂಡು ಬರುತ್ತಿದೆ.
ಪರಿಸರ ಸ್ನೇಹಿ ಗಣೇಶ: ಈ ಬಾರಿ ಪರಿಸರ ಸ್ನೇಹಿ ಗಣೇಶನಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಪ್ರತಿ ವರ್ಷ ಬಣ್ಣ ಬಣ್ಣದ ಬೃಹದಾಕಾರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. 10 ಸಾವಿರದಿಂದ ಲಕ್ಷಾಂತರ ರೂ. ವೆಚ್ಚದ ಮೂರ್ತಿಗಳನ್ನು ಕೂಡಿಸಲಾಗುತ್ತಿತ್ತು. ಆದರೆ, ಈ ಬಾರಿ ಅದ್ಧೂರಿತನವೇ ಮಾಯವಾಗಿದೆ. ವರ್ತಕರು ಪರಿಸ್ಥಿತಿಗೆ ಹೊಂದಿಕೊಂಡಂತೆ ಕಾಣುತ್ತಿದ್ದು, ಮಣ್ಣಿನಿಂದಲೇ ತಯಾರಿಸಿದ ಮೂರ್ತಿ ಗಳನ್ನು ಮಾರುತ್ತಿದ್ದಾರೆ. ನಗರದಲ್ಲಿ ಮೂರು ದಶಕದಿಂದ ಗಣೇಶ ಮೂರ್ತಿ ಗಳನ್ನು ಮಾರುತ್ತಿರುವ ವರ್ತಕರು ಕೂಡ ಈ ಬಾರಿ ಚಿಕ್ಕ ಗಾತ್ರದ ಮಣ್ಣಿನ ಗಣೇಶ ಮೂರ್ತಿಗಳನ್ನೇ ತಯಾರಿಸಿ ಮಾರುತ್ತಿದ್ದಾರೆ. ಸ್ಥಳೀಯವಾಗಿ ಸಿಗುವ ಮಣ್ಣು ಹಾಗೂ ರಾಸಾಯನಿಕ ರಹಿತ ಬಣ್ಣಗಳಿಂದ ಮೂರ್ತಿಗಳನ್ನು ತಯಾರಿಸಲಾಗಿದೆ. ಅದರಲ್ಲೂ ಸಂಪೂರ್ಣ ಅರಿಷಿಣ, ಕುಂಕುಮದಿಂದಲೇ ಮೂರ್ತಿಗಳನ್ನು ಅಲಂಕರಿಸಿದರೆ, ಕೆಲ ವೊಂದು ಮೂರ್ತಿಗಳಿಗೆ ಸುಣ್ಣದಿಂದಲೇ ಬಣ್ಣ ಬಳಿಯ ಲಾಗಿದೆ. ಇನ್ನು 150 ರೂ.ದಿಂದ 2 ಸಾವಿರ ರೂ.ವರೆಗೂ ಗಣೇಶ ಮೂರ್ತಿಗಳನ್ನು ಮಾರಲಾಗುತ್ತಿದೆ.
ಸಿದ್ಧತೆಗೂ ತಟ್ಟಿದ ಬಿಸಿ: ಗಣೇಶ ಮೂರ್ತಿ ಎಷ್ಟೇ ಚಿಕ್ಕದಿರಲಿ ದೊಡ್ಡದಿರಲಿ ವೇದಿಕೆಗೆ ಅದ್ಧೂರಿತನ ಲೇಪ ಮಾಡಲಾಗುತ್ತಿತ್ತು. ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ವಿಶೇಷತೆ ಇರಬೇಕು ಎಂಬುದು ಗಜಾನನ ಮಂಡಳಿಗಳ ಇಚ್ಛಾಶಕ್ತಿ ಆಗಿರುತ್ತಿತ್ತು. ಆದರೆ, ಈ ವರ್ಷ ಅದಕ್ಕೆ ಕಡಿವಾಣ ಬಿದ್ದಿದೆ. ಸರ್ಕಾರ ಗಣೇಶ ಪ್ರತಿಷ್ಠಾಪನೆಗೆ ಪರವಾನಗಿ ನೀಡುವುದೋ ಇಲ್ಲವೋ ಎಂಬ ಗೊಂದಲದಲ್ಲಿ ಅನೇಕ ಗಜಾನನ ಸಮಿತಿಗಳು ಈ ಬಾರಿ ಚಂದಾ ಎತ್ತುವುದನ್ನೇ ಕೈ ಬಿಟ್ಟಿವೆ. ಕೆಲ ಷರತ್ತುಗಳ ಆಧರಿಸಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ದರಿಂಧ ಸಣ್ಣ ಪ್ರಮಾಣದಲ್ಲೇ ವೇದಿಕೆ ಹಾಕುತ್ತಿವೆ.
ಗಣೇಶೋತ್ಸವ ಮಾರ್ಗಸೂಚಿ ಪಾಲಿಸಿ : ಪಟ್ಟಣ ಸೇರಿ ತಾಲೂಕಿನಾದ್ಯಂತ ಸರ್ಕಾರದ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಿಸಬೇಕು. ನಿಯಮ ಮೀರಿದಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ತಹಶೀಲ್ದಾರ್ ಸಂತೋಷರಾಣಿ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು. ಪಟ್ಟಣ ಪ್ರದೇಶದಲ್ಲಿ ವಾರ್ಡ್‌ಗೆ ಒಂದೇ ಗಣೇಶ ಮತ್ತು ಹಳ್ಳಿಗಳಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಐದು ದಿನ ಮಾತ್ರ ಗಣೇಶ ಮೂರ್ತಿ ಕೂಡ್ರಿಸಲು ಅವಕಾಶವಿದೆ. ಸಾರ್ವಜನಿಕ ಗಣೇಶ ಮೂರ್ತಿ 4 ಅಡಿ ಎತ್ತರ ಮೀರಬಾರದು. ಮನೆಯಲ್ಲಿ 2 ಅಡಿವರೆಗಿನ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು. ಸಾಮಾಜಿಕ ಅಂತರ ಪಾಲಿಸಬೇಕು. ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮೆರವಣಿಗೆಗೆ ಅವಕಾಶವಿಲ್ಲ. ವಿಸರ್ಜನೆ ವೇಳೆ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು. ಇನ್ನು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮಿನಿ ವಿಧಾನಸೌಧ ಸಭಾಂಗಣದಲ್ಲಿ ಕಂದಾಯ, ತಾಪಂ, ಪುರಸಭೆ, ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. ಸಿಪಿಐ ಆರ್.ಎಂ. ನದಾಫ, ಪಿಎಸ್‌ಐ ರಂಗಯ್ಯ ಕೆ., ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ಜೆಸ್ಕಾಂ ಅಧಿಕಾರಿ ಸೇರಿ ಇತರರು ಇದ್ದರು.