ಮುದ್ದೇಬಿಹಾಳ: ಕೋವಿಡ್ ಮತ್ತು ದೀಪಾವಳಿ ಹಬ್ಬ ಮಕ್ಕಳ ಸೃಜನಾತ್ಮಕ ಸಂಭ್ರಮವನ್ನೂ ಕಸಿದುಕೊಂಡಿದ್ದು ಈ ಬಾರಿ ನವೆಂಬರ್ 14ರಂದು ನಡೆಯಬೇಕಿದ್ದ ಮಕ್ಕಳ ಹಬ್ಬ ಎಂದೇ ಕರೆಯಲಾಗುವ ಮಕ್ಕಳ ದಿನಾಚರಣೆ ನಿಂತು ಹೋಗಿದೆ. ಮಕ್ಕಳ ಕ್ರಿಯಾಶೀಲತೆಗೆ ವೇದಿಕೆಯಾಗಬೇಕಿದ್ದ ಮಕ್ಕಳ ದಿನಾಚರಣೆ ಈ ಭಾಗದಲ್ಲಿ ಎಲ್ಲೂ ನಡೆಯದಿರುವುದು ಕೊರೊನಾ ಕರಾಳತೆಗೆ ಕನ್ನಡಿ ಹಿಡಿದಂತಾಗಿದೆ.
ಒಂದು ಕಡೆ ಕೋವಿಡ್ ನಿಯಮ, ಮಗದೊಂದು ಕಡೆ ದೀಪಾವಳಿಯ ಸಂಭ್ರಮ ಎರಡೂ ಒಟ್ಟಿಗೆ ಬಂದಿರುವುದು ಇದೇ ಮೊದಲಾಗಿದ್ದು ಮಕ್ಕಳ ದಿನಾಚರಣೆಗೆ ಮಂಕು ಕವಿಯಲು ಕಾರಣ ಎಂದು ಈ ಭಾಗದಲ್ಲಿ ವಿಶ್ಲೇಷಿಸಲಾಗುತ್ತಿದೆ. ಶಿಕ್ಷಣ ತಜ್ಞರೂ ಈ ಬಗ್ಗೆ ಚಕಾರ ಎತ್ತದೆ ಮೌನಕ್ಕೆ ಶರಣಾಗಿರುವುದು ಮಕ್ಕಳ ಭವಿಷ್ಯದ ಉಜ್ವಲತೆಯನ್ನೇ ಸಂಶಯದಿಂದ ನೋಡುವಂತಾಗಿದೆ.
ಕೋವಿಡ್ ಮಹಾಮಾರಿ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳುಗೆಡವಿರುವುದು ಎಲ್ಲರಿಗೂ ಗೊತ್ತು. ಇವತ್ತು, ನಾಳೆ ಸುಧಾರಣೆ ಕಾಣಬಹುದು ಎನ್ನುವ ನಿರೀಕ್ಷೆಯೂ ಕಮರಿದೆ. ಶಾಲೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕಿದ್ದ ಮಕ್ಕಳು ಮೊಬೈಲ್ ಗೇಮ್‌ಗಳಿಗೆ ಅಂಟಿಕೊಂಡು ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳತೊಡಗಿದ್ದಾರೆ. ಹೊರಗಿನ ಆಟ ಪಾಠಗಳನ್ನೇಮರೆತಂತೆ ನಡೆದುಕೊಳ್ಳುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಬಂಧಿ ಯಾಗಿ ಕೃತಕ ಜೀವನಕ್ಕೆ ಅನಿವಾರ್ಯವಾಗಿ ಹೊಂದುಕೊಳ್ಳುವ ಧಾವಂತ ಅವರಲ್ಲಿ ಕಂಡು ಬರತೊಡಗಿದೆ.
ನವೆಂಬರ್ 14ನ್ನು ಮಕ್ಕಳ ದಿನವಾಗಿ ಆಚರಿಸುವುದು ಪ್ರತಿ ವರ್ಷ ಶಾಲಾ ಕಾಲೇಜುಗಳಲ್ಲಿ ನಿರಂತರ ನಡೆದುಕೊಂಡು ಬಂದಿತ್ತು. ಸರ್ಕಾರಿ, ಖಾಸಗಿ ಶಾಲೆಗಳು ಮಕ್ಕಳ ಚಟುವಟಿಕೆಗೆ ವೇದಿಕೆ ರೂಪಿಸಿ ಅವರಲ್ಲಿನ ಸೃಜನಾತ್ಮಕ ಚಟುವಟಿಕೆಗಳನ್ನು ಹೊರತರಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದವು. ಅಂದಿನ ದಿವಸ ಮಕ್ಕಳ ಸಂಭ್ರಮಕ್ಕೆ ಮಿತಿ ಇಲ್ಲದಂತಾಗಿರುತ್ತಿತ್ತು. ಕೆಲವು ಖಾಸಗಿ ಸಂಸ್ಥೆಗಳು ಮಕ್ಕಳಿಗಾಗಿ ಹಲವು ಸ್ಪರ್ಧೆ,ಚಟುವಟಿಕೆ ಏರ್ಪಡಿಸುತ್ತಿದ್ದವು. ಸಾಧಕ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸುವುದೂ ನಡೆಯುತ್ತಿತ್ತು. ಆದರೆ ಈ ವರ್ಷ ಮಾತ್ರ ಇವೆಲ್ಲವುಗಳಿಗೂ ಕಡಿವಾಣ ಬಿದ್ದಿದ್ದು ಇಂಥ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಇದಕ್ಕೆ ಕೋವಿಡ್ ಆತಂಕ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಈ ದಿನದಂದು ಮಕ್ಕಳು ಮಹಾನ್ ವ್ಯಕ್ತಿಗಳ, ದೇಶಪ್ರೇಮಿಗಳ, ದೇಶಭಕ್ತರ, ಸೈನಿಕರ, ಪೊಲೀಸರ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸುತ್ತಿದ್ದರು. ಹಲವೆಡೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳೂ ನಡೆಯುತ್ತಿದ್ದವು. ಮಕ್ಕಳಿಗಾಗಿ ಮಕ್ಕಳ ಸಾಹಿತಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಿ ಮನರಂಜನೆಯ ಜೊತೆಗೆ ಜ್ಞಾನ ತುಂಬುವ ಕೆಲಸವೂ ನಡೆಯುತ್ತಿತ್ತು. ಮನೆಯಲ್ಲಿ, ಶಾಲೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿರುತ್ತಿದ್ದ ಮಕ್ಕಳು ಈ ದಿನ ಮಾತ್ರ ಎಲ್ಲ ಕಟ್ಟಳೆಗಳಿಂದ ಹೊರ ಬಂದು ಸ್ವತಂತ್ರ ಹಕ್ಕಿಗಳಂತೆ ಹಾರಾಡುತ್ತಿದ್ದರು, ನಲಿದಾಡುತ್ತಿದ್ದರು. ಆದರೆ ಇದೆಲ್ಲವೂ ಈ ವರ್ಷ ಮಕ್ಕಳ ಪಾಲಿಗೆ ಇಲ್ಲವಾಯಿತು. ಶಾಲೆಗಳೇ ಪ್ರಾರಂಭಗೊಂಡಿಲ್ಲ ಎಂದ ಮೇಲೆ ಇಂಥ ಆಚರಣೆಗಳಿಗೇ ವೇದಿಕೆಯೇ ಇಲ್ಲದಂತಾದದ್ದು ದುರಂತ ಎನ್ನಿಸಿಕೊಂಡಿದೆ.
ಮಕ್ಕಳ ಮನಸ್ಸು ವಿಚಲಿತ ;ಮಕ್ಕಳು ಕ್ರಿಯಾಶೀಲತೆ ಕಳೆದುಕೊಳ್ಳಬಾರದು, ಕಲಿಕಾ ಚಟುವಟಿಕೆ ನಿರಂತರವಾಗಿರಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ವಿದ್ಯಾಗಮ ಹೆಸರಿನಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿತ್ತು. ಇದು ಬಹುತೇಕ ಕಡೆ ಯಶಸ್ವಿಯೂ ಆಗಿ ಜನಪ್ರಿಯತೆ ಪಡೆದುಕೊಳ್ಳತೊಡಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ವಿದ್ಯಾಗಮ ಬಂದ್ ಆಗಿ ಅನೇಕರ ಚಡಪಡಿಕೆಗೆ ಕಾರಣವಾಯಿತು. ಶಿಕ್ಷಕರೇನೋ ನಿರಾಳರಾದರು, ಆದರೆ ಮಕ್ಕಳ ಮನಸ್ಸು ಮಾತ್ರ ವಿಚಲಿತಗೊಂಡಿತು. ಗ್ರಾಮೀಣ ಮಕ್ಕಳು ಇದರಿಂದ ಹೆಚ್ಚು ಭಾದಿತರಾದರು. ಮನೆಯಲ್ಲಿ ಮಕ್ಕಳನ್ನು ಕೂಡಿಸಿ ಪ್ರಯೋಜನವಿಲ್ಲ ಎಂದರಿತ ಕೆಲವು ಬಡವರು, ದುಡಿಯುವ ರ್ಗದ ಪಾಲಕರು ತಮ್ಮ ಮಕ್ಕಳನ್ನು ಸಂಪಾದನೆಗೆ ಬಳಸಿಕೊಳ್ಳಲು ಬೀದಿಗೆ ಬಿಟ್ಟರು. ಇವರಲ್ಲಿ ಬಹುತೇಕರು ಪಟ್ಟಣ ಪ್ರದೇಶಕ್ಕೆ ಬಂದು ತಲೆ ಮೇಲೆ ಹಣ್ಣಿನ ಬುಟ್ಟಿ ಹೊತ್ತು ?ಹಣ್ಣು ಬೇಕೇನ್ರೀ ಹಣ್ಣು, ಸೀತಾಫಲ, ಸೇಬು, ಬಾಳೆಹಣ್ಣು?ಎಂದೆಲ್ಲ ಕೂಗುತ್ತ ಓಣಿ ಓಣಿ ಸಂಚರಿಸತೊಡಗಿದ್ದಾರೆ. ಬಹುತೇಕರು ತಮ್ಮ ಜಮೀನಿನಲ್ಲಿ, ಅವರಿವರ ಜಮೀನಿನಲ್ಲಿ ಕೆಲಸ ಮಾಡಲು ಹೋಗತೊಡಗಿದ್ದಾರೆ. ಮಕ್ಕಳ ದಿನಾಚರಣೆಯಂದಾದರೂ ಇವರ ಕಷ್ಟ ಬಗೆಹರಿದು ಮರಳಿ ಶಾಲೆಗೆ ಬಂದು ದಿನಾಚರಣೆಯನ್ನು ಸಂಭ್ರಮಿಸಬಹುದು ಎನ್ನುವ ನಿರೀಕ್ಷೆ ಹುಸಿಯಾದಂತಾಗಿದೆ. ಮುಂದಿನ ದಿನಗಳಲ್ಲಿ ಶಾಲೆ ಪ್ರಾರಂಭಗೊಂಡರೂ ಮಕ್ಕಳು ಕಳೆದ ವರ್ಷ ಇದ್ದ ಉತ್ಸಾಹ ಪುನರ್ ಸ್ಥಾಪಿಸಿಕೊಂಡು ಕ್ರಿಯಾಶೀಲರಾಗಿ ಶಾಲೆಗೆ ಬರಬಹುದೇ ಎನ್ನುವ ಪ್ರಶ್ನೆ ಇದೀಗ ಉದ್ಭವಿಸಲು ಪ್ರಾರಂಭಿಸಿದ್ದು ತಜ್ಞರೇ ಉತ್ತರಿಸಬೇಕಿದೆ.
ಕೋವಿಡ್ ದಿಂದಾಗಿ ಮಕ್ಕಳನ್ನು ಒಂದೆಡೆ ಸೇರಿಸಲು ಅವಕಾಶ ಇಲ್ಲದಂತಾಗಿದೆ. ಮೇಲಾಗಿ ಈ ಬಗ್ಗೆ ಸರ್ಕಾರದಿಂದ ಆದೇಶವೂ ಬಂದಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮಕ್ಕಳ ದಿನಾಚರಣೆ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ನೋಡಿಕೊಂಡು ಮುಂದುವರೆಯಲಾಗುತ್ತದೆ. –
ವೀರೇಶ ಜೇವರಗಿ ಬಿಇಒ, ಮುದ್ದೇಬಿಹಾಳ
ಪ್ರತಿ ವರ್ಷ ಮಕ್ಕಳ ದಿನಾಚರಣೆಯಂದು ಮಕ್ಕಳ ಹಬ್ಬದ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಲ್ಲಿನ ಸೃಜನಾತ್ಮಕತೆ ಹೊರತರುವಕಾರ್ಯಕ್ರಮ ನಡೆಸುತ್ತಿದ್ದೆವು. ಆದರೆ ಈ ಬಾರಿ ಕೊರೊನಾದ ಕಠಿಣ ನಿಯಮಗಳು ಆಚರಣೆಗೆ ಅವಕಾಶ ನೀಡಿಲ್ಲ. ಸರ್ಕಾರ ನಿಯಮ ಸಡಿಲಿಸಿದಲ್ಲಿ ಆಚರಣೆಗೆ ಮುಂದಾಗಬಹುದು. ಚಂದ್ರಶೇಖರ ಕಲಾಲ್
–ಕಾರ್ಯದರ್ಶಿ, ಪ್ರೇರಣಾ ಕಿಂಡರ್‌ಗಾರ್ಡನ್ ಶಾಲೆ, ಮುದ್ದೇಬಿಹಾಳ
–ಡಿ.ಬಿ. ವಡವಡಗಿ