Advertisement

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಲಾವಿದರು

05:14 PM Sep 28, 2020 | Suhan S |

ತೆಲಸಂಗ: ಕೋವಿಡ್‌ ಬಂದಾಗಿನಿಂದ ವೃತ್ತಿ ರಂಗಭೂಮಿ ಕಲಾವಿದರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಇಂಥಹ ಸಂದಿಗ್ಧ ಸ್ಥಿತಿಯಲ್ಲಿ ಕಲಾವಿದರು ರಂಗ ವೃತ್ತಿಯನ್ನು ತೊರೆಯದಂತೆ ನೋಡಿಕೊಳ್ಳದೆ ಇದ್ದಲ್ಲಿ ರಂಗಭೂಮಿ ಬಡವಾಗುವುದರಲ್ಲಿ ಸಂದೇಹವಿಲ್ಲ ಎಂದು ಖ್ಯಾತ ವೃತ್ತಿ ರಂಗಭೂಮಿ ಹಾಸ್ಯ ಕಲಾವಿದ ಸಿದ್ದು ನಲವತ್ತವಾಡ ಹೇಳಿದರು.

Advertisement

ಗ್ರಾಮದಲ್ಲಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಘದಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಈಗ ಕೋವಿಡ್‌ನಿಂದಾಗಿ ನಾಟಕ ಕಂಪನಿಗಳು ಬಂದ್‌ ಆಗಿದ್ದರಿಂದ ಬದುಕಿಗಾಗಿ ವೃತ್ತಿ ರಂಗಭೂಮಿ ಕಲಾವಿದರು ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಅನ್ಯ ಉದ್ಯೋಗ ಅರಸಿ ಹೋದವರು ಮತ್ತೆ  ರಂಗಭೂಮಿಗೆ ಮರಳದೇ ಹೋದರೆ ನಾಡಿನ ಸಂಸ್ಕೃತಿಯ ಸಂಸ್ಕಾರದ ಶಕ್ತಿಯಾದ ರಂಗಭೂಮಿ ಮತ್ತಷ್ಟು ಬಡವಾಗಲಿದೆ. ಟಿವಿ ಮತ್ತು ಸಿನಿಮಾ ಹಾವಳಿಗೆ ಈ ಮೊದಲೇ ರಾಜ್ಯದಲ್ಲಿ ಬೆರಳೆಣಿಕೆಯಷ್ಟೆ ನಾಟಕ ಕಂಪನಿಗಳು ಉಳಿದುಕೊಂಡಿದ್ದು, ವೃತ್ತಿ ರಂಗಭೂಮಿಗೆ ಕಲಾವಿದರ ಕೊರತೆ ಇತ್ತಿಚೀನ ದಿನಗಳಲ್ಲಿ ಹೆಚ್ಚಿದೆ. ಈಗ ಕೋವಿಡ್‌ನಿಂದಾಗಿ ಕನ್ನಡ ರಂಗಭೂಮಿಗೆ ದೊಡ್ಡ ಹೊಡೆತ ಬಿದ್ದಿದ್ದು, ಸರಕಾರ ವೃತ್ತಿ ರಂಗಭೂಮಿ ಕಲಾವಿದರ ಕೈ ಹಿಡಿಯದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ವೃತ್ತಿ ರಂಗಭೂಮಿ ಇದ್ದವು ಎಂದು ಕಥೆಗಳಲ್ಲಿ ಕೇಳಬೇಕಾದೀತು ಎಂದು ಎಚ್ಚರಿಸಿದರು.

ನಾಟಕಕಾರ ಅಮೋಘ ಖೊಬ್ರಿ ಮಾತನಾಡಿ, ಜೀವನದುದ್ದಕ್ಕೂ ತನ್ನನ್ನು ರಂಗಭೂಮಿ ಸೇವೆಗೆ ತೊಡಗಿಸಿಕೊಂಡ ಸಿದ್ದು ನಲವತ್ತವಾಡ, ಇವತ್ತಿಗೂ ನಾಟಕಗಳ ಜೀವಂತಿಕೆಗೆ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ರಂಗ ಜೀವಂತಿಕೆಗೆ ಶ್ರಮಿಸಿದವರಲ್ಲದೆ ಕ್ಯಾಸೆಟ್‌ ನಾಟಕಗಳಿಗೆ ಧ್ವನಿ ನೀಡುವ ಮೂಲಕ ಕ್ಯಾಸೆಟ್‌ ಕಿಂಗ್‌ ಎಂದು ಬಿರುದು ಪಡೆದವರು. ಹಾಸ್ಯ ಪಾತ್ರಗಳ ಮೂಲಕ ಜನರಲ್ಲಿ ನಾಟಕ ರುಚಿ ಹೆಚ್ಚುವಂತೆ ಮಾಡಿ ಎಲೆಮರೆ ಕಾಯಿಯಂತೆ ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ವೃತ್ತಿ ರಂಗಭೂಮಿಯ ಹಿರಿಯ ಶಕ್ತಿ ಸಿದ್ದು ಇವರನ್ನು ಸರಕಾರ ಗುರುತಿಸಿ ಗೌರವಿಸಬೇಕಿದೆ ಎಂದರು.

ಹಿರಿಯರಾದ ಐ.ಎಲ್‌.ಕುಮಠಳ್ಳಿ, ತಾಪಂ ಮಾಜಿ ಸದಸ್ಯ ಅರವಿಂದ ಉಂಡೋಡಿ, ಧರೆಪ್ಪ ಮಾಳಿ, ಆನಂದ ಥೈಕಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next