ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು, ಎರಡು ದಿನಗಳಿಂದ ದೈನಂದಿನ ಪ್ರಕರಣ ಒಂದು ಸಾವಿರದ ಗಡಿ ದಾಟುತ್ತಿದೆ. ಕೊರೊನಾ ದೇಶಕ್ಕೆ ಕಾಲಿಟ್ಟು ವರ್ಷ ಕಳೆದರೂ ಶ್ರಮಿಕ ವರ್ಗ ಮಾತ್ರ ಇನ್ನೂ ಸಂಕಷ್ಟದಿಂದ ಹೊರಬಂದಿಲ್ಲ. ಒಂದು ವಾರದಿಂದ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾದರಿಯ ಕರ್ಫ್ಯೂ ವಿಧಿಸಲಾಗಿದ್ದು, ಕೆಲವೊಂದು ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರ ಕೈಗೆ ಕೆಲಸ ಇಲ್ಲದಂತಾಗಿದೆ. ಈ ನಡುವೆ ಮೇ 1ರಂದು ಕಾರ್ಮಿಕ ದಿನಾಚರಣೆ ಇದ್ದರೂ ಅದನ್ನು ಆಚರಿಸುವ ಖುಷಿಯಲ್ಲಿರಲಿಲ್ಲ ಕಾರ್ಮಿಕ ವರ್ಗ.
ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಇರುವಾದ ಮುಂದೇನು? ಎಂಬ ಚಿಂತೆ ಕಾರ್ಮಿಕರನ್ನು ಕಾಡುತ್ತಿದೆ. ನಗರದಲ್ಲಿ ತುರ್ತು ಕಾಮಗಾರಿ ಬಿಟ್ಟು ಬಹುತೇಕ ಕಾಮಗಾರಿಗಳು ಅರ್ಧದಲ್ಲಿಯೇ ನಿಂತಿವೆ.
ಮತ್ತೂಂದೆಡೆ ಜಲ್ಲಿ, ಕಟ್ಟಡ ಕಾಮಗಾರಿಗಳಿಗೆ ಬೇಕಾದ ಪರಿಕರಗಳು ಸಿಗುತ್ತಿಲ್ಲ. ಪರಿಣಾಮ ಕೆಲವೊಂದು ಕಡೆಗಳಲ್ಲಿ ಕಟ್ಟಡ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು, ಹೊಟೇಲ್‌ಗಳಲ್ಲಿ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದರಿಂದಾಗಿ ಶೇ. 50ರಷ್ಟು ಹೊಟೇಲ್ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.
ಮತ್ತೂಂದೆಡೆ ಕೊರೊನಾ, ಲಾಕ್‌ಡೌನ್ ಇದ್ದರೂ ಪ್ರತೀ ದಿನ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕಾದ ಪರಿಸ್ಥಿತಿ ನಗರದ ಶುಚಿತ್ವ ಜವಾಬ್ದಾರಿ ಹೊತ್ತ ಕಾರ್ಮಿಕರದ್ದು. ಇವರು ಮಳೆ, ಗಾಳಿ, ಲಾಕ್‌ಡೌನ್ ಏನೇ ಇದ್ದರೂ ಪ್ರತೀ ದಿನ ಬೆಳಗ್ಗೆ ಕೆಲಸಕ್ಕೆ ಹಾಜರಾಗುತ್ತಾರೆ. ಅದೇ ರೀತಿ, ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹ ಮಾಡುವ ಕಾರ್ಮಿಕರು ಕೂಡ ಪ್ರತೀ ದಿನ ಕಸ ಸಂಗ್ರಹ ನಡೆಸುತ್ತಿದ್ದಾರೆ. ಹಾಗಂತ ಇವರಿಗೂ ಕೊರೊನಾ ಭಯ ಇದೆ. ಆದರೂ ಮುಂಜಾಗ್ರತೆ ವಹಿಸಿ, ಕೊರೊನಾ ನಿಯಮ ಪಾಲನೆ ಮಾಡಿಕೊಂಡ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಅಲ್ಲಲ್ಲಿ ಆಶ್ರಯ ಪಡೆಯುವ ವಲಸೆ ಕಾರ್ಮಿಕರು
ನಗರದಲ್ಲಿ ಅನ್ಯ ಜಿಲ್ಲೆಗಳ, ರಾಜ್ಯಗಳ ಹೆಚ್ಚಿನ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ತುರ್ತು ಕಾಮಗಾರಿ ಬಿಟ್ಟರೆ ಹೆಚ್ಚಿನ ಕಾಮಗಾರಿಗಳು ಅರ್ಧದಲ್ಲಿಯೇ ನಿಂತಿದೆ. ಲಾಕ್‌ಡೌನ್ ಮಾದರಿಯಲ್ಲಿ ಕರ್ಫ್ಯೂ ವಿಧಿಸಿದ ಪರಿಣಾಮ ಕಾರ್ಮಿಕರು ನಗರದಲ್ಲಿಯೇ ಬಾಕಿಯಾಗಿದ್ದಾರೆ. ಸಂಬಂಧಪಟ್ಟ ಕಟ್ಟಡ ಮಾಲಕರು ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ತಮ್ಮ ಊರುಗಳಿಗೆ ತೆರಳಿ ಮನೆಯವರನ್ನು ಸೇರಲಾಗದೆ,ನಗರದಲ್ಲಿ ಬಾಕಿಯಾಗಿರುವ ಅನೇಕ ಮಂದಿ ಕಾರ್ಮಿಕರಿಗೆ, ನಿರ್ಗತಿಕರಿಗೆ ವಿವಿಧ ಸಂಘ-ಸಂಸ್ಥೆಗಳು ಸಹಾಯಹಸ್ತ ಚಾಚಿವೆ.
ಕೊರೊನಾ ತೊಲಗಿದರೆ ಸಾಕು… ಅದೇ ಖುಷಿ
“ಕೊರೊನಾ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಕಾರ್ಮಿಕ ವರ್ಗದ ನಮ್ಮಲ್ಲೂ ಆತಂಕ ಮನೆ ಮಾಡಿದೆ. ಪ್ರತೀ ದಿನ ದುಡಿಯುವ ನಾವು ನಮ್ಮ ಕುಟುಂಬದವರನ್ನೂ ಕೊರೊನಾ ಮಹಾಮಾರಿ ಯಿಂದ ರಕ್ಷಿಸಿಕೊಳ್ಳಬೇಕು. ನಮಗೆ ಯಾವ ದಿನಾಚರಣೆಯ ಸಂಭ್ರಮವೂ ಬೇಡ. ಈ ದೇಶದಿಂದ ಕೊರೊನಾ ಒಮ್ಮೆ ತೊಲಗಿದರೆ ಸಾಕು. ಅದೇ ನಮಗೆ ಖುಷಿ ಎನ್ನುತ್ತಾರೆ’ ಹಂಪನಕಟ್ಟೆ ಬಳಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರೊಬ್ಬರು.