ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕೋಚಿಮುಲ್‌ಗೆ ಸುಮಾರು 20 ಕೋಟಿ ರೂ.ನಷ್ಟಉಂಟಾಗಿದೆ. ಆದರೂ ಸಹ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ನಲ್ಲಕದ್ರೇನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಹಾಗೂ ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದರು.
ತಾಲೂಕಿನ ನಲ್ಲಕದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಸದಸ್ಯರಿಗೆ ಬೋನಸ್ ಹಣ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ
ಕೋವಿಡ್ ಸೋಂಕಿನ ಪ್ರಭಾವದಿಂದ ಕೋಚಿಮುಲ್‌ಗೆ ಸುಮಾರು 20 ಕೋಟಿ ರೂ.ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಿಂದ ಮಾತ್ರ ಲಾಭ ಬರುತ್ತಿದ್ದು, ಹಾಲು ಮಾರಾಟ ಹೆಚ್ಚಾದ ಬಳಿಕ ಹಾಲಿನ ದರ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಈಗಾಗಲೇ 3 ಸಾವಿರ ಮೆಟ್ರಿಕ್ ಹಾಲಿನಪುಡಿ ದಾಸ್ತಾನಿದೆ.ಆದರೂ ಸಹ ಹಾಲು ಉತ್ಪಾದಕರಿಗೆ ಪ್ರತಿ ವರ್ಷ ಬೋನಸ್ ನೀಡುತ್ತಾ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ನಲ್ಲಕದ್ರೇನಹಳ್ಳಿ ಸಂಘಕ್ಕೆ 4 ಲಕ್ಷ ರೂ. ಲಾಭ ಬಂದಿದ್ದು, ಅದರಲ್ಲಿ ಒಂದೂವರೆ ಲಕ್ಷ ರೂ. ಬೋನಸ್ ಹಣವನ್ನು ಸಂಘದ ಸದಸ್ಯರಿಗೆ ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಕೇವಲ 20 ಲೀ.ಹಾಲಿನಿಂದ ಆರಂಭವಾದ ಡೇರಿ ಇದೀಗ ಪ್ರತಿನಿತ್ಯ ಸುಮಾರು 800 ಲೀ.ಹಾಲು ಸರಬರಾಜು ಮಾಡುತ್ತಿದ್ದು, ಚಿಲ್ಲಿಂಗ್ ಸೆಂಟರ್‌ನಲ್ಲಿ 3 ಸಾವಿರ ಲೀ. ಹಾಲು ಚಿಲ್ಲಿಂಗ್ ಮಾಡಿ ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತದೆ.
–ಭರಣಿ ವೆಂಕಟೇಶ್,ಕೋಚಿಮುಲ್ ನಿರ್ದೇಶಕ