ಬೆಂಗಳೂರು: ನಗರದಲ್ಲಿ ಕೊರೊನಾ ಗಣನೀಯವಾಗಿ ಏರಿಕೆ ಆಗುತ್ತಿದ್ದು, ಹಾಸಿಗೆಗಳ ಕೊರತೆ ಸೃಷ್ಟಿ ಆಗುತ್ತಿದೆ. ಇದಕ್ಕೆ ಕೆಲವು ಖಾಸಗಿ ಆಸ್ಪತ್ರೆಗಳು ಸಕಾಲದಲ್ಲಿ ಶೇ.50 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು ಹಿಂದೇಟು ಹಾಕುತ್ತಿರುವುದೇ ಕಾರಣ. ಹೌದು, ನಗರದಲ್ಲಿ ಕೊರೊನಾ ಸೋಂಕಿತರ ತುರ್ತು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸಕಾಲದಲ್ಲಿ ಶೇ.50 ಹಾಸಿಗೆಗಳನ್ನು ಬಿಟ್ಟುಕೊಡದೆ ಇರುವುದರಿಂದ ಐಸಿಯು ಮತ್ತು ಆಕ್ಸಿಜನ್ ಆಧಾರಿತ ಚಿಕಿತ್ಸೆಗೆ ಹಿನ್ನಡೆ ಉಂಟಾಗುತ್ತಿದೆ.
ಇದುವರೆಗೂ ಶೇ.15ರಿಂದ 20 ಪ್ರತಿಶತ ಹಾಸಿಗೆಗಳು ಮಾತ್ರ ಖಾಸಗಿಯಿಂದ ಲಭ್ಯವಾಗಿದೆ. ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಹಾಸಿಗೆಗಳ ಕೊರತೆಯಿದೆ. ಖಾಸಗಿ ಆಸ್ಪತ್ರೆಗಳು ಕೊರೊನೇತರ ಸೋಂಕಿತರಿಗೂ ಚಿಕಿತ್ಸೆ ನೀಡುತ್ತಿರುವುದರಿಂದ ಹಾಸಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುತ್ತಿವೆ.
ಇದು ಪಾಲಿಕೆ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಜಟಾಪಟಿಗೂ ಕಾರಣವಾಗಿದೆ. ಕೊರೊನಾ ಎರಡನೇ ಅಲೆ ಸೃಷ್ಟಿಯಾದ ಮೇಲೆ ಈ ಹಿಂದೆ ಅನುಸರಿಸಿದ ಮಾರ್ಗದಂತೆಯೇ ಖಾಸಗಿ ಆಸ್ಪತ್ರೆಗಳಿಂದ ಶೇ.50 ಹಾಸಿಗೆಗಳನ್ನು ಪಡೆದು ಸರ್ಕಾರಿ ಕೋಟಾದ ಅಡಿ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿದೆ. ಖಾಸಗಿ ಆಸ್ಪತ್ರೆಗಳಿಂದ ಶೇ.50 ಹಾಸಿಗೆ ಪಡೆದುಕೊಳ್ಳುವ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ಹತ್ತು ದಿನಗಳ ಕಾಲಾವಕಾಶ ನೀಡುವಂತೆ ಖಾಸಗಿ ಆಸ್ಪ ತ್ರೆ ಗಳು ಕೋರಿದ್ದವು. ಈ ಅವಧಿ ಮುಕ್ತಾಯವಾಗಿದ್ದು, ಮುಂದಿನ ದಿನಗಳಲ್ಲಿ ಹಾಸಿಗೆ ಪಡೆವ ನಿಟ್ಟಿನಲ್ಲಿ ಕ್ರಮ ವಹಿಸುವು ದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ಹೇಳಿದ್ದರು. ಆದರೆ, ನೋಟಿಸ್ ನೀಡಿರುವ ಬಗ್ಗೆ ಹಾಗೂ ಕ್ರಮದ ಎಚ್ಚರಿಕೆಯ ಬಗ್ಗೆ ಪಾಲಿಕೆಯಿಂದ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ನಗರದ ಖಾಸಗಿ ಆಸ್ಪತ್ರೆಗಳಿಂದ ಒಟ್ಟು ಆರು ಸಾವಿರ ಹಾಸಿಗೆಗಳನ್ನು ಪಡೆದುಕೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ. ಸುವರ್ಣ ಆರೋಗ್ಯ ಸುರûಾ ಟ್ರಸ್ಟ್ ನಿಂದ 4,300 ಹಾಸಿಗೆಗಳ ಲಭ್ಯತೆ ಇದೆ ಎಂದು ಪಾಲಿಕೆ ತಿಳಿಸಿದೆ.
ಆಕ್ಸಿಜನ್ ಸಕಾಲದಲ್ಲಿ ಲಭ್ಯವಾಗುತ್ತಿಲ್ಲ: ಸೋಂಕಿತರ ಚಿಕಿತ್ಸೆಗೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಸೃಷ್ಟಿ ಆಗುತ್ತಿರುವುದೂ ಖಾಸಗಿ ಆಸ್ಪ ತ್ರೆಗಳು ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಬಿಟ್ಟುಕೊಡಲು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ನಗರದಲ್ಲಿ ಐಸಿಯು ಮತ್ತು ವೆಂಟಿಲೇಟರ್ ಆಧಾರಿತ ಚಿಕಿತ್ಸೆಗೆ ಒಳಗಾಗುವವರಿಗೆ ಸೀಮಿತವಾದ ಹಾಸಿಗೆಗಳು ಇರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ನಗರದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಮೀಸಲಿಟ್ಟಿರುವ 5,919 ಹಾಸಿಗೆಗಳ ಪೈಕಿ ಸಾಮಾನ್ಯ ಹಾಸಿಗೆ ಶೇ. 53, ಆಕ್ಸಿಜನ್ ಹಾಸಿಗೆ ಶೇ. 74, ಐಸಿಯು ಹಾಸಿಗೆ ಶೇ. 91ಭರ್ತಿಯಾಗಿವೆ. 1,287 ಸಾಮಾನ್ಯ, 653 ಆಕ್ಸಿಜನ್, 30 ಐಸಿಯು,18 ಐಸಿಯು (ವೆಂಟಿಲೇಟರ್) ಹಾಸಿಗೆಗಳು ಲಭ್ಯವಿದೆ.
ಖಾಸಗಿ ಆಸ್ಪತ್ರೆಗಳಿಂದ ಶೇ.50 ಹಾಸಿಗೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈಗಾಗಲೇ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಒಮ್ಮೆ ನೋಟಿಸ್ ನೀಡಲಾಗಿದೆ.
ಗೌರವ್‌ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ
ಸರ್ಕಾರಿ ಕೋಟಾದಡಿ ಬರುವವರಿಂದ ವಸೂಲಿ
ಕೊರೊನಾ ದೃಢಪಟ್ಟು, ಸರ್ಕಾರಿ ಕೋಟಾದ ಅಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರಿಂದಲೂ ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಒತ್ತಾ ಯಿಸುತ್ತಿರುವ ಆರೋಪ ಕೇಳಿಬಂದಿದೆ. ಸರ್ಕಾರಿ ಕೋಟಾದ ಅಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರಿಂದ ಖಾಸಗಿ ಆಸ್ಪತ್ರೆಗಳು ಹಣ ಪಡೆಯುವಂತಿಲ್ಲ.
ಸರ್ಕಾರವೇ ಇವರ ವೆಚ್ಚವನ್ನು ಭರಿಸಲಿದೆ. ಆದರೆ, ಪರಿಸ್ಥಿತಿಯನ್ನು ದುರು ಪಯೋಗ ಪಡೆಸಿಕೊಳ್ಳುತ್ತಿರುವ ಕೆಲವು ಆಸ್ಪತ್ರೆಗಳು ಹಣಕ್ಕಾಗಿ ಒತ್ತಡ ಹೇರುತ್ತಿವೆ ಎನ್ನಲಾಗಿದೆ. 80 ವರ್ಷದ ನಮ್ಮ ತಂದೆಗೆ ಮೂರು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಬಿಬಿಎಂಪಿ ಶಿಫಾರಸಿನಂತೆ ವಸಂತನಗರದ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲು ಮುಂದಾದ ವೇಳೆ 40 ಸಾವಿರ ರೂ. ಪಾವತಿ ಮಾಡುವಂತೆ ಕೇಳಿದರು ಎಂದು ಲೋಕೇಶ್ ಎಂಬವರು ಆರೋ ಪಿಸಿದ್ದಾರೆ. ಕೊರೊನಾ ತೀವ್ರವಾಗಿದ್ದ ಹಿನ್ನೆಲೆ ಅನಿವಾರ್ಯವಾಗಿ ಸಾಲ ಮಾಡಿ ಆಸ್ಪತ್ರೆಗೆ ದಾಖಲು ಮಾಡಬೇಕಾಯಿತು. ಈಗ ತಾಯಿಗೂ ದೃಢಪಟ್ಟಿದೆ. ಆರ್ಥಿಕವಾಗಿ ಕುಸಿದಿದ್ದೇನೆ ಎಂದರು.
ಹಿತೇಶ್ ವೈ.