Advertisement

ಲಸಿಕಾ ವಿಶೇಷ ಮೇಳ: ಜಿಲ್ಲೆ ರಾಜ್ಯಕ್ಕೇ ಫಸ್ಟ್‌

06:40 PM Nov 08, 2021 | Team Udayavani |

ಗದಗ: ಮಹಾಮಾರಿ ಕೋವಿಡ್‌-19ರ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಹಲವು ಮುಂಜಾಗ್ರತಾ ಕ್ರಮಗಳು ಫಲಿಸಿವೆ. ಕಳೆದ ಅ.9 ರಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಶೂನ್ಯಕ್ಕಿಳಿದಿವೆ. ಜೊತೆಗೆ ಕೋವಿಡ್‌ ಲಸಿಕಾಕರಣದಲ್ಲಿ ಶೇ.91.8 ರಷ್ಟು ಪ್ರಗತಿ ಸಾಧಿಸಿದೆ. ನ.6 ರಂದು ರಾಜ್ಯಾದ್ಯಂತ ನಡೆದ ಲಸಿಕಾ ವಿಶೇಷ ಮೇಳದಲ್ಲಿ ಗದಗ ಮೊದಲ ಸ್ಥಾನ ಪಡೆದಿದೆ.

Advertisement

ಕೋವಿಡ್‌-19ರ ಮೊದಲ ಹಾಗೂ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ಜಿಲ್ಲಾಡಳಿತ ಕೋವಿಡ್‌ ನಿಯಂತ್ರಣಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಗದಗ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ತೀರಾ ಕಡಿಮೆ. ಆದರೂ, ಕೋವಿಡ್‌ -19ರ ನಿಯಂತ್ರಣಕ್ಕಾಗಿ ಜನರಲ್ಲಿ ರೋಗ ನಿರೋಧ ಶಕ್ತಿ ವೃದ್ಧಿಸುವ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಗಳ ಬಗ್ಗೆ ಜಿಲ್ಲಾಡಳಿತ ಬೀದಿ ನಾಟಕ, ಪ್ರಚಾರ ವಾಹನ ಸೇರಿದಂತೆ ಹಲವಾರು ಮಾಧ್ಯಮಗಳನ್ನು ಬಳಸಿಕೊಂಡು ಲಸಿಕಾಕರಣದ ಮಹತ್ವವದ ಬಗ್ಗೆ ಸಾಕಷ್ಟು ಪ್ರಚಾರ ನಡೆಸಿತ್ತು.

ಹೀಗಾಗಿ, ಜನವರಿ 16 ರಿಂದ ಜಿಲ್ಲೆಯಲ್ಲಿ ವಿವಿಧ ಹಂತದಲ್ಲಿ ಜನರಿಗೆ ಕೋವಿಡ್‌ ಲಸಿಕೆಗಳನ್ನು ನೀಡಲಾಗುತ್ತಿದೆ. ನ.6ರ ವರೆಗೆ 1167414 ಜನಸಂಖ್ಯೆಯಲ್ಲಿ ಅರ್ಹ 775000 ಜನರಿಗೆ ಲಸಿಕೆ ಗುರಿ ನಿಗದಿಪಡಿಸಲಾಗಿತ್ತು. ಆ ಪೈಕಿ 711149 ಮೊದಲ ಡೋಸ್‌(ಶೇ.91.8) ಮತ್ತು 344743 ಎರಡನೇ ಡೋಸ್‌ (ಶೇ.44.5) ಲಸಿಕೆ ನೀಡಲಾಗಿದೆ.

ಯಾರ್ಯಾರಿಗೆ ಎಷ್ಟು ಲಸಿಕೆ?: ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರ ನಂತರ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದಿದ್ದು ವಿಶೇಷ. ಆರೋಗ್ಯ ಕಾರ್ಯಕರ್ತರು 10391, ಮುಂಚೂಣಿ ಕಾರ್ಯಕರ್ತರು 4856 ಜನರು ಲಸಿಕೆ ಪಡೆದು, ಶೇ.100 ರಷ್ಟು ಗುರಿ ತಲುಪಿದೆ. 60 ವರ್ಷ ಮೇಲ್ಪಟ್ಟವರಿಗೆ ನಿಗದಿಪಡಿಸಿದ್ದ 89975ರಲ್ಲಿ 82694 ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

ಫಸ್ಟ್‌ ಬೇಕು-ಸೆಕೆಂಡ್‌ ಬೇಡ:
ಸಂಭವನೀಯ ಕೋವಿಡ್‌ 3ನೇ ಅಲೆ ಆತಂಕದಿಂದಾಗಿ ಲಸಿಕೆಗೆ ಬೇಡಿಕೆ ಹೆಚ್ಚಿತ್ತು. ಜೂನ್‌ನಿಂದ ಸತತ ಮೂರು ತಿಂಗಳಲ್ಲಿ ಲಸಿಕಾಕರಣ ಬಿರುಸಿನಿಂದ ಸಾಗಿತು. ಆರೋಗ್ಯ ಇಲಾಖೆಯೊಂದಿಗೆ ಹಲವು ಸಂಘ, ಸಂಸ್ಥೆ, ರಾಜಕೀಯ ಪಕ್ಷಗಳೂ ಲಸಿಕಾ ಶಿಬಿರಗಳನ್ನು ಆಯೋಜಿಸಿ ಜನರನ್ನು ಕರೆತರುವ ಮೂಲಕ ಲಸಿಕಾ ಅಭಿಯಾನಕ್ಕೆ ಕೈಜೋಡಿಸುತ್ತಿವೆ. ನಿರಂತರವಾಗಿ ನಡೆಯುತ್ತಿರುವ ಶಿಬಿರಗಳಿಂದಾಗಿ ಮೊದಲ ಡೋಸ್‌ ಲಸಿಕಾಕರಣದಲ್ಲಿ ಗುರುತರ ಸಾಧನೆ ತೋರಿದೆ.

Advertisement

ಈಗಾಗಲೇ ಶೇ.100 ರಷ್ಟು ಲಸಿಕಾಕರಣ ಆಗಿರುವ ಶಿರಹಟ್ಟಿ ಮತ್ತು ರೋಣ ತಾಲೂಕುಗಳಲ್ಲೂ ಜನ ಎರಡನೇ ಡೋಸ್‌ಗೆ ಹಿಂದೇಟು ಹಾಕುತ್ತಿದ್ದರೆ, ಇನ್ನುಳಿದ ತಾಲೂಕಿನಲ್ಲಿ ಮೊದಲ ಡೋಸ್‌ ಲಸಿಕಾಕರಣ ಉತ್ತಮವಾಗಿದ್ದರೂ, ಎರಡನೇ ಡೋಸ್‌ಗೆ ಉತ್ಸಾಹ ತೋರುತ್ತಿಲ್ಲ. ಎಷ್ಟೇ ಮನವೊಲಿಸಿದರೂ ಇಂದು, ನಾಳೆ ಎನ್ನುತ್ತಲೇ ಜನರು ಎರಡನೇ ಡೋಸ್‌ ಗೆ ಹಿಂದೇಟು ಹಾಕುತ್ತಿರುವುದು ಆರೋಗ್ಯ ಕಾರ್ಯಕರ್ತೆಯರು ಮತ್ತು ಅಧಿ ಕಾರಿಗಳಿಗೆ ಸವಾಲಾಗಿದೆ.

ಲಸಿಕಾ ಮೇಳದಲ್ಲಿ ಗದಗ ಮೊದಲು ಸುದೈವದಿಂದ ಸಂಭವನೀಯ ಕೋವಿಡ್‌ 3ನೇ ಅಲೆಯೂ ತಪ್ಪಿದೆ. ನ.6 ರಂದು ನಡೆದ ವಿಶೇಷ ಲಸಿಕಾ ಮೇಳದಲ್ಲಿ ಶೇ.78 ಜನರು ಮೊದಲ ಡೋಸ್‌ ಪಡೆದಿದ್ದಾರೆ. ಜಿಲ್ಲೆಗೆ ನಿಗದಿಪಡಿಸಿದ್ದ 20 ಸಾವಿರ ಡೋಸ್‌ ಗುರಿಯಲ್ಲಿ 15588 ಜನರು ಲಸಿಕೆ ಪಡೆದಿದ್ದಾರೆ. ರಾಜ್ಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಕೋವಿಡ್‌ ಲಸಿಕಾಕರಣಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಇದೆ. ಲಸಿಕೆ ಪಡೆದವರಿಗೆ ಸೋಂಕು ಪತ್ತೆಯಾಗಿದ್ದೂ ತೀರಾ ಕಡಿಮೆ. ಹೀಗಾಗಿ, ಯಾವುದೇ ಕಾರಣಕ್ಕೂ 2ನೇ ಡೋಸ್‌ಗೆ ನಿರುತ್ಸಾಹ ತೋರದೇ, ಲಸಿಕೆ ಪಡೆದುಕೊಳ್ಳಬೇಕು.
ಡಾ|ಜಗದೀಶ್‌ ನುಚ್ಚಿನ್‌, ಜಿಲ್ಲಾ ಆರೋಗ್ಯಾಧಿಕಾರಿ(ಪ್ರಭಾರ)

Advertisement

Udayavani is now on Telegram. Click here to join our channel and stay updated with the latest news.

Next