Advertisement

ಮೃತಪಟವರಿಗೂ ಮೂರನೇ ಡೋಸ್‌ ಲಸಿಕೆ: ಇದು ಆರೋಗ್ಯ ಇಲಾಖೆಯ ಚಮತ್ಕಾರ!

03:56 PM May 07, 2022 | Team Udayavani |

ರಾಮನಗರ: ಸತ್ತು 9 ತಿಂಗಳಾಗಿದೆ. ಆದರೂ, ಅವರಿಗೆ ಕೋವಿಡ್‌ ಮುಂಜಾಗ್ರತೆ (3ನೇ ಡೋಸ್‌) ಲಸಿಕೆ ಸಿಕ್ಕಿದೆ! ಇದು ಆರೋಗ್ಯ ಇಲಾಖೆಯ ಚಮತ್ಕಾರ!

Advertisement

ನಗರದ ಅಗ್ರಹಾರ ಬಡಾವಣೆಯಲ್ಲಿ ವಾಸವಾಗಿದ್ದ ರಂಗನಾಯಕಮ್ಮ.ಆರ್‌. ಎಂಬುವರು 2021ರ ಆಗಸ್ಟ್‌ 16ರಂದು ಮೃತಪಟ್ಟಿದ್ದಾರೆ. ಮೇ 6 ಶುಕ್ರವಾರ ಮಧ್ಯಾಹ್ನ ಅವರಿಗೆ ಮೂರನೇ ಡೋಸ್‌ ಕೋವಿಶೀಲ್ಡ್‌ ಲಸಿಕೆ ನೀಡಲಾಗಿದೆ ಎಂಬ ಸಂದೇಶ ಅವರ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬಂದಿದೆ. ನಗರದ ರಾಯರ ದೊಡ್ಡಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅವರಿಗೆ ಲಸಿಕೆ ಸಿಕ್ಕಿದೆ ಎಂಬ ಪ್ರಮಾಣ ಪತ್ರವೂ ಕೋವಿನ್‌ ವೆಬ್‌ಸೈಟ್‌ನಲ್ಲಿ ಸೃಷ್ಟಿಯಾಗಿದೆ.

ಒಂದೇ ಕುಟುಂಬದಲ್ಲಿನ ಐವರು ಸದಸ್ಯರಿಗೆ ಒಂದೇ ಮೊಬೈಲ್‌ ಸಂಖ್ಯೆ ಕೊಡಲು ಅವಕಾಶವಿದೆ. ಅದೇ ಕುಟುಂಬದ ವ್ಯಕ್ತಿ ಲಸಿಕೆ ಪಡೆದುಕೊಂಡಿ ದ್ದರೆ, ಆ ಕುಟುಂಬದ ಅನ್ಯ ಸದಸ್ಯರ ಹೆಸರಿನಲ್ಲಿ ಈ ಪ್ರಮಾಣಪತ್ರ ಸೃಷ್ಟಿಯಾಗಿರಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ಆದರೆ, ರಂಗನಾಯಕಮ್ಮನವರ ಕುಟುಂಬದಲ್ಲಿ ಯಾರೊಬ್ಬರು ಇತ್ತೀಚಿನ ದಿನಗಳಲ್ಲಿ ಲಸಿಕೆ ಪಡೆದುಕೊಂಡಿಲ್ಲ ಎಂಬುದು ಪ್ರಮುಖ ವಿಚಾರ. ಮೊಬೈಲ್‌ ಸಂಖ್ಯೆ ದುರುಪಯೋಗ: ಮೂರನೇ ಡೋಸ್‌ ಲಸಿಕೆ ಪಡೆಯಲು ಅರ್ಹತೆ ಇಲ್ಲದ್ದಿದ್ದರು, ಸೋಂಕಿನ ಭಯದಿಂದ ಲಸಿಕೆ ಪಡೆಯಲು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಕಾಡಿಬೇಡಿ, ಪಡೆಯುವ ಪ್ರಕರಣಗಳು ಸಾಕಷ್ಟಿವೆ. ಇಂತಹ ಸಂದರ್ಭಗಳಲ್ಲಿ ಅನ್ಯರ ಮೊಬೈಲ್‌ ಸಂಖ್ಯೆ ದುರುಪಯೋಗಿಸಲಾಗಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯ.

ಎರಡನೇ ಡೋಸ್‌ ಪಡೆಯದಿದ್ದರೂ ಪ್ರಮಾಣ ಪತ್ರ!: ನಗರದಲ್ಲಿ ವಾಸಿಸುವ ಗೃಹಿಣಿಯೊಬ್ಬರು ಎರಡನೇ ಡೋಸ್‌ ಲಸಿಕೆ ಪಡೆಯಬೇಕಿತ್ತು. ಆದರೆ, ಅವರು ಗರ್ಭಿಣಿಯಾಗಿದ್ದರಿಂದ ಅವರು ಎರಡನೇ ಡೋಸ್‌ ಲಸಿಕೆ ಪಡೆಯಲಿಲ್ಲ. ಹೀಗಿ ದ್ದರೂ ಅವರಿಗೆ ಎರಡನೇ ಡೋಸ್‌ ಲಸಿಕೆ ಪಡೆದಿ ದ್ದೀರಿ ಎಂಬ ಸಂದೇಶ ರವಾನೆಯಾಗಿದೆ. ಇಂತಹ ಅನೇಕ ಎಡವಟ್ಟಿನ ಪ್ರಕರಣಗಳ ಬಗ್ಗೆ ನಾಗರಿಕರ ವಲಯದಲ್ಲಿ ದಿನನಿತ್ಯ ಕೇಳಿ ಬರುತ್ತಲೇ ಇದೆ. ಆದರೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.

Advertisement

ಓಟಿಪಿ ಬೇಕಾಗಿಲ್ಲ: ಮೊದಲನೇ ಡೋಸ್‌ ಲಸಿಕೆ ಪಡೆಯಲು ಮಾತ್ರ ಲಸಿಕೆ ಕೊಡುವ ಸಿಬ್ಬಂದಿ ಓಟಿಪಿ ಕೇಳುತ್ತಾರೆ. ಎರಡು ಮತ್ತು ಮೂರನೇ ಡೋಸ್‌ಗೆ ಓಟಿಪಿ ಅಗತ್ಯವಿಲ್ಲ. ಹೀಗಾಗಿಯೇ ಸಿಬ್ಬಂದಿ ಆಡಿದ್ದೇ ಆಟವಾಗಿದೆ ಎಂದು ನಾಗರಿಕರು ದೂರಿದ್ದಾರೆ. ಶೇ.100 ಸಾಧನೆ ಬಗ್ಗೆ ಅನುಮಾನ: ದಿನನಿತ್ಯ ಇಂತಹ ಎಡವಟ್ಟಿನ ಪ್ರಕರಣಗಳ ಬಗ್ಗೆ ನಾಗರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಕೊಡುವ ವಿಚಾರದಲ್ಲಿ ಶೇ.100 ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವು ದರ ಬಗ್ಗೆ ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸತ್ತವರಿಗೂ ಲಸಿಕೆ, ಲಸಿಕೆ ಪಡೆಯದಿದ್ದವರೂ ಲಸಿಕೆ ಕೊಟ್ಟಿರುವ ಸಂದೇಶಗಳು ನಗೆಪಾಟಲಿಗೆ ಕಾರಣವಾಗಿದೆ.

ಸಿಬ್ಬಂದಿಯಿಂದ ಉಡಾಫೆ ಉತ್ತರ : ನನ್ನ ಮಡದಿ ಗರ್ಭಿಣಿಯಾಗಿದ್ದ ಕಾರಣ ಎರಡನೇ ಡೋಸ್‌ ಪಡೆಯಲಿಲ್ಲ. ಆದರೂ, ಆಕೆಯ ಮೊಬೈಲ್‌ಗೆ ಲಸಿಕೆ ಪಡೆದಿದ್ದೀರಿ ಎಂಬ ಸಂದೇಶ ಬಂದಿದೆ. ಈ ವಿಚಾರವನ್ನು ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ನಿಮಗೆ ಲಸಿಕೆ ಬೇಕಲ್ಲವೇ, ಬನ್ನಿ ಕೊಡುತ್ತೇವೆ ಎಂಬ ಉಡಾಫೆ ಉತ್ತರ ಸಿಕ್ಕಿದೆ ಎಂದು ಹೆಸರನ್ನು ಹೇಳದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಕೋವಿಡ್‌ ಸೋಂಕಿನ ವೇಳೆ ತಮ್ಮ ಆರೋಗ್ಯವನ್ನು ಪಣಕ್ಟಿಟ್ಟು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ನಾಗರಿಕರ ಆರೋಗ್ಯ ಕಾಪಾಡಲು ಶ್ರಮಿಸಿದ್ದಾರೆ. ಕೆಲವು ಸಿಬ್ಬಂದಿ ಮಾಡುವ ಎಡವಟ್ಟಿನಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು.

ಕೋವಿಡ್‌ ತಂತ್ರಾಂಶದಲ್ಲೇ ಲೋಪವಿದ್ದರೆ ಸರಿಪಡಿಸಲು ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕು. ಆರೋಗ್ಯ ಇಲಾಖೆಯ ಬಗ್ಗೆ ಜನತೆಗೆ ಇರುವ ವಿಶ್ವಾಸವನ್ನು ಇನ್ನಷ್ಟು ಬಲಪಡಿಸಿ. – ಪಿ.ವಿ.ಬದ್ರಿನಾಥ, ವ್ಯಾಪಾರಿ, ರಾಮನಗರ

ಒಂದೇ ಕುಟುಂಬದ ಐವರಿಗೆ ಒಂದೇ ಮೊಬೈಲ್‌ ಸಂಖ್ಯೆ ಕೊಡುವ ಅವಕಾಶವಿದೆ. ಕುಟುಂಬದ ಯಾರೊಬ್ಬರು ಲಸಿಕೆ ಪಡೆದುಕೊಂಡಿದ್ದರೆ, ಆಕಸ್ಮಿಕವಾಗಿ ಬೇರೊಬ್ಬರ ಹೆಸರಿಗೆ ಸಂದೇಶ ರವಾನೆ ಯಾಗಿರುವ ಸಾಧ್ಯತೆಯಿದೆ. ಪರಿಶೀಲಿಸಿ ಕ್ರಮವಹಿಸಲಾಗುವುದು. – ಡಾ. ಪದ್ಮ, ಆರ್‌.ಸಿ.ಎಚ್‌.ಅಧಿಕಾರಿ

ನಮ್ಮ ಅಜ್ಜಿ ಮೃತಪಟ್ಟು 9 ತಿಂಗಳಾಗಿದೆ. ಲಸಿಕೆ ಕೊಟ್ಟಿರುವು ದಾಗಿ ಸಂದೇಶ ಬಂದಿದೆ. ಪ್ರತಿ ಡೋಸ್‌ ಕೊಡುವ ಮುನ್ನ ಓಟಿಪಿ ವ್ಯವಸ್ಥೆ ಅಥವಾ ಇನ್ನಾವುದೇ ವ್ಯವಸ್ಥೆ ಜಾರಿಯಾ ದರೆ ಇಂತಹ ಎಡವಟ್ಟುಗಳನ್ನು ತಡೆಯಬಹುದು. – ಲಿಖಿತ್‌, ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next