Advertisement

ವಾರದ ಹಿಂದೆ ನಗರಕ್ಕೆ ಬಂದಿಳಿದವರ ಶೋಧ

11:45 AM Nov 30, 2021 | Team Udayavani |

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಪ್ರಕರಣ ಗಳ ಹೆಚ್ಚಳ ಹಾಗೂ ಒಮಿಕ್ರಾನ್‌ ಭೀತಿ ಉಂಟಾದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ತಪಾಸಣೆ ಚುರುಕುಗೊಳಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಹೊರ ರೋಗಿಗಳು ಮತ್ತು ಒಮಿಕ್ರಾನ್‌ ಹಾವಳಿ ಇರುವ ದೇಶಗಳಿಂದ ವಾರದ ಹಿಂದೆ ಬಂದಿಳಿದವರ ಶೋಧ ಕಾರ್ಯ ನಡೆಸಿದೆ.

Advertisement

ಈಗಾಗಲೇ ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಯೊಂದಿಗಿನ ಪ್ರಾಥಮಿಕ ಸಂಪರ್ಕ ಹೊಂದಿದ್ದ 15 ಜನರನ್ನು ಪತ್ತೆಹಚ್ಚಿ, ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಜತೆಗೆ ವರದಿ ಬರುವವರೆಗೆ ಕ್ವಾರಂಟೈನ್‌ ಮಾಡಲಾಗಿದೆ. ಈ ಮಧ್ಯೆ ಏಳು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ, ಹಾಂಗ್‌ ಕಾಂಗ್‌, ಇಟಲಿ, ಬ್ರಿಟನ್‌, ಜರ್ಮನಿ, ಇಸ್ರೇಲ್‌, ಬೆಲ್ಜಿಯಂ ಸೇರಿದಂತೆ ಒಟ್ಟಾರೆ 12 ದೇಶಗಳಿಂದ ಬಂದವರ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ.

ಇದುವರೆಗೆ (ಏಳು ದಿನಗಳಲ್ಲಿ) ಸುಮಾರು 96 ಜನ ಇದ್ದು, ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಬಂದವರೇ ಅಂದಾಜು 80. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 35 ಜನ ಇದ್ದಾರೆ ಎನ್ನಲಾಗಿದೆ. ಇತರೆ ದೇಶಗಳಿಂದ ಬಂದವರೂ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ;- ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ಅವರ ವಿಳಾಸ ಮತ್ತು ಫೋನ್‌ ನಂಬರ್‌ ಅನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಗ್ರಹಿಸಲಾಗಿದ್ದು, ಎಲ್ಲ ವಲಯಗಳ ಆರೋಗ್ಯಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅದೇ ರೀತಿ, ನಿತ್ಯ ವಿಮಾನ ನಿಲ್ದಾಣದಿಂದ ವಿದೇಶದಿಂದ ಬಂದಿಳಿದವರ ಒಂದು ಪಟ್ಟಿ ಪಾಲಿಕೆಗೆ ಬರಲಿದ್ದು, ಅವರ ಆರ್‌ ಟಿಪಿಸಿಆರ್‌ ಪರೀಕ್ಷೆ ನಿಯಮಿತವಾಗಿ ನಡೆಯಲಿದೆ.

Advertisement

ಒಂದು ವೇಳೆ ಪಾಸಿಟಿವ್‌ ಬಂದರೆ, ವೈರಸ್‌ ಲೋಡ್‌ ನೋಡಿಕೊಂಡು ಜಿನೋಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾ ಗುತ್ತದೆ. ಬೆನ್ನಲ್ಲೇ ಪ್ರಾಥಮಿಕ ಸೋಂಕಿತರ ಪತ್ತೆ ಕಾರ್ಯ ಶುರುವಾಗುತ್ತದೆ. ಆದರೆ, ಸದ್ಯಕ್ಕೆ ಇದುವರೆಗೆ ಒಮಿಕ್ರಾನ್‌ ಇರುವ ಬಗ್ಗೆ ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ಬಿಬಿಎಂಪಿ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು. ”

ಸಾಮಾನ್ಯವಾಗಿ ವಿದೇಶಗಳಿಂದ ಅದರಲ್ಲೂ ಒಮಿಕ್ರಾನ್‌ ಹಾವಳಿ ಹೆಚ್ಚಿರುವ ಇಟಲಿ, ಜರ್ಮನಿ, ನೆದರ್‌ಲ್ಯಾಂಡ್‌ ಮತ್ತಿತರ ದೇಶಗಳಿಂದ ಇಲ್ಲಿಗೆ ನೇರ ವಿಮಾನ ಸೇವೆ ಇಲ್ಲ. ಬಹುತೇಕ ಕನೆಕ್ಟಿಂಗ್‌ ಫ್ಲೈಟ್‌ ಆಗಿವೆ. ಇಂಗ್ಲೆಂಡ್‌ ಸೇರಿದಂತೆ ಯೂರೋಪಿಯನ್‌ ದೇಶಗಳಿಂದ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆಯೂ ಕಡಿಮೆಯಾಗಿದ್ದು, ದಿನಕ್ಕೆ ಹತ್ತು ಜನರೂ ಇರುವುದಿಲ್ಲ’ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ಸ್ಪಷ್ಟಪಡಿಸಿವೆ.

 ಖಾಸಗಿ ಆಸ್ಪತ್ರೆ ರೋಗಿಗಳಿಗೂ ಕೋವಿಡ್‌ ಟೆಸ್ಟ್‌!: ಈ ಮಧ್ಯೆ ಕೆಲ ದಿನಗಳಿಂದ ತಪಾಸಣೆ ಮತ್ತಷ್ಟು ಚುರುಕುಗೊಳಿಸಿರುವ ಪಾಲಿಕೆ, ಗಲ್ಲಿ ಕ್ಲಿನಿಕ್‌ಗಳು, ಖಾಸಗಿ ಆಸ್ಪತ್ರೆಗಳಿಗೆ ಶೀತ, ಕೆಮ್ಮು, ಜ್ವರ, ತೀವ್ರ ಉಸಿರಾ ಟದ ತೊಂದರೆ ಹಿನ್ನೆಲೆಯಲ್ಲಿ ಬರುವ ರೋಗಿಗಳನ್ನೂ ಕೋವಿಡ್‌-19 ಪರೀಕ್ಷೆಗೊಳಪಡಿಸುತ್ತಿದೆ.

ಆಯಾ ವಲಯಗಳ ಆರೋಗ್ಯ ಅಧಿಕಾರಿಗಳು ಸ್ಥಳೀಯ ಸಿಬ್ಬಂದಿ ನೆರವಿನೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ಲಿನಿಕ್‌ಗಳು, ಆಸ್ಪತ್ರೆಗಳಿಗೆ ಭೇಟಿ ನೀಡಿ, ಸಾರಿ (ತೀವ್ರ ಉಸಿರಾಟದ ಸಮಸ್ಯೆ), ಐಎಲ್‌ಐ (ವಿಷಮಶೀತ ಜ್ವರ) ಒಳಗೊಂಡಂತೆ ಕೊರೊನಾ ಸೋಂಕಿಗೆ ಪೂರಕ ವಾದ ಲಕ್ಷಣಗಳಿರುವ ಹೊರರೋಗಿಗಳ ಪಟ್ಟಿಯನ್ನು ಪಡೆಯುತ್ತಿದೆ. ಅವರಿಗೆ ನಂತರ ಫೋನಾಯಿಸಿ, ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿ ಸಲಾಗುತ್ತಿದೆ. ಈಗಾಗಲೇ ಹೀಗೆ ನೂರಾರು ಹೊರ ರೋಗಿಗಳನ್ನು ಪರೀಕ್ಷೆಗೊಳ ಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ದಕ್ಷಿಣ ಆಪ್ರಿಕಾದಿಂದ ಇಲ್ಲಿಗೆ ಬಂದಿಳಿದವರ ಪಟ್ಟಿ ತರಿಸಿಕೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಇಂಥ ಸುಮಾರು 30 ಜನ ಇರಬಹುದು. ಅವರೆಲ್ಲರನ್ನೂ ಪರೀಕ್ಷೆಗೊಳಪಡಿ ಸಲಾಗುವುದು. ಅದೇ ರೀತಿ, ಇತರೆ ದೇಶಗಳಿಂದ ಬಂದವರ ಬಗ್ಗೆಯೂ ನಿಗಾ ಇಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಹೊರರೋಗಿಗಳನ್ನೂ ಪರೀಕ್ಷೆಗೊಳಪಡಿಸಲಾಗುತ್ತಿದೆ. – ಕೆ.ವಿ. ತ್ರಿಲೋಕ್‌ ಚಂದ್ರ, ವಿಶೇಷ ಆಯುಕ್ತರು (ಆರೋಗ್ಯ), ಬಿಬಿಎಂಪಿ.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next