Advertisement

ಕೋವಿಡ್: ದಸರಾ ಸರಳ ಆಚರಣೆಗೆ ನಿರ್ಧಾರ

04:49 PM Oct 04, 2020 | Suhan S |

ದಾವಣಗೆರೆ: ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ದಸರಾ ಹಬ್ಬದ ಕಾರ್ಯಕ್ರಮ ನಡೆಸಲು ಶನಿವಾರ ದುರ್ಗಾಂಬಿಕಾ ದೇವಾಲಯದ ಪ್ರಸಾದ ನಿಲಯದಲ್ಲಿ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್‌ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್‌ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಚರ್ಚೆ, ಪರಾಮರ್ಶೆಯ ನಂತರಸರಳವಾಗಿ ದಸರಾ ಮಹೋತ್ಸವ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಮಹಾಮಾರಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ಬಾರಿ ದಸರಾ ದಲ್ಲಿ ನೆರವೇರಿಸಲಾಗುತ್ತಿದ್ದ ಕುಂಭಾಭಿಷೇಕ ಮೆರವಣಿಗೆ, ಅಭಿಷೇಕ, ಸಾಮೂಹಿಕ ವಿವಾಹಗಳನ್ನು ನಡೆಸದಂತೆ ತೀರ್ಮಾನ ಕೈಗೊಳ್ಳಲಾಯಿತು. 1001 ಕುಂಭಗಳ ಬದಲಿಗೆ ಸರಳವಾಗಿ 9 ಕಳಶಗಳನ್ನು ಇಟ್ಟು ಪೂಜಿಸಲು ಹಾಗೂ ನವದುರ್ಗೆಯರನ್ನು ಪೂಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೋವಿಡ್‌ ಕಾರಣದಿಂದ ಸರ್ಕಾರದ ನಿಯಮಗಳನ್ನು ಪಾಲಿಸುವುದು ಮುಖ್ಯ. ಸಭೆ ಸಮಾರಂಭಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡದೇ ಇರುವುದರಿಂದ ಸರಳ ಆಚರಣೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ತಿಳಿದುಕೊಂಡು ಹಬ್ಬದ ಆಚರಣೆ ಮಾಡಬೇಕು. ಆದರೆ ಕುಂಭಗಳನ್ನು ಮಾಡುವಂತಹ ಕುಂಬಾರರಿಗೆ ಗೌರವ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ದೇವಸ್ಥಾನ ಟ್ರಸ್ಟ್‌ ಸಂಬಂಧಪಟ್ಟ ಲೆಕ್ಕಪತ್ರಗಳಿಗೆ ಸಂಬಂಧಪಟ್ಟಂತೆ ವಾದ-ವಿವಾದವೂ ನಡೆಯಿತು. ಟ್ರಸ್ಟ್‌ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಅವರನ್ನು ಮಾಜಿ ಶಾಸಕ ಅಧ್ಯಕ್ಷ ಯಜಮಾನ್‌ ಮೋತಿ ವೀರಣ್ಣ ತರಾಟೆಗೆ ತೆಗೆದುಕೊಂಡರು. ಲೆಕ್ಕಪತ್ರ ಸರಿಯಾಗಿ ಇಟ್ಟುಕೊಳ್ಳಬೇಕು. ಗೌಡಿಕೆ ಮಾಡುವುದು ಸರಿಯಲ್ಲ. ದೇವಾಲಯ ಯಾರ ಮಾಲಿಕತ್ವದಲ್ಲೂ ಇಲ್ಲ. ಎಲ್ಲಾ ಜನಾಂಗದವರಿಗೂ ಸೇರಿದ್ದು, ಇನ್ನು ಮುಂದೆ ತಪಉ ³ ಮಾಡಿದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ ಪ್ರಸಂಗವೂ ಜರುಗಿತು. ತಪ್ಪು  ಮಾಡಿದ್ದರೆ ತಿದ್ದಿಕೊಳ್ಳುತ್ತೇನೆ ಎಂದು ಗೌಡ್ರ ಚನ್ನಬಸಪ್ಪ ಸಮಜಾಯಿಷಿ ನೀಡಿದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಲೆಕ್ಕಪತ್ರದ ಪೂರ್ಣ ವಿವರಕ್ಕೆ ಒತ್ತಾಯಿಸಿದರು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಮಾತನಾಡಿ, ತಪ್ಪಿದ್ದರೆ ಇದ್ದರೆ ಇಡಿ ಸಮಿತಿಯೇ ಹೊಣೆ ಹೊರಬೇಕು. ಒಬ್ಬರ ಮೇಲೆ ದೂಷಣೆ ಮಾಡುವುದು ಸರಿಯಲ್ಲ ಎಂದರು. ಧರ್ಮದರ್ಶಿಗಳಾದ ಅಥಣಿ ಎಸ್‌. ವೀರಣ್ಣ, ಎಚ್‌.ಡಿ. ಗೋಣೆಪ್ಪ, ಉಮೇಶ್‌ ಜಾಧವ್‌, ಹನುಮಂತರಾವ್‌ ಜಾಧವ್‌, ಜೆ.ಕೆ. ಕೊಟ್ರಬಸಪ್ಪ, ರಾಮಕೃಷ್ಣ, ಬಳ್ಳಾರಿ ಷಣ್ಮುಖಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next