ಚಿಕ್ಕಬಳ್ಳಾಪುರ: ಜೂ.14ರವರೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್ ಅವಧಿಯನ್ನು ಹಾಗೂ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಹೆಚ್ಚುವರಿ ನಿಬಂಧನೆಗಳ ಲಾಕ್‌ಡೌನ್ ಅನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ, ತಾಪಂ ಅಧಿಕಾರಿಗಳು, ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಮಂಗಳವಾರ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳೊಂದಿಗೆ ಕೋವಿಡ್ ನಿಯಂತ್ರಣ ಕುರಿತು ಟಾಸ್ಕ್ಫೋರ್ಸ್ ಸಮಿತಿ ಕಾರ್ಯ ವೈಖರಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಸ್ಥಿತಿಗತಿ ವಿಚಾರಿಸಿ:ಪಿಡಿಒಗಳು ತಮ್ಮ ಕಾರ್ಯ ಸ್ಥಾನದಲ್ಲಿ ವಾಸವಿದ್ದು, ಟಾಸ್ಕ್ಫೋರ್ಸ್ ಸಮಿತಿಗಳನ್ನು ಹೆಚ್ಚು ಸಕ್ರಿಯಗೊಳಿಸಿ ಪ್ರತಿ ದಿನ ಮನೆಗಳನ್ನು ಭೇಟಿ ಮಾಡಿ ಜನರ ಆರೋಗ್ಯದ ಸ್ಥಿತಿಗತಿ ವಿಚಾರಿಸಬೇಕೆಂದರು. ಹೊಸದಾಗಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ: ತಮ್ಮ ಗ್ರಾಪಂ ಅನ್ನು ಮೊದಲು ಕೊರೊನಾ ಮುಕ್ತ ಮಾಡಬೇಕು ಎನ್ನುವ ಆರೋಗ್ಯಕರ ಸ್ಪರ್ಧೆ ರೀತಿಯಲ್ಲಿ ಪಿಡಿಒಗಳು ಕೆಲಸ ಮಾಡಬೇಕು. ಒಂದಂಕಿ ಕೋವಿಡ್ ಸಕ್ರಿಯ ಪ್ರಕರಣಗಳಿರುವ ಗ್ರಾಪಂಗಳಲ್ಲಿ ಮತ್ತೆ ಹೊಸ ಸೋಂಕು ಹರಡದಂತೆ ಎಚ್ಚರ ವಹಿಸಬೇಕೆಂದರು. ಒಂದೇ ತಾಲೂಕಿನಲ್ಲಿ 3 ಗ್ರಾಪಂಗಳನ್ನು ಮೊದಲು ಕೊರೊನಾ ಮುಕ್ತ ಮಾಡಿದವರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುತ್ತದೆ ಎಂದರು.
ಕೋವಿಡ್ ಮುಕ್ತ ಕಡದಮರಿ ಗ್ರಾಪಂ: ಚಿಂತಾಮಣಿ ತಾಲೂಕಿನ ಕಡದಮರಿ ಗ್ರಾಪಂನಲ್ಲಿ ಸಕ್ರಿಯ ಪ್ರಕರಣ ಶೂನ್ಯಕ್ಕೆ ತಂದು ಅಲ್ಲಿನ ಟಾಸ್ಕ್ಫೋರ್ಸ್ ಸಮಿತಿ ಹಾಗೂಪಿಡಿಒ ನಾಗರಾಜ್‌ಗೌಡ ಅವರು ಪ್ರತಿದಿನ ಪ್ರತಿ ಮನೆ ಭೇಟಿ ಮಾಡಿ 4 ದಿನಗಳಿಂದ ಸೋಂಕು ದಾಖಲಾಗದಂತೆ ಎಚ್ಚರ ವಹಿಸಿ ಗ್ರಾಪಂ ಅನ್ನು ಕೊರೊನಾ ಮುಕ್ತವನ್ನಾಗಿ ಮಾಡಿದ್ದಕ್ಕಾಗಿ ಗ್ರಾಮಾಡಳಿತವನ್ನು ಅಭಿನಂದಿಸಿದರು.
ಮಾಹಿತಿ ನೀಡದ ಕ್ಲಿನಿಕ್ ಮುಚ್ಚಿಸಿ: ಕೆಮ್ಮು, ಜ್ವರ ನೆಗಡಿಯಂತಹ ಸಾಮಾನ್ಯ ರೋಗಗಳಿಗೆ ಚಿಕಿತ್ಸೆಪಡೆಯಲು ಕ್ಲಿನಿಕ್‌ಗೆ ಬರುವ ಜನರ ಬಗ್ಗೆ ಆ ಕ್ಲಿನಿಕ್‌ಗಳ ಮುಖ್ಯಸ್ಥರು ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ಅಥವಾ ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ಪ್ರತಿ ದಿನ ಮಾಹಿತಿ ನೀಡಬೇಕು. ಸಹಕರಿಸದ ಕ್ಲಿನಿಕ್‌ಗಳ ಪರವಾನಗಿ ರದ್ದುಪಡಿಸಿ ಎಂದು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಪಿ. ಶಿವಶಂಕರ್, ಡಿಎಚ್‌ಒ ಡಾ. ಇಂದಿರಾ ಆರ್.ಕಬಾಡೆ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳಿದ್ದರು.