ಬೀದರ: ಕರುನಾಡಿನಲ್ಲಿ ಅಬ್ಬರಿಸುತ್ತಲೇ ಇರುವ ಕೊರೊನಾ ಎರಡನೇ ಅಲೆ ಗಡಿ ನಾಡು ಬೀದರ ಜಿಲ್ಲೆ ಯಲ್ಲಿ ಮಾತ್ರ ಇಳಿಮುಖದತ್ತ ಹೆಜ್ಜೆಯನ್ನಿಟ್ಟಿದೆ. ಹಿಂದೆ ಕೊರೊನಾ ಹಾಟ್ ಸ್ಪಾಟ್ ಜಿಲ್ಲೆ ಪಟ್ಟ ಹೊತ್ತಿದ್ದ ಬೀದರ ಈಗ ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ರೇಟ್ ಲೀಸ್ಟ್‌ನಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆಯಲ್ಲದೇ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಮುಖವಾಗಿದ್ದು ಸಂಪೂರ್ಣ ನಿಯಂತ್ರಣದತ್ತ ಸಾಗಿದೆ.
ಇದಕ್ಕೆ ಪಶು ಸಂಗೋಪನಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ದಿಟ್ಟ ಕ್ರಮ ಕಾರಣ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜತೆ ಸಚಿವರ ಸಮನ್ವಯತೆ, ಎಲ್ಲರೂ ಒಂದಾಗಿ ನಡೆಸಿದ ಶತ ಪ್ರಯತ್ನದಿಂದ ಇಂದು ಜಿಲ್ಲೆಯಲ್ಲಿ ಕೊರೊನಾ ಕಟ್ಟಿ ಹಾಕುವಲ್ಲಿ ಯಶಸ್ಸು ದೊರಕಿದೆ.
ಹೌದು. ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಹಗಲಿರುಳ ಪರಿಶ್ರಮದ ಫಲವಾಗಿ ಇಂದು ಬೀದರನಲ್ಲಿ ಕೊರೊನಾ ಹಿಡಿತಕ್ಕೆ ಬಂದಿದೆ ಎಂದರೆ ಅತಿಶಯೋಕ್ತಿ ಅಲ್ಲ. ಕಣ್ಣಿಗೆ ಕಾಣದ ಒಂದು ಸಣ್ಣ ವೈರಸ್ ಪೆಡಂಭೂತವಾಗಿ ಜನರ ಜೀವ ಹಿಂಡುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು ಪ್ರಭು ಚವ್ಹಾಣ ಅವರು.
ಜಿಲ್ಲೆಗಳಲ್ಲಿ ಅಧಿಕಾರಿ ವರ್ಗ, ವಿರೋಧ ಪಕ್ಷದ ಪ್ರತಿನಿಧಿಗಳು, ಸ್ವ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು, ರಕ್ಕಸ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಒಗ್ಗಟ್ಟಿನೊಂದಿಗೆ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಸಮಾಜಮುಖೀ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.