ಬೀದರ: ಕೋವಿಡ್ ನಿಯಂತ್ರಣ ಚಟುವಟಿಕೆಗಳಲ್ಲಿ ತೊಡಗಿರುವ ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಕೋವಿಡ್ ಶಂಕಿತರ ನೆರವಿಗಾಗಿ ಎರಡು ಉಚಿತ ಕೋವಿಡ್ ಫೀವರ್ ಕ್ಲಿನಿಕ್ ಗಳನ್ನು ಆರಂಭಿಸಿದೆ.
ನಗರದ ಗವಾನ್ ಚೌಕ್ ಹಾಗೂ ಅಬುಲ್ ಫೈಜ್ ದರ್ಗಾದಲ್ಲಿ ತಲಾ ಒಬ್ಬರು ವೈದ್ಯರು, ಶುಶ್ರೂಷಕ ಹಾಗೂ ವೈದ್ಯಕೀಯ ಸಲಕರಣೆ ಒಳಗೊಂಡ ಫೀವರ್ ಕ್ಲಿನಿಕ್ ಪ್ರಾರಂಭಿಸಿದೆ. ಗವಾನ್ ಚೌಕ್ ಕ್ಲಿನಿಕ್ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಹಾಗೂ ಅಬುಲ್ ಫೈಜ್ ದರ್ಗಾ ಕ್ಲಿನಿಕ್ ಸಂಜೆ 4ರಿಂದ 7 ರವರೆಗೆ ತೆರೆದಿರಲಿದೆ. ಇಲ್ಲಿ ಉಚಿತ ತಪಾಸಣೆ ಜತೆಗೆ ಔಷಧಿ ದೊರೆಯಲಿದೆ.
ಗವಾನ್ ಚೌಕ್ ಬಳಿಯ ಉಚಿತ ಕೋವಿಡ್ ಫೀವರ್ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್ ಖದೀರ್, ಕೋವಿಡ್ ಶಂಕಿತರು ಫೀವರ್ ಕ್ಲಿನಿಕ್‌ಗಳ ಪ್ರಯೋಜನ ಪಡೆಯಬೇಕು. ಉಚಿತ ಸೇವೆಗಾಗಿ ಡಾ| ಜಮೀಲ್ (ಮೊ: 6360218307) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ನಗರದಲ್ಲಿ ಇನ್ನೂ ಐದು ಫೀವರ್ ಕ್ಲಿನಿಕ್ ಗಳನ್ನು ತೆರೆಯುವ ಉದ್ದೇಶ ಇದೆ. ಆಸಕ್ತ ವೈದ್ಯರು ಸಂಸ್ಥೆಯನ್ನು ಸಂಪರ್ಕಿಸಬಹುದು. ಸಂಸ್ಥೆ ಆರಂಭಿಸಿರುವ ವೆಬ್‌ಸೈಟ್‌ನಲ್ಲಿ ಪ್ಲಾಸ್ಮಾ, ಆಂಬ್ಯುಲೆನ್ಸ್, ಕೋವಿಡ್ ಫಸ್ಟ್ ಏಡ್, ವೈದ್ಯರ ಉಚಿತ ಸಲಹೆ, ಕೋವಿಡ್ ಆಸ್ಪತ್ರೆಗಳ ಮಾಹಿತಿ, ಆಕ್ಸಿಜನ್ ಸೌಲಭ್ಯ, ಕೌನ್ಸೆಲಿಂಗ್, ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ವಿಧಾನ ಸೇರಿದಂತೆ ವಿವಿಧ ಮಾಹಿತಿ ಲಭ್ಯ ಇವೆ. ವೆಬ್‌ಸೈಟ್‌ಗೆ ಸಂಬಂಧಿ ಸಿದ ಹೆಚ್ಚಿನ ಮಾಹಿತಿ ಹಾಗೂ ಕೋವಿಡ್ ನಿಯಂತ್ರಣದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಬಯಸುವವರು ಮೊ: 8970973758ಗೆ ಸಂಪರ್ಕಿಸಬಹುದು ಎಂದು ಹೇಳಿದರು. ಡಾ| ಮಕ್ಸೂದ್ ಚಂದಾ, ಅಬ್ದುಲ್ ಮನ್ನಾನ್ ಸೇಠ್ ಟೀಮ್ ಯುವಾದ ವಿನಯ ಮಾಳಗೆ ಇದ್ದರು.