ಹೊಸದಿಲ್ಲಿ: ದೇಶದ ಪ್ರತೀ ಐದು ಜಿಲ್ಲೆಗಳ ಪೈಕಿ 2ರಲ್ಲಿ ಶೇ.20ಕ್ಕಿಂತ ಹೆಚ್ಚು ಸೋಂಕಿನ ಪಾಸಿಟಿವಿಟಿ ಪ್ರಮಾಣ ಇದೆ. ಈ ತಿಂಗಳ 1ರಿಂದ7ರ ವರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಂಗ್ರಹಿಸಿದ ಮಾಹಿತಿ ಯಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಈ ಪೈಕಿ 15 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ. ಕರ್ನಾಟಕದ ಅಂಶವನ್ನೇ ತೆಗೆದು ಕೊಂಡರೆ 24 ಜಿಲ್ಲೆಗಳಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.20 ಕ್ಕಿಂತ ಹೆಚ್ಚಾಗಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ಸೋಂಕಿನ ಪಾಸಿಟಿವಿಟಿ ಹೆಚ್ಚಾಗಿರುವುದು ಅರುಣಾಚಲ ಪ್ರದೇಶದ ಚಂಗ್ಲಾಗ್ ಜಿಲ್ಲೆಯಲ್ಲಿ. ಅಲ್ಲಿ ಶೇ.91.5ರಷ್ಟು ಇದೆ. ಹೆಚ್ಚಿನ ಪ್ರಮಾಣ ಇರುವ ಜಿಲ್ಲೆಗಳ ಪೈಕಿ ಪುದುಚೇರಿಯ ಯಾನಮ್, ರಾಜಸ್ಥಾನದ ಬಿಕಾನೇರ್ ಮತ್ತು ಪಾಲಿ, ಅರುಣಾಚಲ ಪ್ರದೇಶದ ದಿಬನ್ ವ್ಯಾಲಿ ಜಿಲ್ಲೆಗಳಿವೆ.
ಶೇ.20ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಇರುವ ಪಟ್ಟಿಯಲ್ಲಿ ಹಲವು ಜಿಲ್ಲೆಗಳಿವೆ. ಕೇರಳದ 14ರ ಪೈಕಿ 13, ಹರಿಯಾಣದ 22ರ ಪೈಕಿ 19, ಪಶ್ಚಿಮ ಬಂಗಾಲದ 23ರ ಪೈಕಿ 19, ದಿಲ್ಲಿಯ 11ರ ಪೈಕಿ 9 ಜಿಲ್ಲೆಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಪ್ರಕರಣಗಳು ಇವೆ. ಗೋವಾ ಮತ್ತು ಪುದುಚೇರಿಯ ಲ್ಲಿರುವ ಎಲ್ಲ ಜಿಲ್ಲೆಗಳು, ಸಿಕ್ಕಿಂನ 4 ಜಿಲ್ಲೆಗಳ ಪೈಕಿ 3, ಚಂಡೀಗಢದಲ್ಲಿರುವ 1 ಜಿಲ್ಲೆ ಕೂಡ ಹೆಚ್ಚು ಪಾಸಿಟಿವಿಟಿ ಪ್ರಕರಣಗಳನ್ನು ಹೊಂದಿವೆ.
3ನೇ ಅಲೆಯ ತೀವ್ರತೆ ಕುಗ್ಗಿಸಲು ಸಾಧ್ಯ: ತಜ್ಞರ ಅಭಿಮತ
ಹೊಸದಿಲ್ಲಿ: ಕೊರೊನಾ ಸೋಂಕಿನ 3ನೇ ಅಲೆ ಬರುವುದಂತೂ ಸತ್ಯ. ಆದರೆ ಜನರು ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಹಾಗೂ ಬಹುಸಂಖ್ಯೆಯ ಜನರಿಗೆ ಲಸಿಕೆ ನೀಡಿದರೆ ಖಂಡಿತಾ ಮುಂದಿನ ಅಲೆಯ ಗಂಭೀರತೆಯನ್ನು ತಪ್ಪಿಸಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಮೊದಲ ಅಲೆಗಿಂತಲೂ ಎರಡನೇ ಅಲೆಯೇ ಹೆಚ್ಚು ಗಂಭೀರವಾಗಿದ್ದು, ಊಹಿಸಲಾರದಷ್ಟು ಸಾವು-ನೋವುಗಳು ಕಂಡು ಬರುತ್ತಿವೆ. ಇದಕ್ಕೆ ಜನಸಾಮಾನ್ಯರ ನಿರ್ಲಕ್ಷ್ಯ ಕಾರಣ ಎಂದು ಕೆಲವು ತಜ್ಞರು ಹೇಳಿದರೆ, ಇನ್ನು ಕೆಲವರು ಇದಕ್ಕೆ ಭಾರತದ ಹೊಸ ರೂಪಾಂತ ರಿಯೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಲಸಿಕೆ ನೀಡುವಿಕೆ ಪ್ರಮಾಣ ಹೆಚ್ಚಿಸಿ, ಮಾರ್ಗಸೂಚಿ ನಿರ್ಲಕ್ಷ್ಯ ಮಾಡದೇ ಇದ್ದರೆ 3ನೇ ಅಲೆಯ ತೀವ್ರತೆಯನ್ನು ಕುಗ್ಗಿಸ ಬಹುದು ಎಂದು ಅವರು ಹೇಳಿದ್ದಾರೆ.