ಕಾರವಾರ: ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಜಾಗೃತರಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದರು.
ಡಿಸಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ತಾಲೂಕು ಮಟ್ಟದ ಅಧಿಕಾರಿ ಮತ್ತು ವೈದ್ಯಾಧಿಕಾರಿಗಳೊಂದಿಗೆ ಕೋವಿಡ್ -19 ತಡೆಗಟ್ಟುವ ಕುರಿತು ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯಿಂದ ಗ್ರಾಮಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಮರಳುತ್ತಿದ್ದು, ಹೀಗೆ ಬಂದಂತಹ ವ್ಯಕ್ತಿಗಳ ಅಂಕಿ ಸಂಖ್ಯೆಗಳ ಮಾಹಿತಿಯನ್ನು ಇಡುವುದರೊಂದಿಗೆ ಅವರ ಬಗ್ಗೆ ನಿಗಾವಹಿಸಬೇಕು. ಹೀಗೆ ಬಂದವರಲ್ಲಿ ಉಳಿದುಕೊಳ್ಳಲು ವ್ಯವಸ್ಥೆಗೆ ಸಮಸ್ಯೆ ಆಗಿದೆ ಅನ್ನುವುದು ಕಂಡು ಬಂದರೆ ಸ್ಪಂದಿಸಿ, ಕೋವಿಡ್ ತಪಾಸಣೆಗೊಳಪಡಿಸಬೇಕು. ಒಂದೊಮ್ಮೆ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಬೇಕು. ಯಾವ ಸ್ಥಳದಲ್ಲಿ ಯಾವ ರೀತಿಯ ಸನ್ನಿವೇಶ ಇದೆ ಎಂಬುದನ್ನು ಗಮನಿಸಿ ಎಂದರು.
ಪ್ರತಿ ಗ್ರಾಮದಲ್ಲೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಹೊರಗಡೆಯಿಂದ ಬಂದವರು ಕ್ವಾರಂಟೈನ್ ಆಗುವಂತೆ, ಯಾರೂ ಹೊರಗಡೆ ಓಡಾಡದಂತೆ ಮತ್ತು ಕೊರೊನಾ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಗ್ರಾಪಂ ಮಟ್ಟದಲ್ಲಿ ರಚಿಸಲಾದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕೊರೊನಾ ಹೆಲ್ಪ್ಲೈನ್ ಬಗ್ಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಹೆಲ್ಪ್ಲೈನ್‌ಗಳು 24/7 ಕಾರ್ಯ ನಿರ್ವಹಿಸಬೇಕು. ತುರ್ತು ಕರೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಬೇಕಲ್ಲದೇ ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಹೇಳಿದರು.
ಜಿಪಂ ಸಿಇಒ ಪ್ರಿಯಂಕಾ ಎಂ, ಎಸ್ಪಿ ಶಿವಪ್ರಕಾಶ ದೇವರಾಜ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್. ಕೆ, ಎ.ಸಿ. ವಿದ್ಯಾಶ್ರೀ ಚಂದರಗಿ, ಡಿಎಚ್‌ಒ ಡಾ| ಶರದ ನಾಯಕ, ಜಿಲ್ಲಾ ಆಯುಷ್ ಅಧಿಕಾರಿ ಡಾ| ಲತಾ, ತಹಶೀಲ್ದಾರ್ ಆರ್.ವಿ. ಕಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ| ಸೂರಜ್ ನಾಯಕ, ಕಾರವಾರ ಪೌರಾಯುಕ್ತ ಆರ್ .ಪಿ. ನಾಯ್ಕ ಉಪಸ್ಥಿತರಿದ್ದರು.